March 1, 2026

ಗೋದಾವರಿ ಗೌರವಕ್ಕೆ ಪ್ರಖ್ಯಾತ ವಾಗ್ಮಿ – ಲೇಖಕ ಮಂಜುನಾಥ ಬರ್ಗಿ


ಅಭಿಜಾತ ಯಕ್ಷ ನಟನ ಮುಡಿಗೇರಿದ ಯಕ್ಷ ಕಿರೀಟ
ಮಿರ್ಜಾನ್ : ರಾಷ್ಟ್ರೀಕೃತ ಬ್ಯಾಂಕುಗಳ ನಂತರದಲ್ಲಿ ತನ್ನ ವ್ಯವಹಾರ, ಸಿಬ್ಬಂದಿಗಳ ವೇತನ ಹಾಗೂ ಸೇವಾ ಭದ್ರತೆಯ ವಿಷಯದಲ್ಲಿ ರಾಜ್ಯದಲ್ಲಿಯೇ ನಂಬರ್ ಒನ್ ಎನಿಸಿದ ಗೋದಾವರಿ ಸಮೂಹ ಸಂಸ್ಥೆಯ ಹಿರಿಮೆಗೆ ಗರಿಯಾದ 2026 ರ ” ಗೋದಾವರಿ ಗೌರವ ” ವನ್ನು ನಾಡಿನ ಹೆಸರಾಂತ ಬಹುಮುಖ ಪ್ರತಿಭೆಯ ವಿದ್ವಾಂಸರಾದ ಮಂಜುನಾಥ ಗಾಂವಕರ್ ಬರ್ಗಿಯವರಿಗೆ ಪ್ರದಾನಗೊಳಿಸಲಾಯಿತು.

ಹಲವಾರು ಸಾಧಕರನ್ನು ಗುರುತಿಸಿ – ಸಮ್ಮಾನಿಸುತ್ತಲೇ ಬಂದಿರುವ ಗೋದಾವರಿಯು ಈ ವರ್ಷದಿಂದ ಪ್ರತಿ ವರ್ಷವೂ ಗಣರಾಜ್ಯೋತ್ಸವದ ದಿನದಂದು ನಾಡಿನ ಬಹುಮಾನ್ಯವಾದ ಅಸಾಮಾನ್ಯವಾಗಿರುವ ವಿದ್ಯುತ್ಪ್ರತಿಭೆಯೋರ್ವರನ್ನು ಗುರುತಿಸಿ, ಅಪರೂಪದ ಸ್ಮರಣಿಕೆ – ಫಲಕಗಳೊಂದಿಗೆ ಗೌರವಿಸಿ, ದಾಖಲೆಯನ್ನಾಗಿಸುವ ನಿಟ್ಟಿನಲ್ಲಿ ಹುಟ್ಟು ಹಾಕಿರುವುದೇ ಈ ಗೋದಾವರಿ ಗೌರವವಾಗಿದೆ.


ಚೊಚ್ಚಿಲ ಗೋದಾವರಿ ಗೌರವಕ್ಕೆ ಮಂಜುನಾಥ ಬರ್ಗಿ :
ಕುಮಟಾ ತಾಲ್ಲೂಕಿನ ಬರ್ಗಿಯ ನಿವಾಸಿ ಹಾಗೂ ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವ್ಕರ್ ಬರ್ಗಿಯವರು ಐದು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದವರು. ಪಿಎಚ್ಡಿಯೊಂದಿಗೆ ಕಲಿಕೆಯನ್ನು ಮುಂದುವರಿಸಿದವರು. ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಪೇಲೋಶಿಪ್ ನ ಅಡಿಯಲ್ಲಿ ಮಕ್ಕಳ ಒತ್ತಡ ನಿರ್ವಹಣೆ ಎಂಬ ವಿಷಯದ ಕುರಿತು ಕಿರು ಸಂಶೋಧನೆಯನ್ನು ಕೈಗೊಂಡವರು. ಈಗಾಗಲೇ ಅನೇಕ ವೈವಿಧ್ಯಮಯವಾದ ಸಾಹಿತ್ತಿಕ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಕೊಟ್ಟವರು. ಹತ್ತಾರು ರಚನಾತ್ಮಕ ಸಂಘಟನೆಗಳನ್ನು ಹುಟ್ಟು ಹಾಕಿದವರು. ನೂರಾರು ಸಂಘಟನೆಗಳೊಂದಿಗೆ ಸಕ್ರಿಯವಾಗಿದ್ದವರು. ಸಾಗರ ಸಾಮ್ರಾಟದ “ಮಂಜುಮಯ” ಅಂಕಣದ ಮೂಲಕ ಮನೆಮಾತಾದವರು. ಹತ್ತಾರು ಪ್ರಶಸ್ತಿ – ಪುರಸ್ಕಾರಗಳಿಗೆ ಪಾತ್ರರಾದವರು
ಪ್ರಖ್ಯಾತ ವಾಗ್ಮಿಯಾಗಿ, ಅಪ್ರತಿಮ ಲೇಖಕರಾಗಿ, ಬಹುಮುಖಿ ಚಿಂತಕರಾಗಿ, ಅದ್ಭುತ ಸಂಘಟಕರಾಗಿ, ಹೆಸರಾಂತ ಯಕ್ಷ ನಟರಾಗಿ ಹಾಗೂ ಸೇವಾ – ಕಾನೂನು ತಜ್ಞರಾಗಿ ವರ್ಣಮಯ ವ್ಯಕ್ತಿತ್ವದ ಮೂಲಕ ನಾಡಿನ ಗಮನವನ್ನು ಸೆಳೆದ ಅಪರೂಪದ ವಿದ್ವತ್ ಪ್ರತಿಭೆಯಾದ ಬರ್ಗಿಯವರ ಅನನ್ಯ ವ್ಯಕ್ತಿತ್ವಕ್ಕೆ ಮಣಿದು ಅವರಿಗೆ 2026ರ ಗೋದಾವರಿ ಗೌರವವನ್ನಿತ್ತು ಗೌರವಿಸಲಾಯಿತು.


ಗೋದಾವರಿ ಗೌರವವು ತನ್ನ ಸಾಧನೆಗೆ ಸಂದ ಗೌರವವೆಂದೆಣಿಸದೇ, ಸಾಧಿಸಬೇಕಾಗಿದ್ದನ್ನು ಬೇಕಷ್ಟಿದೆ ಎಂಬ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಗೋದಾವರಿ ಗೌರವಕ್ಕೆ ಪಾತ್ರರಾದ ಮಂಜುನಾಥ ಗಾಂವ್ಕರ್ ಬರ್ಗಿಯವರು ಬಾವುಕರಾಗಿ ನುಡಿದರು. ಅವರಿವರಿಂದ ಬೇಡಾಡಿ ಪಡೆಯುವ ಪ್ರಶಸ್ತಿ – ಪುರಸ್ಕಾರಗಳಿಗಿಂತಲೂ ಅಂತರಂಗದ ಪ್ರೀತಿಯಿಂದ ತಾನೇ ತಾನಾಗಿ ರಾಘುವಂತಹ ಬೆವರ ಜೀವಿಗಳ ನೇತೃತ್ವದಲ್ಲಿನ ತಂಡವು ನೀಡಿದ ಗೌರವವು ಆತ್ಮಾನಂದದಾಯಕವಾಗಿದೆ ಎಂದರು.


ಗೋದಾವರಿ ಗೌರವವನ್ನು ಗೋದಾವರಿ ಸೌಹಾರ್ದದ ಮಿರ್ಜಾನ್ ಶಾಖೆಯ ಹೊಸ ಕಟ್ಟಡದಲ್ಲಿ ಪ್ರದಾನಗೊಳಿಸಲಾಯಿತು. ಗೌರವ ಪ್ರದಾನ ಸಮಾರಂಭವನ್ನು ಸಜ್ಜನಿಕೆಯ ವಿಶ್ರಾಂತ ಉಪ ತಹಶೀಲ್ದಾರ್ ಎಂ. ಸಿ.ನಾಯ್ಕರವರು ಉದ್ಘಾಟಿಸಿದರು. ಹೆಸರಾಂತ ನಾಟಕಕಾರರಾದ ಬಾಲಚಂದ್ರ ನಾಯಕ ಬಾವಿಕೇರಿಯವರು ಆಶಯ ನುಡಿಯನ್ನಾಡಿದರು. ಸೌಹಾರ್ದ ಸಂಸ್ಥಾಪಕ ಅಧ್ಯಕ್ಷರಾದ ರಾಘವೇಂದ್ರ ನಾಯಕರವರು ಪ್ರತಿ ವರ್ಷವೂ ಜನವರಿ 26ರಂದು ತಜ್ಞರ ಸಮಿತಿಯ ನಿರ್ಣಯದ ಮೇರೆಗೆ ಪ್ರಶಸ್ತ ವ್ಯಕ್ತಿತ್ವವನ್ನು ಅನ್ವೇಷಿಸಿ ಗೋದಾವರಿ ಗೌರವವನ್ನು ಗೋದಾವರಿ ಸೌಹಾರ್ದದಿಂದ ನೀಡುವ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ನುಡಿದು, ಮೊದಲ ಗೋದಾವರಿ ಗೌರವಕ್ಕೆ ನಮ್ಮ ಮಂಜಣ್ಣನ ಆಯ್ಕೆ ಅಭಿಮಾನದ ವಿಷಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಖ್ಯಾತ ನಿರೂಪಕ ಸುಭಾಷ್ ಕಾರೇಬೈಲ್, ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ಕನ್ನಡ ಭಾರತಿ ಪ್ರಪಂಚದ ಸಂಚಾಲಕರಾದ ನಾರಾಯಣ ನಾಗು ನಾಯಕ, ಕರ್ನಾಟಕ ರಣಧೀರದ ವೇದಿಕೆಯ ಅಧ್ಯಕ್ಷರಾದ ಮಿರ್ಜಾನಿನ ಕನ್ನಡದ ಸಮೀರ, ಪತ್ರಕರ್ತ ಜಿ.ಡಿ.ಶಾನಭಾಗ್ ಹಾಗೂ ರೂಪಾಲಿ ಮೊದಲಾದವರಿದ್ದರು.

About The Author

error: Content is protected !!