March 2, 2026

ಸೋಡಿಗದ್ದೆ ಶ್ರೀ ಮಹಾಸತಿ ದೇವಿಗೆ ಸಾವಿರಾರು ಭಕ್ತರಿಂದ ಕೆಂಡಸೇವೆ ಹರಕೆ

ಭಕ್ತಿಭಾವದ ಜಾತ್ರೆ: ಸೋಡಿಗದ್ದೆ ಶ್ರೀ ಮಹಾಸತಿ ದೇವಿಗೆ ಸಾವಿರಾರು ಭಕ್ತರ ಹರಕೆ

ಭಟ್ಕಳ:ತಾಲೂಕಿನ ಇತಿಹಾಸ ಪ್ರಸಿದ್ದ ಶಕ್ತಿಕ್ಷೇತ್ರವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರಾ ಮಹೋತ್ಸವವೂ ಶುಕ್ರವಾರದಂದು ವಿಜೃಂಭಣೆಯಿಂದ ಆರಂಭವಾಗಿದೆ. ಮೊದಲ ದಿನ ಹಾಲಹಬ್ಬ ಆಚರಿಸಿದ ಭಕ್ತರು, 2ನೇ ದಿನವಾದ ಸಂಪ್ರದಾಯದ ಕೆಂಡಸೇವೆ ಹರಕೆಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಒಂದಾದ ಭಟ್ಕಳದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯಲ್ಲಿ ದೇವರ ಸಂಪ್ರದಾಯದ ಕೆಂಡಸೇವೆಯ ಹರಕೆಯನ್ನು ಸಾವಿರಕ್ಕೂ ಅಧಿಕ ಭಕ್ತರು ಸಲ್ಲಿಸಿದರು.


ಕೆಂಡದ ಮೇಲೆ ನಡೆಯುವ ಮೂಲಕ ಶ್ರದ್ಧಾ ಭಕ್ತಿಯಿಂದ ಹರಕೆ ತೀರಿಸಿದ ಭಕ್ತರು:ಬೆಳಗ್ಗೆ ದೇವಸ್ಥಾನದ ಮುಂಭಾಗದ ಪ್ರಾಂಗಣದಲ್ಲಿ ಸಿದ್ದಪಡಿಸಿದ ಆಳೆತ್ತರದ ಕಟ್ಟಿಗೆ ರಾಶಿಯಿಂದಾಗುವ ಕೆಂಡವನ್ನು ಹಾಯುವುದು ಕೂಡ ರೋಮಾಂಚನವೇ ಸರಿ. ಈ ಸಂದರ್ಭದಲ್ಲಿ ಭಕ್ತರಿಂದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಗೆ ಸಲ್ಲಿಸುವ ಹರಕೆಗಳಲ್ಲಿ ಸಂಪ್ರದಾಯದ ಕೆಂಡಸೇವೆ ಪ್ರಮುಖವಾದದು. ತಮ್ಮ ಕಷ್ಟ ಪರಿಹಾರವಾದಲ್ಲಿ ದೇವಿಗೆ ಕೆಂಡಸೇವೆ ಸಲ್ಲಿಸುವುದಾಗಿ ಹೇಳಿಕೊಂಡಿದ್ದ ಭಕ್ತರು, ಕೆಂಡದ ಮೇಲೆ ನಡೆಯುವ ಮೂಲಕ ಶ್ರದ್ದಾಭಕ್ತಿಯಿಂದ ಹರಕೆ ತೀರಿಸಿದರು.


ಈ ಕೆಂಡಸೇವೆಯ ವಿಶೇಷವೆಂದರೆ ಭಕ್ತರ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವುದಾಗಿದ್ದು, ಹರಕೆ ಹೊತ್ತ ಭಕ್ತರ ಅವರ ಸಮಸ್ಯೆ ಪರಿಹಾರವಾದ ನಂತರ ಈ ಜಾತ್ರೆಯ ಕೆಂಡ ಸೇವೆಯನ್ನು ಮಾಡಲಿದ್ದು, ಮುಂದಿನ ದಿನದಲ್ಲಿ ಕುಟುಂಬಕ್ಕಾಗಲಿ, ವೈಯಕ್ತಿಕವಾಗಲಿ, ಯಾವುದೇ ಕಷ್ಟಬಾರದಿರಲಿ ಎಂದು ಬೇಡಿಕೊಳ್ಳುತ್ತಾರೆ. ಈಗಾಗಲೇ ಹರಕೆ ಹೊತ್ತು ತಮ್ಮ ಇಷ್ಟಾರ್ಥ ಸಿದ್ಧಿಸಿದ ಭಕ್ತರು ಪ್ರತಿ ವರ್ಷ ನಡೆಯುವ ಜಾತ್ರೆಗೆ ಬಂದು ಹರಕೆ ತೀರಿಸುತ್ತಾರೆ.


ರಾಜ್ಯಾದಂತ್ಯ ಹೆಸರುವಾಸಿಯಾಗಿರುವ ಶ್ರೀ ಮಹಾಸತಿ ದೇವಿಯ ದೇವಸ್ಥಾನ:ದಿನದಿಂದ ದಿನಕ್ಕೆ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ದೇವಸ್ಥಾನ ರಾಜ್ಯದಂತ್ಯ ಹೆಸರುವಾಸಿಯಾಗಿದೆ, ಭಕ್ತರು ದೇವಿಯ ಆರ್ಶೀವಾದ ಪಡೆಯಲು ಆಗಮಿಸುತ್ತಿದ್ದಾರೆ, ಜಾತ್ರೆಯ ವೇಳೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣಸಿಗುತ್ತಿದೆ. ಇನ್ನು ಭಟ್ಕಳದಲ್ಲಿ ಸೇವೆ ಸಲ್ಲಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಸಹ ಇಲ್ಲಿಗೆ ಬಂದು ಅವರ ಮನಸಿನ ಇಷ್ಟಾರ್ಥಕ್ಕೆ ಕೆಂಡ ಸೇವೆ ಮಾಡಿರುವುದುಂಟು.


ಈ ವರ್ಷದ ಮಹಿಳೆಯರು, ಮಕ್ಕಳ ಸಂಖ್ಯೆಯೇ ಹೆಚ್ಚಿದ್ದು, ದೇವಿಯ ಹರಕೆಯನ್ನು ಕೆಂಡಸೇವೆಯ ಮೂಲಕ ಸಲ್ಲಿಸಿದರು. ಜಾತ್ರೆ ಪ್ರಾರಂಭವಾಗಿ ಎರಡು ದಿನಗಳಾಗಿದ್ದು, ಈಗಲೇ ದೇವಿಯ ದರ್ಶನಕ್ಕೆ ಕಿಕ್ಕಿರಿದು ಸೇರುತ್ತಿರುವ ಭಕ್ತರ ಸಂಖ್ಯೆ ದೇವಿಯ ಮಹಾತ್ಮೆಯನ್ನು ತಿಳಿಸುತ್ತದೆ. ಸೋಡಿಗದ್ದೆ ಜಾತ್ರೆಗೆ ದೂರದ ಊರುಗಳಿಂದ ಬರುವ ಭಕ್ತರ ಜತೆಗೆ, ಸ್ಥಳೀಯವಾಗಿ ಜಾತ್ರೆಗೆ ಬರುವ ಭಕ್ತರಿಂದ ಸಂಜೆಯಾದೊಡನೆ ಸೋಡಿಗದ್ದೆಯಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯಲು ಸರತಿಸಾಲಿನಲ್ಲಿ ನಿಂತು ಕಾಯುತ್ತಿರುತ್ತಾರೆ.


ಜಾತ್ರೆಯ ಕೆಂಡ ಸೇವೆಗೆ, ಬರುವಂತಹ ಎಲ್ಲ ಭಕ್ತರಿಗೆ ದೇವಸ್ಥಾನದಲ್ಲಿ ಸಾಕಷ್ಟು ಸ್ವಯಂ ಸೇವಕರು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದು, ಭಕ್ತರಿಗಾಗಿ ಮಜ್ಜಿಗೆ, ಪಾನಕವನ್ನು ವಿತರಿಸಿದ್ದಾರೆ. ಇನ್ನು ಹರಕೆ ತೀರಿಸಿದ ಸಾವಿರಾರು ಭಕ್ತರು ದೇವಿಯ ಆರ್ಶೀವಾದ ಪಡೆದರು. ಇನ್ನು ಈ ಜಾತ್ರೆ, 9 ದಿನಗಳ ಕಾಲ ನಡೆಯಲಿದೆ.

About The Author

error: Content is protected !!