March 4, 2026

ಹೊನ್ನಾವರ ಸಾಹಿತ್ಯ ಸಮ್ಮೇಳನದ ಸಮಾರೋಪ

ಹೊನ್ನಾವರ: ಸಾಹಿತ್ಯ ಸಮ್ಮೇಳನವು ಒಂದು ಹಬ್ಬವಿದ್ದಂತೆ. ಸಾಹಿತಿಗಳು ಅವರ ಭಾಷಣ, ಅವರ ಗೋಷ್ಠಿ ಮುಗಿದ ತಕ್ಷಣ ವಾಹನ ಹತ್ತಿ ಹೋಗಿ ಬಿಡುತ್ತಾರೆ. ಹೀಗಾಗಬಾರದು ಎಂದು ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಹೇಳಿದರು.

ಅರೆಅಂಗಡಿಯ ಎಸ್‌ಎಸ್‌ಕೆಪಿ ಶಾಲೆಯ ಆವರಣದಲ್ಲಿ ದಿ. ಬಿ.ವಿ.ಭಂಡಾರಿ ವೇದಿಕೆಯಲ್ಲಿ ಆಯೋಜಿಸಿದ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮ್ಮೇಳನಾಧ್ಯಕ್ಷರಾಗಿರುವ ಸುರೇಶ ನಾಯ್ಕ ಅವರು ಶಿಕ್ಷಕರಾಗಿ, ಸಾಹಿತಿಯಾಗಿ ಜನಪರವಾಗಿ ನಿಂತವರು. ಪರಿಷತ್ತಿನ ಸದಸ್ಯರು, ಸ್ಥಳಿಯ ಜನರು ಒಟ್ಟಾಗಿ ನಿಂತು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಒಂದು ಸಾಹಿತ್ಯ ಸಮ್ಮೇಳನವು ಒಂದು ಜೀವನದ ಪ್ರಕ್ರಿಯೆ ಆಗಬೇಕು. ಸಮ್ಮೇಳನದಲ್ಲಿ ಇಡಿಯಾಗಿ ಪಾಲ್ಗೊಂಡಾಗ ಅದು ನಮ್ಮ ಮನಸ್ಸಿನೊಳಗೆ ಇಳಿಯುತ್ತದೆ. ಸಮ್ಮೇಳನವನ್ನು ಇಡಿಯಾಗಿ ನೋಡಬೇಕು. ಗಮನಿಸಬೇಕು, ಕಿವಿಯನ್ನು, ಮನಸ್ಸನ್ನು ಒಡ್ಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ನಮ್ಮ ಭಾಷೆಯನ್ನು, ಸಾಹಿತ್ಯವನ್ನು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಇದರೊಂದಿಗೆ ಪ್ರೀತಿಯ ಸಮಾಜವನ್ನು ಕಟ್ಟಬೇಕು. ಹೂತೋಟದಲ್ಲಿ ಬೇರೆ ಬೇರೆ ಬಣ್ಣದ ಹೂವುಗಳು ಇರುವ ಹಾಗೆ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಜಾತಿ, ಧರ್ಮ, ಗಡಿಯ ಆಚೆ ಪ್ರೀತಿಯನ್ನು ಕಟ್ಟೋಣ. ಮನುಷ್ಯರಾಗಿ ಬದುಕೋಣ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಸುರೇಶ ನಾಯ್ಕ ಮಾತನಾಡಿ, ಸಾಹಿತಿಯಾದವನಿಗೆ ಸಾಮಾಜಿಕ ಕಳಕಳಿ ಇರಬೇಕು. ಸಾಮಾನ್ಯ ವ್ಯಕ್ತಿಯಂತೆ ಇರಬೇಕು. ನನ್ನ ಎಂಟು ಕೃತಿಗಳಲ್ಲಿ ಮೂರು ಯಕ್ಷಗಾನದ ಕುರಿತು, ಎರಡು ಸ್ಥಳ ಪರಿಚಯದ ಕುರಿತು, ಇನ್ನುಳಿದ ಮೂರು ಪುಸ್ತಕಗಳು ಚುಟುಕುಗಳ ಕುರಿತು ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಹಿತ್ಯ ಕೃಷಿಯನ್ನು ಮಾಡುತ್ತೇನೆ. ಸಹಕಾರ ನೀಡಿದ ಸರ್ವರನ್ನು ನೆನೆಯುತ್ತೇನೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ.ಒಕ್ಕೂಟದ ಅಧ್ಯಕ್ಷ ಗಣೇಶ ನಾಯ್ಕ, ಸ್ಥಳಿಯ ಜನಪ್ರತಿನಿಧಿಗಳಾದ ಸುಬ್ರಹ್ಮಣ್ಯ ಭಟ್ಟ, ಎಚ್.ಆರ್.ಗಣೇಶ, ರಜನಿ ನಾಯ್ಕ, ಗೋವಿಂದ ಗೌಡ, ವಿಷ್ಣು ಸಭಾಹಿತ ಇದ್ದರು. ಕಸಾಪ ಸದಸ್ಯ ಈಶ್ವರ ಕೊಡಾಣಿ ಸ್ವಾಗತಿಸಿದರು. ಅಧ್ಯಕ್ಷ ಎಸ್.ಎಚ್.ಗೌಡ ವಂದಿಸಿದರು. ಸದಸ್ಯ ಮಹೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

ನಿರ್ಣಯ ಮಂಡನೆ

ಸಾಹಿತ್ಯ ಸಮ್ಮೇಳನದ ನಿರ್ಣಯವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವ ಕಾರ್ಯದರ್ಶಿ ಎಚ್.ಎಂ.ಮಾರುತಿ ಮಂಡಿಸಿದರು. ಸಮ್ಮೇಳನದಲ್ಲಿ ಪ್ರಮುಖವಾದ 5 ನಿರ್ಣಯಗಳನ್ನು ಮಂಡಿಸಲಾಯಿತು.

  1. ಹೊನ್ನಾವರ ತಾಲೂಕಿನಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವುದು, ಸಾಹಿತ್ಯ ಕೃತಿಗಳನ್ನು ಸಂಗ್ರಹಿಸುವುದು ಸೇರಿದಂತೆ ಉಪಯುಕ್ತ ಕೆಲಸಗಳಿಗಾಗಿ ಸಾಹಿತ್ಯ ಭವನ ನಿರ್ಮಾಣ ನಿರ್ಮಿಸುವುದು.
  2. ಕನ್ನಡ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದು. ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಗುಣಮಟ್ಟದ ಶಿಕ್ಷಣ ಸಿಗಲು ಸರ್ಕಾರದ ಗಮನ ಸೆಳೆಯುವುದು.
  3. ಶರಾವತಿ ಪಂಪಡ್ ಸ್ಟೋರೇಜ್ ಯೋಜನೆಯನ್ನು ಕೈಬಿಟ್ಟು ಪ್ರಕೃತಿ ಮತ್ತು ಜನಜೀವನದ ಮೇಲೆ ಆಗುವ ತೊಂದರೆಯನ್ನು ನಿವಾರಿಸುವುದು.
  4. ನದಿ ತಿರುವು ಯೋಜನೆಯಿಂದ ಜಿಲ್ಲೆಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದ್ದು, ರೈತರ, ಕಾರ್ಮಿಕರ, ಹಾಗೂ ಸಾರ್ವಜನಿಕರ ಹಿತದೃಷ್ಥಿಯಿಂದ ಈ ಯೋಜನೆಯನ್ನು ಕೈಬಿಡುವುದು.
  5. ಹೊನ್ನಾವರ ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಫುಲ ಅವಕಾಶಗಳಿದ್ದು, ಕೊರತೆಗಳನ್ನು ನಿವಾರಿಸಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದು.
    ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!