ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರ ಕೋಟದಮಕ್ಕಿ ಗ್ರಾಮದ ಜನಾರ್ಧನ ರಾಮದಾಸ ದೇವಾಡಿಗ ಅವರು ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಗೌರವಯುತ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದರು. ಈ ಹಿನ್ನೆಲೆಯಲ್ಲಿ ಮುರ್ಡೇಶ್ವರದಲ್ಲಿ ಅವರಿಗೆ ಭವ್ಯ ಹಾಗೂ ಆತ್ಮೀಯ ಸ್ವಾಗತ ನೀಡಲಾಯಿತು.
ರಾಮದಾಸ ದೇವಾಡಿಗ ಹಾಗೂ ಶ್ರೀಮತಿ ಸೀತಾ ಅವರ ಪುತ್ರರಾದ ಜನಾರ್ಧನ ದೇವಾಡಿಗರು ರಾಜಸ್ಥಾನ, ಪಂಜಾಬ್, ಜಮ್ಮು–ಕಾಶ್ಮೀರ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿ ದೇಶಸೇವೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ನಿವೃತ್ತಿಯನ್ನು ಸ್ಮರಿಸುವ ಉದ್ದೇಶದಿಂದ ಕೋಟದಮಕ್ಕಿ ಗ್ರಾಮದ ಸ್ನೇಹ ಯುವಕ ಸಂಘದ ವತಿಯಿಂದ ಅದ್ದೂರಿ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷ ಶ್ರೀ ಜಗದೀಶ ದೇವಾಡಿಗ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಮುರ್ಡೇಶ್ವರದ ಮುಖ್ಯ ದ್ವಾರದಿಂದ ಸ್ವಗೃಹದವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಗ್ರಾಮಸ್ಥರು ದೇಶಭಕ್ತಿಯ ಘೋಷಣೆಗಳೊಂದಿಗೆ ನಿವೃತ್ತ ಸೈನಿಕರನ್ನು ಹರ್ಷದಿಂದ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ದೇವಾಡಿಗ ಸಮಾಜದ ಅಧ್ಯಕ್ಷ ಶ್ರೀ ಲಕ್ಷಣ ಕೋಟದಮಕ್ಕಿ, ದೇವಾಡಿಗ ಯುವ ವೇದಿಕೆಯ ಅಧ್ಯಕ್ಷ ಶ್ರೀ ನಾಗರಾಜ ದೇವಾಡಿಗ (ನೆರಿಕುಳಿ), ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ನಿವೃತ್ತ ಸೈನಿಕರಿಗೆ ಗೌರವ ಸಲ್ಲಿಸಿ ಶುಭಾಶಯ ಕೋರಿದರು.
ಇದೇ ಸಂದರ್ಭದಲ್ಲಿ ಭಟ್ಕಳ ತಾಲೂಕಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀ ಎಂ.ಡಿ. ಪಕ್ಕಿ, ಕಾರ್ಯದರ್ಶಿ ಶ್ರೀ ಶ್ರೀಕಾಂತ ನಾಯ್ಕ ಹಾಗೂ ಸದಸ್ಯರಾದ ಶ್ರೀ ರವೀಂದ್ರ ನಾಯ್ಕ, ಶ್ರೀ ವಾಸು ಮೊಗೇರ, ಶ್ರೀ ಗಣಪತಿ ಮೊಗೇರ ಮತ್ತು ಶ್ರೀ ರಾಜೇಶ ದೇವಾಡಿಗ ಅವರು ಸ್ವಗೃಹಕ್ಕೆ ಭೇಟಿ ನೀಡಿ ಶಾಲು ಹೊದಿಸಿ, ಮಾಲಾರ್ಪಣೆ ಮಾಡುವ ಮೂಲಕ ಗೌರವಿಸಿದರು.
ನಿವೃತ್ತ ಸೈನಿಕರಿಗೆ ನೀಡಿದ ಆತ್ಮೀಯ ಸ್ವಾಗತಕ್ಕೆ ಸ್ನೇಹ ಯುವಕ ಸಂಘದ ಪದಾಧಿಕಾರಿಗಳು, ಊರಿನ ಗಣ್ಯರು ಹಾಗೂ ಸಮಸ್ತ ಗ್ರಾಮಸ್ಥರಿಗೆ ಮಾಜಿ ಸೈನಿಕರ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ