March 1, 2026

ಖ್ಯಾತ ಕ್ರೀಡಾಪಟು ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಸೀತಾರಾಮ ಬಲಿಮನೆ ನಿಧನ


ಖ್ಯಾತ ಕ್ರೀಡಾಪಟು ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಸೀತಾರಾಮ ಬಲಿಮನೆಯವರು ದಿನಾಂಕ 27.01.2026ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 67 ವರ್ಷ ವಯಸ್ಸಾಗಿತ್ತು.
ಇವರು ತಮ್ಮ ಹೆಂಡತಿ ಶಿಕ್ಷಕಿ ಶಕುಂತಲಾ ಶೆಟ್ಟಿ ಮತ್ತು ಮಗ ರಾಹುಲ ಬಲಿಮನೆ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುಬ್ರಹ್ಮಣ್ಯ ಬಲಿಮನೆಯವರು ಒಬ್ಬ ಅತ್ಯುತ್ತಮ ಕ್ರೀಡಾಪಟು ಮಾತ್ರ ಆಗಿರದೆ, ಸದಾ ವಿದ್ಯಾರ್ಥಿಗಳಿಗೆ ಯುವಜನರಿಗೆ ತರಬೇತಿ ಮತ್ತು ಮಾರ್ಗದರ್ಶನ ಮಾಡುವ ಕಾಯಕದಲ್ಲೂ ತೊಡಗಿಸಿಕೊಂಡಿದ್ದರು.
70-80ರ ದಶಕದಲ್ಲಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿ ಆಗಿದ್ದ ಇವರು ಪ್ರತಿವರ್ಷ ಕಾಲೇಜು ವೀರಾಗ್ರಣಿ ಪ್ರಶಸ್ತಿ ಪಡೆಯಲು ಕಾರಣರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ ಯೂನಿವರ್ಸಿಟಿ ಬ್ಲೂ ಆಗಿ ಕೂಡ ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದರು.
ಮೂಲತಹ ಹೊನ್ನಾವರ ತಾಲೂಕಿನ ರಾಯಲ್ ಕೇರಿಯ ಬಲಿಮನೆ ಕುಟುಂಬದ ಕುಡಿಯಾದ ಸುಬ್ರಹ್ಮಣ್ಯ ಬಲಿಮನೆಯವರು ಭಟ್ಕಳದ ಕರಾವಳಿ ಹೈಸ್ಕೂಲಿನಲ್ಲಿ 22 ವರ್ಷ ಮತ್ತು ಅರೇಂಗಡಿಯ ಎಸ್.ಕೆ.ಪಿ.ಸಂಯುಕ್ತ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿ ನಂತರವೂ ಅದೇ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದರು.


ಸದಾ ಬಡ ವಿದ್ಯಾರ್ಥಿಗಳ ಬಗ್ಗೆ ಕಳಕಳಿ ಹೊಂದಿದ ಇವರು, ಓದಿನಲ್ಲಿ ಆರ್ಥಿಕ ತೊಂದರೆಯಾದರೆ ಧನಸಹಾಯ ಮಾಡುವ ಮತ್ತು ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದರು. ಗಂಭೀರ ಸ್ವಭಾವದ ಇವರು ಮುಗ್ಧ ಮನಸ್ಸನ್ನು ಹೊಂದಿದ್ದರು. ಒಬ್ಬ ರಾಜ್ಯಮಟ್ಟದ ಉತ್ತಮ ಕ್ರೀಡಾಪಟುವಾಗಿದ್ದರೂ ಯಾವುದೇ ಹಮ್ಮು ಬಿಮ್ಮು ತೋರಿಸದ ಸರಳ ವ್ಯಕ್ತಿಯಾಗಿದ್ದರು. ರಾಜ್ಯಮಟ್ಟದ ಪೋಲ್ವಾಲ್ಟ್ ಆಟಗಾರನಾದ ಇವರು, ಇದರ ತರಬೇತಿಯನ್ನು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಆ ಕಾಲಘಟ್ಟದಲ್ಲಿಯೇ ತಯಾರು ಮಾಡಿದ ಪ್ರಯತ್ನಕ್ಕೆ ಒಂದು ಸಲಾಂ ಹೇಳಲೇಬೇಕು.
ಸೌಮ್ಯ ಸ್ವಭಾವದ, ಕ್ರೀಡಾ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕರಾದ ದಿ. ಸುಬ್ರಹ್ಮಣ್ಯ
ಬಲಿಮನೆಯವರಿಗೆ ಸಂತಾಪ ಸಲ್ಲಿಸುವುದು ಮಾತ್ರ, ಸದ್ಯ ನಮ್ಮ ಮುಂದೆ ಉಳಿದಿರುವುದು.
ಇವರ ನಿಧನಕ್ಕೆ ಶಾಸಕ ದಿನಕರ ಕೆ ಶೆಟ್ಟಿ, ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ, ರಮೇಶ ಭಂಡಾರಿ ಕಾರವಾರ, ಹೊನ್ನಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಚ್.ಗೌಡ, ಮಹೇಶ ಭಂಡಾರಿ ಕೆರೆಕೋಣ, ಕೇಶವ ಶೆಟ್ಟಿ, ಹರೀಶ ಭಂಡಾರಿ ಹಿರೇಬೈಲ, ಎಸ್ ಕೆ ಪಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಪ್ರಕಾಶ ನಾಯ್ಕ, ಶಿಕ್ಷಕ ಉದಯ ನಾಯಕ, ಸಂತೋಷ ಬಲಿಮನೆ, ಸುರೇಶ ಕಲ್ಮನೆ, ವಿಠ್ಠಲ ಶೆಟ್ಟಿ, ರಾಜೇಶ ಶೆಟ್ಟಿ ಮುರುಡೇಶ್ವರ, ಮಂಜುನಾಥ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

About The Author

error: Content is protected !!