ಭಕ್ತಾದಿಗಳ ಅನ್ನಪ್ರಸಾದಕ್ಕಾಗಿ ಮಲಾರನ್ನು ಧರಿಸಿ ಭಿಕ್ಷಾಟನೆ ಮಾಡಿ ದವಸ ಧಾನ್ಯ ಸಂಗ್ರಹಿಸಿದ ಪ್ರಕಾಶ್ ಗುರೂಜಿ.
ಕೃಷ್ಣರಾಜಪೇಟೆ: ಪಟ್ಟಣದ ಹೊರವಲಯದ ಸಂತೆಬಾಚಹಳ್ಳಿ ರಸ್ತೆಯ ಬಂಡ ಬೋಯನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಲೆ ಮಹದೇಶ್ವರ ಸುಕ್ಷೇತ್ರದಲ್ಲಿ ಶಿವ ಪಾರ್ವತಿಯರ ಹೂವಿನ ಪಲ್ಲಕ್ಕಿ ರಥೋತ್ಸವದ ಅಂಗವಾಗಿ ಜಾನಪದ ಕಲಾ ತಂಡಗಳ ವೈಭವದ ಅದ್ದೂರಿ ಮೆರವಣಿಗೆಯು ಕೃಷ್ಣರಾಜಪೇಟೆ ಪಟ್ಟಣದಲ್ಲಿ ನಡೆಯಿತು. ಶಿವ ಪಾರ್ವತಿಯರ ಹೂವಿನ ಪಲ್ಲಕಿಯ ರಥೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ್ದ ಭಕ್ತಾದಿಗಳಿಗೆ ದಾಸೋಹವನ್ನು ಪಡಿಸಲು ಸಂಪ್ರದಾಯದAತೆ ಮಲೆ ಮಹದೇಶ್ವರ ಸುಕ್ಷೇತ್ರದ ಪೂಜ್ಯಶ್ರೀ ಪ್ರಕಾಶ್ ಗುರೂಜಿ ಅವರು ಮಲಾರನ್ನು ಧರಿಸಿ ಗ್ರಾಮದ ಮನೆ ಮನೆಗಳಿಗೆ ತೆರಳಿ ಬಿಕ್ಷಾಟನೆಯನ್ನು ಮಾಡಿ ದವಸ ಧಾನ್ಯಗಳನ್ನು ಸಂಗ್ರಹಿಸಿದರು. ಮಲೆ ಮಹದೇಶ್ವರರ ಅನುಗ್ರಹದ ವರಪ್ರಸಾದದಿಂದ ಜನಿಸಿರುವ ನೂರಾರು ಮಕ್ಕಳಿಗೆ ಇದೇ ಸಂದರ್ಭದಲ್ಲಿ ಪ್ರಕಾಶ್ ಗುರೂಜಿಯವರು ನಾಮಕರಣವನ್ನು ಮಾಡಿ, ಮಕ್ಕಳ ಪೋಷಕರು ಹಾಗೂ ತಂದೆ ತಾಯಿಗಳಿಗೆ ಶುಭ ಹಾರೈಸಿದರು.
ಶಿವ ಪಾರ್ವತಿಯರ ಹೂವಿನ ಪಲ್ಲಕ್ಕಿಯ ರಥೋತ್ಸವದ ಅಂಗವಾಗಿ ನೆರೆದಿದ್ದ ಸಾವಿರಾರು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ಗುರೂಜಿ ಹಬ್ಬ ಹರಿದಿನಗಳು ಜಾತ್ರೆ ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ನಮ್ಮ ಗತ ವೈಭವದ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುವ ಮೂಲಕ ಆಚಾರ ವಿಚಾರಗಳು ಸಾಂಪ್ರದಾಯಕ ಪೂಜೆ ಪುರಸ್ಕಾರಗಳ ಬಗ್ಗೆ ತಿಳಿಯಲು ಇಂತಹ ಪೂಜಾ ಕಾರ್ಯಕ್ರಮಗಳು ನಮಗೆ ಮಾರ್ಗದರ್ಶಿಯಾಗಿವೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಲು ಸಾಧ್ಯವಾಗದ ಭಕ್ತಾದಿಗಳು ಬಂಡ ಬೋಯನಹಳ್ಳಿ ಗ್ರಾಮದಲ್ಲಿರುವ ಮಲೆ ಮಹದೇಶ್ವರರು ನೆಲೆಸಿರುವ ಈ ಸುಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿ ಸಂಕಲ್ಪವನ್ನು ಮಾಡಿಕೊಂಡು ಹೋದಾಗ ಅವರ ಕಷ್ಟ ಕಾರ್ಪಣ್ಯಗಳು ಸಂಪೂರ್ಣವಾಗಿ ಬಗೆಹರಿದಿದ್ದು ನೋವಿನಲ್ಲಿ ಹೊಸ ಬೆಳಕು ಮೂಡಿರುವುದು ಮಾದಪ್ಪನ ಅನುಗ್ರಹದ ಪ್ರಸಾದವಾಗಿದೆ ಆದ್ದರಿಂದ ನಮ್ಮ ಸುಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಜಾನಪದರ ಆರಾಧ್ಯ ದೈವ ವಾಗಿರುವ ಮಲೆ ಮಹದೇಶ್ವರರು ಆಡಂಬರದ ಪೂಜೆ ಪುರಸ್ಕಾರಗಳ ಬದಲಿಗೆ ನಿಜವಾದ ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜಿಸಿ ಆರಾಧಿಸಿದರೆ ಸಾಕು ಅನುಗ್ರಹಿಸಿ ಆಶೀರ್ವದಿಸುತ್ತಿರುವುದರಿಂದ ಭಕ್ತಾದಿಗಳು ತಮ್ಮ ಜೀವನದ ಕಷ್ಟಗಳೆಲ್ಲವೂ ಕರಗಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತಿರುವುದು ಈ ಸುಕ್ಷೇತ್ರದಲ್ಲಿ ನಡೆಯುತ್ತಿರುವ ಪವಾಡವಾಗಿದೆ ಎಂದು ಪ್ರಕಾಶ್ ಗುರೂಜಿ ಹೇಳಿದರು. ಸಮಾಜ ಸೇವಕರು ಹಾಗೂ ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ, ಕಾಂಗ್ರೆಸ್ ನಾಯಕರು, ಮೈಸೂರಿನ ಮಿತ್ರ ಫೌಂಡೇಶನ್ ಅಧ್ಯಕ್ಷ ವಿಜಯ ರಾಮೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ ಉತ್ಸವ-2026
ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ
ಶ್ರೀ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ನಡೆದ ಮಹಾಶಿವರಾತ್ರಿಯ ಅಮಾವಾಸ್ಯೆ ಜಾಗರಣೆ ಕಾರ್ಯಕ್ರಮ