March 2, 2026

ತಿರಸ್ಕ್ರತ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳ ಗಡುವು  ಅವಧಿಯ ಹೆಚ್ಚಳಕ್ಕೆ ಮನವಿ

ಹೊನ್ನಾವರ: ತಿರಸ್ಕ್ರತ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳ ಮರುಪರಿಶೀಲನೆಗೆ ನಿಗದಿಪಡಿಸಿರುವ ಗಡುವು ಫೆಬ್ರುವರಿ 13ಕ್ಕೆ ಮುಗಿಯಲಿದ್ದು ಈ ಅವಧಿಯನ್ನು ಇನ್ನೂ ಆರು ತಿಂಗಳು ವಿಸ್ತರಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿ ಮನವಿ ಮಾಡಿದೆ.ಹೋರಾ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ನೇತೃತ್ವದ ನಿಯೋಗ ಬುಧವಾರ ಹೊನ್ನಾವರ ತಹಶೀಲ್ದಾರ ಪ್ರವೀಣ ಕರಾಂಡೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಜಿಲ್ಲಾಧಿಕಾರಿಗಳು ಮತ್ತು ರಾಜ್ಯದ ಮುಖ್ಯಕಾರ್ಯದರ್ಶಿಗಳ ಮದ್ಯಪ್ರವೇಶಕ್ಕೆ ಆಗ್ರಹ ಪಡಿಸಿದ್ದಾರೆ.

ಅರಣ್ಯ ಹಕ್ಕು ರಾಜ್ಯ ಮಟ್ಟದ ಮೇಲುಸ್ತುವಾರಿ ಸಮಿತಿಯ ನಿರ್ದೇಶನದಂತೆ ಜಿಲ್ಲೆಯಲ್ಲಿ ಈಗಷ್ಟೇ
ಅರಣ್ಯ ಒತ್ತುವರಿ ಸ್ಥಳದ ಮಹಜರು ಪ್ರಕ್ರಿಯೆ ಆರಂಭವಾಗಿದೆ.ಮಹಜರು ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳ ಅವಧಿ ತಗಲುತ್ತದೆ. ಆನಂತರವೇ ತಿರಸ್ಕರಿಸಿದ ಅರ್ಜಿಗಳ ಪುನರ್ ಪರಿಶೀಲನೆಯ ಕಾರ್ಯಕ್ಕೆ ಚಾಲನೆ ನೀಡಲು ಉಪವಿಭಾಗೀಯ ಮಟ್ಟದಲ್ಲಿ ಸಮಿತಿಗಳಿಗೆ ಸಾಧ್ಯವಾಗಬಹುದು.ಇತರ ಪಾರಂಪರಿಕ ಅರಣ್ಯವಾಸಿಗಳು ಭೂಮಿಯ ಹಕ್ಕಿನಿಂದ ಅರಣ್ಯ ಹಕ್ಕುನಿಯಮ 13ರಲ್ಲಿ ಸೂಚಿಸಿರುವ ಅಗತ್ಯ ಸಾಕ್ಷ್ಯ ಮತ್ತು ಪುರಾವೆಯನ್ನು ಗುರುತಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳ ಜಂಟಿ ಸಮಿತಿ ರಚಿಸಿದ್ದಾರೆ. ಸ್ಥಳ ಮಹಜರು ಕೇವಲ ಕಾಟಾಚಾರದ ಪ್ರಕ್ರಿಯೆ ಆಗಬಾರದು.ಸರ್ವೆ ಕಾರ್ಯ ನಡೆಸಿ ನೈಜ ಸಾಗುವಳಿ ಕ್ಷೇತ್ರವನ್ನು ಮತ್ತು ಸ್ಥಳದಲ್ಲಿನ ಸಾಕ್ಷ್ಯ ಹಾಗೂ ಪುರಾವೆಗಳನ್ನು ಗುರುತಿಸಿ ಅರಣ್ಯಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡುವ ಕೆಲಸ ಆಗಬೇಕು ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶೀಗಳ ನಿರ್ದೇಶನದಂತೆ ಯಾವೊಬ್ಬ ಸಾಗುವಳಿದಾರರು ಹಕ್ಕಿನಿಂದ ವಂಚಿತರಾಗದಂತೆ ವಿಶೇಷ ಮುತುವರ್ಜಿ ವಹಿಸಿ ಜಿಲ್ಲೆಯ ಪ್ರಮುಖ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಆಗಬೇಕೆಂದು ಚಂದ್ರಕಾಂತ ಕೊಚರೇಕರ ಆಗ್ರಹ ಪಡಿಸಿದ್ದಾರೆ.


ನಿಯೋಗದಲ್ಲಿ ತಾಲೂಕು ಅಧ್ಯಕ್ಷ ಶ್ರೀಧರ ಶೆಟ್ಟಿ ಜಂಬೆಬೆಟ್ಟ ಗುಂಡಬಾಳಾ, ಮನೋಹರ ಅಂಕೋಲೇಕರ ಮತ್ತಿತರ ಪ್ರಮುಖರು ಇದ್ದರು.

About The Author

error: Content is protected !!