ಹೊನ್ನಾವರ : ಶರಾವತಿಯ ಉಳಿವಿಗಾಗಿ, ರಕ್ಷಣೆಗಾಗಿ ಶರಾವತಿ ಹೆಸರಿನಲ್ಲಿ ನಡೆಯುವ ಪರಿಸರಕ್ಕೆ ಮಾರಕವಾಗಿರುವ ಎಲ್ಲಾ ಯೋಜನೆಗಳನ್ನು ತಡೆಗಟ್ಟುವ ನಿಲುವಿನಲ್ಲಿ ಪಾದಯಾತ್ರೆಯನ್ನು ಸಂಕಲ್ಪ ಮಾಡಿದಂತೆ ಚಾಲನೆ ನೀಡಲಾಗಿದೆ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ದರ್ಮಾಧಿಕಾರಿ ಮಾರುತಿಗುರೂಜಿ ಹೇಳಿದರು.
ಅವರು ಗೇರುಸೊಪ್ಪ ವನವಾಸಿ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಾಸ್ತಪ್ಪ ನಾಯ್ಕ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಪಾದಯಾತ್ರೆಯ ಉದ್ದೇಶ ಯಾವುದೇ ವೈಯಕ್ತಿಕವಾಗಿ ವಿರೋಧಿಸುವಂತದ್ದಲ್ಲ, ಸರ್ಕಾರ ಸಂಪೂರ್ಣ ಯೋಜನೆ ಕೈಬಿಡುವ ಕೆಲಸ ಆಗಬೇಕು. ನಮ್ಮ ಪರಿಸರ ಉಳಿದರೆ, ನದಿ ಉಳಿದರೆ, ಅರಣ್ಯ ಉಳಿದರೆ ನಾವು ಉಳಿಯುತ್ತೇವೆ. ಪಶ್ಚಿಮ ಘಟ್ಟ ಅತಿ ಮಹತ್ವವಾಗಿರುವ ತಾಣ. ಇದು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಂತ ಪಶ್ಚಿಮಘಟ್ಟವಾಗಿದೆ. ಇದರ ರಕ್ಷಣೆ ಆಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಇದರ ವಿರುದ್ದ ಎಲ್ಲರೂ ಕೈಜೋಡಿಸುವ ಅನಿವಾರ್ಯತೆ ಇದೆ ಎಂದರು.
ಪಾದಯಾತ್ರೆಗೆ ಕಾನೂನು ದೃಷ್ಠಿಯಿಂದ ಪರವಾನಗಿ ಕೊಟ್ಟಿಲ್ಲ. ಸ್ವತಂತ್ರ ಭಾರತದಲ್ಲಿ ಹೋರಾಟ ಮಾಡುವ ಹಕ್ಕು ನಮ್ಮಗೆಲ್ಲರಿಗೂ ಇದೆ. ಪಾದಯಾತ್ರೆ ಸಂದರ್ಭದಲ್ಲಿ ಯಾವುದೇ ರೀತಿಯ ಗಲಾಟೆಗಳನ್ನು ಮಾಡದೆ, ಮೌನ ಪ್ರತಿಭಟನೆ ನಮ್ಮದಾಗಿರಲಿ. ಕಾನೂನು ತೊಡಕು ಬರದೆ ಇರುವ ರೀತಿಯಲ್ಲಿ ಪಾದಯಾತ್ರೆ ನಡೆಸೋಣ ಎಂದು ಕರೆ ನೀಡಿದರು.
ಪಾದಯಾತ್ರೆಯ ನೇತೃತ್ವ ವಹಿಸಿದ್ದ ಮಾಸ್ತಪ್ಪ ನಾಯ್ಕ ಬಲಸೆ ಮಾತನಾಡಿ ಪ್ರತಿಭಟನೆಯ ಮೂಲಕ ಮಾತ್ರ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯ ಎನ್ನುವುದು ಸಾಬೀತಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಒತ್ತಾಯಿಸಿ ಪತ್ರ ಚಳುವಳಿ ಆರಂಭಿಸಿ, ರಕ್ತದಲ್ಲಿ ಪತ್ರ ಬರೆದಿದ್ದೇವು. ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಪ್ರತಿಭಟನೆ ನಡೆಸಿ ಆರೋಗ್ಯ ಸಚಿವ ದಿನೇಶ ಗುಂಡುರಾವ್, ಸಚಿವರರಾದ ಸತೀಶ ಜಾರಕಿಹೊಳಿ ಹಾಗೂ ಸಿ.ಎಂ. ಪರವಾಗಿ ಅವರ ಪುತ್ರ ಶಾಸಕರಾದ ಯತಿಂದ್ರ ಇವರ ಬಳಿ ಮನವಿ ನೀಡಲಾಗಿತ್ತು. ನಮ್ಮ ಭಾಗದಲ್ಲಿ ಆಸ್ಪತ್ರೆಯ ಅಗತ್ಯತೆ, ಶರಾವತಿ ಪಂಪ್ಡ ಸ್ಟೊರೆಜ್ ಯೋಜನೆಯಿಂದಾಗುವ ಹಾನಿ ಕುರಿತು ಮಾಹಿತಿ ನೀಡಿದ್ದೇವು. ಇದೆ ಬರುವ ಬಜೆಟ್ ನಲ್ಲಿ ಘೋಷಣೆಯಾಗಬೇಕು ಎಂದು ಒತ್ತಾಯಿಸಿದ ಪರಿಣಾಮ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸಿ.ಎಂ. ಪತ್ರ ಬರೆದಿರುವುದು ನಮ್ಮ ಪ್ರಥಮ ಗೆಲುವಾಗಿದೆ ಎಂದರು.
ಹೋರಾಟ ಮಾಡದೆ ಏನನ್ನು ಪಡೆಯಲು ಸಾಧ್ಯವಿಲ್ಲ. ಸರ್ಕಾರ ಆ ನಿಟ್ಟಿನಲ್ಲಿ ಜನರನ್ನು ತುಳಿಯುವ ಕೆಲಸ ಮಾಡುತ್ತಿದೆ. ಒಂದೊಮ್ಮೆ ಶರಾವತಿ ಯೋಜನೆ ಆದಲ್ಲಿ ಉಪ್ಪು ನೀರು ನುಗ್ಗಿ ಬೆಳೆ ಹಾನಿ ಮಾತ್ರವಲ್ಲದೇ, ಕುಡಿಯಲು ನೀರು ಉಪ್ಪು ನೀರು ಆಗಲಿದೆ. ಇಂದು ಎಲ್ಲರು ಒಟ್ಟಾಗಿ ಪ್ರತಿಭಟನೆ ನಡೆಸಲು ಮುಂದಾದಾಗ ಹೋರಾಟ ಹತ್ತಿಕ್ಕುವ ಕಾರ್ಯವು ನಡೆಯಿತು. ಜನವರಿ ಮೂರರಂದು ಮನವಿ ನೀಡಿದಾಗ ಅನುಮತಿ ನೀಡಿ ಕಳೆದ ಎರಡು ದಿನದ ಹಿಂದೆ ಅನುಮತಿ ನಿರಾಕರಣೆ ಮಾಡುವ ಕಾರ್ಯವು ನಡೆದಿತ್ತು. ಹೋರಾಟ ಮುಂದುವರೆಸುತ್ತೇವೆ ಎಂದರು.
ಬೆಳಗಾವಿಯಿಂದ ಆಗಮಿಸಿದ ರೈತ ಮುಖಂಡ ಯು. ಎ. ಪಾಟೀಲ್ ಮಾತನಾಡಿ ಪಕ್ಷಾತೀತವಾಗಿ, ಸರ್ವಧರ್ಮದವರೆಲ್ಲರೂ ಸೇರಿ ಹೋರಾಟ ನಡೆಸುತ್ತಿದ್ದೇವೆ. ಈ ಭಾಗದ ಜನರ ನೆಮ್ಮದಿ ಕೆಡಿಸುವ ಕಾರ್ಯಕ್ಕೆ ಸರಕಾರ ಮುಂದಾಗಬಾರದು. ಪ್ರವಾಸೊದ್ಯಮಕ್ಕೆ ಹೆಸರಾದ ಈ ತಾಲೂಕಿನಲ್ಲಿ, ಕಮಿಷನ್ ಆಸೆಗೆ ಇಂತಹ ಯೋಜನೆ ತಂದು ಸಾರ್ವಜನಿಕರಿಗೆ ತೊಂದರೆ ಆಗುವ ಕಾರ್ಯಕ್ಕೆ ಮುಂದಾಗಬಾರದು ಎಂದರು.
ಪಾದಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಗೇರುಸೊಪ್ಪ ವನವಾಸಿ ಸೀತಾರಾಮಚಂದ್ರ ದೇವಸ್ಥಾನದಿಂದ ಹೊರಟ ಪಾದಯಾತ್ರೆ ಹೆದ್ದಾರಿ ಮೂಲಕ ಹಡಿನಬಾಳದ ತನಕ ಆಗಮಿಸಿದ್ದು, ಗುರುವಾರ ಬೆಳಿಗ್ಗೆ ಹಡಿನಬಾಳದಿಂದ ಹೊರಟುತಹಸೀಲ್ದಾರ್ ಕಚೇರಿ ತಲುಪಿ ಮನವಿ ಕೊಡಲಿದ್ದಾರೆ.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ