March 4, 2026

ತಾಲೂಕ ಆಡಳಿತ ಹಾಗೂ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ  ಗಣರಾಜ್ಯೋತ್ಸವ ಕಾರ್ಯಕ್ರಮ

ಹೊನ್ನಾವರ: ಶಾಸಕಾಂಗ, ಕಾರ್ಯಾಂಗ, ನ್ಯಾಯಂಗ ಹೇಗೆ ಕರ್ತವ್ಯ ನಿರ್ವಹಿಸಬೇಕು ಎನ್ನುವ ಸಮಗ್ರ ಮಾಹಿತಿಯ ಗುಚ್ಚವೇ ಭಾರತದ ಸಂವಿಧಾನವಾಗಿದೆ ಎಂದು ತಹಶೀಲ್ದಾರ ಪ್ರವೀಣ ಕರಾಂಡೆ ಅಭಿಪ್ರಾಯಪಟ್ಟರು.

ತಾಲೂಕ ಆಡಳಿತ ಹಾಗೂ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪೊಲೀಸ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೇರವೇರಿಸಿದರು.

ಭಾರತವನ್ನು ವಿವಿಧತೆಯಲ್ಲಿ ಏಕತೆ ಸಾಧಿಸಿರುವ ವಿಶಿಷ್ಟ ದೇಶ ಎಂದು ಕರೆಯಲಾಗುತ್ತಿದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುವ ಐಕ್ಯತಾ ಭಾವ ಬಲವಾದರೆ ದೇಶ ಪ್ರಗತಿಯನ್ನು ಸಾಧಿಸಲು ಸಾಧ್ಯ. ನಮ್ಮ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕ ರಂಗದಲ್ಲಿ ಅಪಾರ ಯಶಸ್ಸನ್ನು ಸಾಧಿಸಿದೆ. ನಮ್ಮ ರಾಷ್ಟ್ರ, ರಾಷ್ಟ್ರಧ್ವಜ, ರಾಷ್ಟ್ರ ಗಡಿ ಹಾಗೂ ಸಂವಿಧಾನವನ್ನು ನಾವು ಗೌರವಿಸಬೇಕು. ರಾಷ್ಟ್ರದ ಸಂಸ್ಕೃತಿಯನ್ನು ನಾವು ಕಾಪಾಡಿಕೊಳ್ಳಬೇಕು. ಸಮಗ್ರ ರಾಜ್ಯದ ಐಕ್ಯತೆ ಸರ್ವಾಂಗೀಣ ಅಭಿವೃದ್ಧಿ ಹಾಗೂ ದೇಶದ ಭದ್ರತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಅದರಂತೆ ನಾವೆಲ್ಲ ಭಾರತೀಯರು ಎಂಬ ಐಕ್ಯತೆ ಸಾಧಿಸಿ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಹಾಗು ರಾಷ್ಟ್ರದ ರಕ್ಷಣೆಗೆ ಹೋರಾಡಲು ನಾವೆಲ್ಲ ಕಂಕಣ ಬದ್ಧರಾಗೋಣ ಎಂದರು. ಭಾರತ ಪುಣ್ಯಭೂಮಿಯಾಗಿದ್ದು, ಜಾತಿ, ಧರ್ಮ ಭಾಷೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ಮಾಡಿಸಿಕೊಳ್ಳದೇ ನಾವೆಲ್ಲರು ಒಂದೇ ಎನ್ನುವ ಭಾವನೆ ಮೂಡಿಸಿಕೊಳ್ಳೋಣ. ಯುವಶಕ್ತಿ ದುರಾಸೆ ಹಾಗೂ ದುಶ್ಚಟಗಳಿಗೆ ಬಲಿಯಾಗದೇ, ದೇಶಕೊಸ್ಕರ ದುಡಿಯೋಣ. ದೇಶ ನಮಗೇನು ನೀಡಿದೆ ಎನ್ನುವುದಕ್ಕಿಂತ ದೇಶಕ್ಕೆ ನಾವು ನಮ್ಮ ಕರ್ತವ್ಯ ಪಾಲಿಸೋಣ ಎಂದರು.

    ಪೊಲೀಸ್ ,ಗ್ರಹರಕ್ಷಕದಳ ಇಲಾಖೆ, ವಿವಿಧ ಶಾಲಾ ಕಾಲೇಜಿನ ಸ್ಕೌಟ್ ಗೈಡ್ಸ, ಎನ್.ಸಿ.ಸಿ ಘಟಕದಿಂದ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ರೆಡಕ್ರಾಸ್ ಸಂಸ್ಥೆಯ ವತಿಯಿಂದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ, ಗ್ರೇಡ್ ೨ ತಹಶೀಲ್ದಾರ ಉಷಾ ಪಾವಸ್ಕರ್, ಗ್ಯಾರಂಟಿ ಯೋಜನೆಯ ತಾಲೂಕ ಅಧ್ಯಕ್ಷ ಸತೀಶ ನಾಯ್ಕ, ಸಿಪಿಐ ಸಿದ್ದರಾಮೇಶ್ವರ, ಬಿಇಓ ವಿನಾಯಕ ಅವಧಾನಿ, ನಿವೃತ್ತ ಉಪನ್ಯಾಸಕ ಡಾ.ಜಿ.ಪಿ.ಪಾಠಣಕರ್, ವಕೀಲ ಸಂಘದ ಅಧ್ಯಕ್ಷ  ವಿ.ಎಂ.ಭಂಡಾರಿ, ಕಾರ್ಯದರ್ಶಿ ಉದಯ ನಾಯ್ಕ, ಪ.ಪಂ. ಮಾಜಿ ಸದಸ್ಯ ಶಿವರಾಜ ಮೇಸ್ತ, ತಾರಾ ಕುಮಾರಸ್ವಾಮಿ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು. ಯುವಜನ ಸೇವಾಕ್ರೀಡಾಧಿಕಾರಿ ಸುಧೀಶ ನಾಯ್ಕ, ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.

About The Author

error: Content is protected !!