ಕೆಆರ್ ಪೇಟೆ: ಯುವಜನರು ಹಾಗೂ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತಗಳಿಂದ ಮುಕ್ತರಾಗಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು ಎಂದು ಕೆ.ಆರ್. ಪೇಟೆ ಪಟ್ಟಣದ ಜೆಎಂಎಫ್ಸಿ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ರಾದ ಸುಧೀರ್ ಮನವಿ ಮಾಡಿದರು. ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದಲ್ಲಿ ನಾಗಮಂಗಲದ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪಟ್ಟಣ ಪೋಲೀಸರು ಸಂಯುಕ್ತವಾಗಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
18 ವರ್ಷ ತುಂಬದೇ ಇರುವ ಯುವ ಜನರು ಹಾಗೂ ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳು ಸೇರಿದಂತೆ ಯಾವುದೇ ವಾಹನಗಳನ್ನು ಚಾಲನೆ ಮಾಡಬಾರದು. ವಾಹನ ಚಾಲನಾ ಪರವಾನಗಿಯನ್ನು ಹೊಂದಿಲ್ಲದೆ ವಾಹನ ಚಾಲನೆ ಮಾಡುವುದು ಕಾನೂನಿನ ಪ್ರಕಾರ ಅಕ್ಷಮ್ಯವಾದ ಅಪರಾಧವಾಗಿದೆ. ವಾಹನ ಚಾಲನಾ ಪರವಾನಗಿ ಹೊಂದಿಲ್ಲದೆ ಅಪಘಾತ ನಡೆಸಿದರೆ, ವಾಹನಗಳ ಮಾಲೀಕರು ತೀವ್ರ ಸಂಕಷ್ಟವನ್ನು ಎದುರಿಸ ಬೇಕಾಗುತ್ತದೆ ಆದ್ದರಿಂದ ಪೋಷಕರು ತಮ್ಮ ಮಕ್ಕಳು ವಾಹನ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು ದ್ವಿಚಕ್ರವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವ ಜೊತೆಗೆ ಮೊಬೈಲ್ ಫೋನಿನಲ್ಲಿ ಸಂಭಾಷಣೆ ಮಾಡಬಾರದು ಎಂದು ಕಿವಿಮಾತು ಹೇಳಿದ ನ್ಯಾಯಾಧೀಶರು ಕಾರುಗಳನ್ನು ಚಾಲನೆ ಮಾಡುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ ಸುರಕ್ಷಿತವಾಗಿ ಚಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ನಾಗಮಂಗಲದ ಪ್ರಾದೇಶಿಕ ಸಾರಿಗೆ ಇಲಾಖೆಯ ಸಹಾಯಕ ಸಾರಿಗೆ ಅಧಿಕಾರಿಗಳಾದ ಹೊನ್ನೇಗೌಡ ಮಾತನಾಡಿ ಸಾರಿಗೆ ಇಲಾಖೆಯು ಶ್ರೀಸಾಮಾನ್ಯರು ಸೇರಿದಂತೆ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಅಪಘಾತ ರಹಿತವಾದ ಚಾಲನೆ ಮಾಡುವಂತೆ ಆಗಾಗ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದರು ಯುವಜನರು ಹೆಲ್ಮೆಟ್ ಧರಿಸದೆ ಅತಿ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಅಪಘಾತ ಸಂಭವಿಸಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಆದ್ದರಿಂದ ಯುವಜನರು ಮತ್ತು ವಿದ್ಯಾರ್ಥಿಗಳು ಸುರಕ್ಷಿತವಾದ ವಾಹನ ಚಾಲನೆಗೆ ಆದ್ಯತೆ ನೀಡುವ ಜೊತೆಗೆ ವಾಹನಗಳ ದಾಖಲೆಗಳನ್ನು ಇಟ್ಟುಕೊಂಡು ವಾಹನ ಚಾಲನಾ ಪರವಾನಗಿಯನ್ನು ಪಡೆದುಕೊಂಡ ನಂತರವೇ ತಮ್ಮ ವಾಹನಗಳನ್ನು ತೆಗೆದುಕೊಂಡು ರಸ್ತೆಗೆ ಇಳಿಯಬೇಕು ಎಂದು ಕಿವಿಮಾತು ಹೇಳಿದರು.

ನಾಗಮಂಗಲ ಡಿವೈಎಸ್ ಪಿ ಚೆಲುವರಾಜು, ಅಪರ ಸಿವಿಲ್ ನ್ಯಾಯಾಧೀಶರಾದ ದೇವರಾಜು, ಅರ್ಪಿತಾ, ಪಾರ್ವತಿ, ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಸುಮಾರಾಣಿ, ಗ್ರಾಮಾಂತರ ಠಾಣೆಯ ಆನಂದೇಗೌಡ, ಹಿರಿಯ ವಕೀಲರಾದ ಕೆ.ಆರ್. ಮಹೇಶ್, ಎಂ.ಆರ್.ಪ್ರಸನ್ನ ಕುಮಾರ್, ಕೆ.ಎನ್.ನಾಗರಾಜು, ಎನ್.ಆರ್.ರವಿಶಂಕರ್, ಸಹಾಯಕ ಸಾರಿಗೆ ಅಧಿಕಾರಿಗಳಾದ, ಸತೀಶ್, ಶಹಬಾಜ್ ಖಾನಂ, ನಂದೀಶ್, ಹಂಪಾ, ಸಂಜಯ್ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಘೋಷಣೆ ಕೂಗಿ ಶ್ರೀ ಸಾಮಾನ್ಯರಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಸೊಳ್ಳೇಪುರ ಹಾಲು ಉತ್ಪಾದಕ ಸಹಕಾರ ಸಂಘ ಕಾಂಗ್ರೆಸ್ ವಷಕ್ಕೆ
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ ಉತ್ಸವ-2026
ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ