ಭಟ್ಕಳ : ತಾಲೂಕಿನ ಬೋಯಿರ ಕೇರಿಯಲ್ಲಿರುವ ಶ್ರೀ ಪಶುಪತಿ ದೇವಸ್ಥಾನದ ನೂತನ ಶಿಲಾಮಯ ದೇವಾಲಯದ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ಭಕ್ತಿಭಾವ ಹಾಗೂ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಗೋಕರ್ಣದ ತಾಂತ್ರಿಕರಾದ ಶ್ರೀನಿವಾಸ ಅಡಿಗರು ಅವರ ತಾಂತ್ರಿಕತ್ವದ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಭಟ್ ಅವರ ಅರ್ಚಕತ್ವದ ನೇತೃತ್ವದಲ್ಲಿ ಶಿಲಾನ್ಯಾಸ ಪೂಜಾಕಾರ್ಯಗಳು ನೆರವೇರಿದವು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಿ ಮಾತನಾಡಿದರು. ದೇವಸ್ಥಾನ ಹಾಗೂ ಅದರ ಜಾಗವನ್ನು ಹಲವು ವರ್ಷಗಳಿಂದ ಕಾಪಾಡಿಕೊಂಡು ಬಂದ ಊರಿನ ಹಿರಿಯರ ಶ್ರಮ ಶ್ಲಾಘನೀಯವಾಗಿದೆ. ಇಂತಹ ಐತಿಹಾಸಿಕ ದೇವಾಲಯಗಳ ನಿರ್ಮಾಣ ಹಾಗೂ ಜೀರ್ಣೋದ್ಧಾರವು ಪುಣ್ಯದ ಕೆಲಸವಾಗಿದೆ. ಶಾಲೆ ಮತ್ತು ದೇವಸ್ಥಾನಗಳ ಅಭಿವೃದ್ಧಿ ನನ್ನ ಅವಧಿಯ ಪ್ರಮುಖ ಆದ್ಯತೆಯಾಗಿದ್ದು, ಈ ಪುಣ್ಯದ ಕಾರ್ಯದಲ್ಲಿ ಭಾಗಿಯಾಗಿರುವುದು ನನಗೆ ಸಂತಸ ತಂದಿದೆ ಎಂದರು.
ಸುಮಾರು 1500 ವರ್ಷಗಳ ಇತಿಹಾಸ ಹೊಂದಿರುವ ಈ ಪುರಾತನ ಕ್ಷೇತ್ರವು ದೀರ್ಘಕಾಲ ಜೀರ್ಣೋದ್ಧಾರ ಕಾಣದೆ ಉಳಿದಿತ್ತು. ಇದೀಗ ಈ ಮಹತ್ಕಾರ್ಯ ನೆರವೇರಲು ದೇವರ ಇಚ್ಛೆಯಿಂದಲೇ ಅವಕಾಶ ದೊರೆತಿದೆ. ಊರಿನ ಹಿರಿಯರು ಹಾಗೂ ಗ್ರಾಮಸ್ಥರು ಒಗ್ಗಟ್ಟಾಗಿ ಈ ಜೀರ್ಣೋದ್ಧಾರವನ್ನು ಯಶಸ್ವಿಗೊಳಿಸಬೇಕು. ಸರ್ಕಾರದ ವತಿಯಿಂದ ಅನುದಾನ ನೀಡುವುದರ ಜೊತೆಗೆ ವೈಯಕ್ತಿಕವಾಗಿ ಸಹ ದೇವಾಲಯ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ಊರಿನ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ದೇವಸ್ಥಾನ ನಿರ್ಮಾಣದ ಹೊಣೆ ಹೊತ್ತಿರುವುದು ಸಂತಸದ ಸಂಗತಿ. ನೂತನ ದೇವಾಲಯ ಶೀಘ್ರದಲ್ಲೇ ಪೂರ್ಣಗೊಳ್ಳುವ ವಿಶ್ವಾಸವಿದ್ದು, ತಾವು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಬಹುಕಾಲದ ಕನಸು ಇಂದು ನನಸಾಗುವ ಹಂತಕ್ಕೆ ಬಂದಿದೆ. ಭಟ್ಕಳ ಕ್ಷೇತ್ರದಲ್ಲಿ ಹಲವು ದೇವಸ್ಥಾನಗಳು ಜೀರ್ಣೋದ್ಧಾರ ಕಂಡಿದ್ದು, ಈ ಪುರಾತನ ದೇವಸ್ಥಾನವೂ ಪುನರುತ್ಥಾನಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ತಮ್ಮ ಶಾಸಕತ್ವದ ಅವಧಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದರೂ ದಾಖಲೆಗಳ ಕೊರತೆಯಿಂದ ಕಾರ್ಯಗತವಾಗಿರಲಿಲ್ಲ. ಜವಾಬ್ದಾರಿಯುತ ನಾಗರಿಕನಾಗಿ ತನು–ಮನ–ಧನದ ಸಹಾಯ ಸದಾ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ್ ನಾಯ್ಕ, ಉದ್ಯಮಿ ಪದ್ಮನಾಭ ಪ್ರಭು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಪಶುಪತಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಎಲ್ಲ ಸಮಾಜದ ಹಿರಿಯರು ಹಾಗೂ ಪ್ರಮುಖರ ಸಹಕಾರದಿಂದ ಒಂದು ವರ್ಷದ ಒಳಗೆ ದೇವಾಲಯ ಕಟ್ಟಡವನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಉದ್ಯಮಿ ಪದ್ಮನಾಭ ಪ್ರಭು, ಚಂದ್ರಹಾಸ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಚ್ಮಯ್ಯ ನಾಯ್ಕ, ಮಳ್ಳ ನಾಯ್ಕ ಉಪಸ್ಥಿತರಿದ್ದರು.
ಪವಿತ್ರ ನಾಯ್ಕ ಪ್ರಾರ್ಥನೆ ಹಾಡಿದರು. ಪ್ರಾರಂಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಸ್ವಾಗತಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಕೃಷ್ಣ ನಾಯ್ಕ ಪ್ರಾಸ್ತಾವಿಕ ಭಾಷಣ ಮಾಡಿದರು. ಮನಮೋಹನ ನಾಯ್ಕ ವಂದನಾರ್ಪಣೆ ಸಲ್ಲಿಸಿದರು.
ಪತ್ರಕರ್ತ ಈಶ್ವರ ನಾಯ್ಕ ಹಾಗೂ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ