ಹೊನ್ನಾವರ: ತಾಲೂಕಿನ ಕಡತೋಕಾ–ಮಾಡಗೇರಿ ಗ್ರಾಮದ ಹಿರಿಯ ನಿವೃತ್ತ ಶಿಕ್ಷಕ, ಸಮಾಜಸೇವಕ ಹಾಗೂ ಸಾಂಸ್ಕೃತಿಕ ಚಿಂತಕ ಶಂಕರ ವೆಂಕಟ್ಟಪ್ಪ ನಾಯ್ಕ (84) ಅವರು ವಯೋಸಹಜ ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ. ಅವರ ನಿಧನವು ಶಿಕ್ಷಣ ಕ್ಷೇತ್ರ, ಸಾಂಸ್ಕೃತಿಕ ವಲಯ ಹಾಗೂ ಸಮಾಜಸೇವಾ ಕ್ಷೇತ್ರಗಳಿಗೆ ಅಪಾರ ನಷ್ಟವನ್ನುಂಟುಮಾಡಿದೆ.
ಮೃತರು ವರದಿಗಾರ ಕಡತೋಕಾ ಮಂಜು ಅವರ ತಂದೆಯಾಗಿದ್ದು, ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅನೇಕ ಶಿಷ್ಯರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ಶಂಕರ ನಾಯ್ಕ ಅವರು ತಮ್ಮ ಶಿಕ್ಷಕ ಜೀವನವನ್ನು ಸಿದ್ದಾಪುರ ತಾಲೂಕಿನ ಕಾನಸೂರು ಪಂಚಾಯತ್ ವ್ಯಾಪ್ತಿಯ ಕೊಡಸಾರ, ಸೋಮಸಾಗರ, ಹೆಬ್ಬಳ್ಳೆಕೊಪ್ಪ ಸೇರಿದಂತೆ ಹಿಂದುಳಿದ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸಮರ್ಪಣಾಭಾವದಿಂದ ನಿರ್ವಹಿಸಿದ್ದರು. ಸಾರಿಗೆ ಸೌಲಭ್ಯಗಳಿಲ್ಲದ ಕಾಲದಲ್ಲಿ ಕಾಲ್ನಡಿಗೆಯಲ್ಲೇ ದೂರದ ಶಾಲೆಗಳಿಗೆ ತೆರಳಿ ಮಕ್ಕಳಿಗೆ ವಿದ್ಯೆಯ ಬೆಳಕು ಹರಡಿದ ಆದರ್ಶ ಶಿಕ್ಷಕರಾಗಿ ಅವರು ಜಿಲ್ಲೆಯಾದ್ಯಂತ ಗೌರವ ಪಡೆದಿದ್ದರು.
ವಿದ್ಯಾಭ್ಯಾಸದೊಂದಿಗೆ ಕಲೆ–ಸಂಸ್ಕೃತಿಯ ಮೇಲಿನ ಆಳವಾದ ಆಸಕ್ತಿಯಿಂದ ಅವರು ನಾಟಕ ಹಾಗೂ ಯಕ್ಷಗಾನ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಪರಿವರ್ತನೆ ಎಂಬ ನಾಟಕವನ್ನು ರಚಿಸಿ ಪ್ರದರ್ಶಿಸಿದ್ದ ಅವರು, ನಾಟಕ ಮತ್ತು ಯಕ್ಷಗಾನ ರಂಗನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು. ನಾಮಧಾರಿ ಸೇವಾ ಸಂಘದ ಸಂಸ್ಥಾಪಕರು, ಊರಕೇರಿ ಪ್ರೌಢಶಾಲೆಯ ಸ್ಥಾಪಕರಾಗಿದ್ದ ಅವರು, ಮಾಡಗೇರಿಯ ಶ್ರೀ ರಾಮನಾಥ ದೇವಾಲಯದ ಸ್ಥಾಪನೆಗೆ ಕಾರಣಕರ್ತರಾಗಿದ್ದರು. ಯಕ್ಷಗಾನ ಕಲಾವಿದರ ಬೆಳೆವಣಿಗೆಗೆ ನಿರಂತರ ಪ್ರೋತ್ಸಾಹ ನೀಡಿದ್ದು ಅವರ ಮತ್ತೊಂದು ಮಹತ್ವದ ಕೊಡುಗೆ.
ಶಿಕ್ಷಕರಿಗೆ ತಮ್ಮ ಮನೆಯಲ್ಲೇ ಊಟ–ವಸತಿ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆಯ ಮಾದರಿಯಾಗಿದ್ದ ಅವರು, ನಿವೃತ್ತಿಯ ನಂತರವೂ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ನಿರಂತರ ತೊಡಗಿಸಿಕೊಂಡಿದ್ದರು. ಮಾಡಗೇರಿಯ ರಾಮನಾಥ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತಿದ್ದರು. ಅಲ್ಲದೆ ಕುಮಟಾದ ಶ್ರೀ ಮಾತಾವೈಭ ಮಹಾಲಕ್ಷ್ಮೀ ಕ್ರೆಡಿಟ್ ಸೌಹಾರ್ದ ನಿಯಮಿತ ಬ್ಯಾಂಕ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಹಕಾರ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು.
ಶಂಕರ ವೆಂಕಟ್ಟಪ್ಪ ನಾಯ್ಕ ಅವರ ಅಗಲಿಕೆಗೆ ವಿವಿಧ ಕ್ಷೇತ್ರಗಳ ಗಣ್ಯರು, ಶಿಕ್ಷಕ ವೃಂದ, ಶಿಷ್ಯರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ