March 1, 2026

ವಾಸುಕಿ ಕ್ಷೇತ್ರದಲ್ಲಿ ರಾಮಾನುಜಾಚಾರ್ಯರ ಪರಂಪರೆ ಶಾಖೆ ಆರಂಭ“ಮಠದ ಇತಿಹಾಸದ ಸುವರ್ಣಾಕ್ಷರ” – ಯತಿರಾಜ ಜೀಯರ್ ಸ್ವಾಮೀಜಿ

ಭಟ್ಕಳ: “ಶ್ರೀ ರಾಮಾನುಜಾಚಾರ್ಯರ ಪರಂಪರೆ ಶಾಖೆ ಈ ವಾಸುಕಿ ದೇವಸ್ಥಾನದಲ್ಲಿ ಆರಂಭವಾಗಿರುವುದು ಮಠದ ಇತಿಹಾಸದ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಇದು ಅಕ್ಷರಶಃ ಶ್ರೀ ಕ್ಷೇತ್ರವಾಗಿದೆ. ಇಲ್ಲಿಗೆ ರಾಮಾನುಜಾಚಾರ್ಯರ ಅನುಗ್ರಹ ಸಿಕ್ಕಿದೆ” ಎಂದು ಯತಿರಾಜ ಜೀಯರ್ ಸ್ವಾಮೀಜಿ ಹೇಳಿದರು.


ಸರ್ಪನಕಟ್ಟೆಯಲ್ಲಿರುವ ಶ್ರೀ ವಾಸುಕಿ ಸರ್ಪ ದೇವಸ್ಥಾನದ ವರ್ಧಂತ್ಯೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಅವರು, ಭಟ್ಕಳದ ಭಕ್ತರ ಅವ್ಯಾಹತ ಪ್ರೀತಿ, ಮುಗ್ದತೆ ತಮ್ಮ ಮನಸ್ಸನ್ನು ತುಂಬಿಸುತ್ತದೆ ಎಂದರು.
ಭಾರತದಾದ್ಯಂತ ರಾಮಾನುಜಾಚಾರ್ಯರ ದಿವ್ಯ ಮಂಗಳ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಾರತಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದ ಅವರು, “ರಾಜ್ಯದ ಗ್ರಾಮಗಳಿಗೆ ಸಂಚರಿಸಿ ರಾಮಾನುಜಾಚಾರ್ಯರ ವಿಜಯ ಧ್ವಜ ಸ್ಥಾಪಿಸಿದ್ದೇವೆ. ಆದರೆ ಪ್ರತಿ ಬಾರಿ ಭಟ್ಕಳಕ್ಕೆ ಬಂದಾಗ ವಿಶೇಷ ಸಂತೋಷ, ತೃಪ್ತಿ ಉಂಟಾಗುತ್ತದೆ” ಎಂದು ಹೇಳಿದರು.
ಜಗತ್ತಿಗೆ ಶರಣಾಗತಿ ತತ್ವವನ್ನು ಪ್ರತಿಪಾದಿಸಿದ ರಾಮಾನುಜಾಚಾರ್ಯರು ಜಾತಿ-ಮತ-ಪಂಥ ಭೇದವಿಲ್ಲದೆ ಎಲ್ಲರಿಗೂ ದೇವರ ದರ್ಶನ ಮಾಡಿಸಿದ ಮಹಾನ್ ಆಚಾರ್ಯರು ಎಂದ ಅವರು, ಈ ಕ್ಷೇತ್ರಕ್ಕೆ ಅವರ ಪಾದಸ್ಪರ್ಶವಿರುವುದಾಗಿ ತಿಳಿದು ಸಂತಸವಾಯಿತು ಎಂದರು. “ನಮ್ಮ ಮಠಕ್ಕೆ 960 ವರ್ಷಗಳ ಇತಿಹಾಸವಿದೆ. ಹಿಂದಿನ ಯತಿಗಳು ಭಟ್ಕಳಕ್ಕೆ ಭೇಟಿ ನೀಡಿದ್ದರು. ಇದೀಗ ಮತ್ತೆ ಈ ಕ್ಷೇತ್ರದೊಂದಿಗೆ ಆತ್ಮೀಯ ಬಾಂಧವ್ಯ ಬೆಸೆದಿರುವುದು ಸಂತಸದ ಸಂಗತಿ” ಎಂದರು.


“ಭಟ್ಕಳವೇ ಪ್ರೀತಿ, ಮುಗ್ದತೆಯ ಸಂಕೇತ”
ಕಾರ್ಯಕ್ರಮದ ಪೂರ್ಣಕುಂಭ ಸ್ವಾಗತ, ಚಂಡೆ ವಾದನ, ರ್ಯಾಲಿ, ಭಕ್ತರ ಉತ್ಸಾಹ ಇವೆಲ್ಲವೂ ರಾಮಾನುಜಾಚಾರ್ಯರ ಪ್ರೇರಣೆಯಿಂದಲೇ ನಡೆದಂತಿದೆ ಎಂಬ ಭಾವನೆ ವ್ಯಕ್ತಪಡಿಸಿದ ಅವರು, “ನಾಮಧಾರಿ ಸಮಾಜ ಬೇಧಭಾವ ಬಿಟ್ಟು ಆದರ್ಶಪ್ರಾಯವಾಗಿ ಮೇಲೇಳಬೇಕು. ವರ್ಷಕ್ಕೊಮ್ಮೆ ಅಲ್ಲ, ಹತ್ತು ಬಾರಿ ಬರಲು ಸಿದ್ಧ” ಎಂದು ಹೇಳಿದರು.


ವಾಸುಕಿ ದೇವಸ್ಥಾನ ಧರ್ಮ ಕ್ಷೇತ್ರವಾಗಿ ಬೆಳೆಯಲಿದೆ. “ಬೇರೆಡೆಗಳಿಗೆ ಹೋದಾಗ ಭಟ್ಕಳದ ಜನರ ಪ್ರೀತಿಯನ್ನು ಹೆಮ್ಮೆಯಿಂದ ಹೇಳುತ್ತೇವೆ” ಎಂದರು. ಇಲ್ಲಿ ನಿರ್ಮಿಸಿರುವ ಗುರುಭವನ ಅದ್ಭುತವಾಗಿದ್ದು, ಮೂರು ದಿನ ವಾಸ್ತವ್ಯ ಹೂಡುವುದಾಗಿ ತಿಳಿಸಿದರು.
“ಭಟ್ಕಳ ಪುಣ್ಯಕ್ಷೇತ್ರ” – ರಂಗರಾಮಾನುಜಂ ಸ್ವಾಮಿ
ಶ್ರೀ ಮೇಲುಕೋಟೆ ಜಗದ್ಗುರು ಶ್ರೀ ರಾಮಾನುಜಾಚಾರ್ಯ ಮಹಾಸಂಸ್ಥಾನದ ಆಸ್ತಾನ ವಿದ್ವಾನ್ ರಂಗರಾಮಾನುಜಂ ಸ್ವಾಮಿ ಮಾತನಾಡಿ, “ಕಲಿಯುಗದಲ್ಲಿಯೇ ರಾಮಾನುಜಾಚಾರ್ಯರೊಂದಿಗೆ ಆದಿಶೇಷನ ಸಂಬಂಧ ಬೆಸೆದಿರುವುದು ಸೋಜಿಗ. ಭಟ್ಕಳಕ್ಕೆ ರಾಮಾನುಜಾಚಾರ್ಯರು ಬಂದಿರುವ ಉಲ್ಲೇಖಗಳಿವೆ. ಇದೊಂದು ಪುಣ್ಯಕ್ಷೇತ್ರ” ಎಂದರು.


ಸಪ್ತ ಪರಶುರಾಮ ಕ್ಷೇತ್ರಗಳಲ್ಲಿ ತೌಳವ ಕ್ಷೇತ್ರವಾದ ಭಟ್ಕಳಕ್ಕೂ ರಾಮಾನುಜಾಚಾರ್ಯರಿಗೂ ನಿಕಟ ಸಂಬಂಧವಿದೆ ಎಂದು ಉಲ್ಲೇಖಿಸಿ, ಈ ಭಕ್ತಿ ಬಾಂಧವ್ಯ ಇನ್ನಷ್ಟು ದೃಢವಾಗಲಿ ಎಂದು ಪ್ರಾರ್ಥಿಸಿದರು.


ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಡಿ.ಬಿ. ನಾಯ್ಕ ಹಾಗೂ ಎಂ.ಆರ್. ನಾಯ್ಕ ಮಾತನಾಡಿ, “800 ವರ್ಷಗಳ ಹಿಂದೆ ರಾಮಾನುಜಾಚಾರ್ಯರ ಪಾದಸ್ಪರ್ಶದಿಂದಲೇ ನಮ್ಮ ಗುರುಮಠ ರೂಪುಗೊಂಡಿದೆ ಎಂಬುದು ಹಿರಿಯರ ನಂಬಿಕೆ. ಆ ಸಂಬಂಧವನ್ನು ಶಿರಸಾ ಮುಂದುವರಿಸುತ್ತೇವೆ” ಎಂದರು.


ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, “ಸ್ಥಳೀಯ ಯುವಕರ ಶ್ರಮದಿಂದ ವಾಸುಕಿ ದೇವಸ್ಥಾನ ಧರ್ಮ ಕ್ಷೇತ್ರವಾಗಿ ಬೆಳೆಯುತ್ತಿದೆ. ಸಮಾಜದ ಒಳಒಡಕುಗಳನ್ನು ಸರಿಪಡಿಸಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ಗುರುಗಳಿಂದ ಆಗಲಿ” ಎಂದು ಮನವಿ ಮಾಡಿದರು.
ಇದಕ್ಕೂ ಮೊದಲು ಚೆನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೈಕ್ ರ್ಯಾಲಿ ಮೂಲಕ ಸ್ವಾಮಿಗಳನ್ನು ಕರೆತರಲಾಯಿತು. ಸೋಡಿಗದ್ದೆ ಕ್ರಾಸ್‌ನಿಂದ ಡಕ್ಕೆ ಕುಣಿತ, ಚಂಡೆ, ಕುಣಿತ ಭಜನೆಗಳೊಂದಿಗೆ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ನೀಡಿ ವಾಸುಕಿ ದೇವಸ್ಥಾನಕ್ಕೆ ಕರೆತರಲಾಯಿತು.
ಗುರುಪಾದುಕಾ ಪೂಜೆ, ಗುರುಭಿಕ್ಷೆ, ಫಲಕಾಣಿಕೆ ಸಮರ್ಪಣೆ ನೆರವೇರಿತು. ದೇವಸ್ಥಾನಕ್ಕೆ ದೇಣಿಗೆ ನೀಡಿದ ಭಕ್ತರನ್ನು ಯತಿರಾಜ ಜೀಯರ್ ಸ್ವಾಮೀಜಿ ಸನ್ಮಾನಿಸಿದರು.


ಕಾರ್ಯಕ್ರಮದಲ್ಲಿ ಎಸ್.ಎಂ. ನಾಯ್ಕ, ಸತೀಶ ನಾಯ್ಕ ಮಣ್ಕುಳಿ, ಮಾದೇವ ನಾಯ್ಕ, ಶಾಂತಾರಾಮ ನಾಯ್ಕ ಜಾಲಿ, ರಾಜೇಶ್ ನಾಯ್ಕ ಮುಂಡಳ್ಳಿ, ಸುಭಾಶ ಶೆಟ್ಟಿ, ನಾಗಪ್ಪ ನಾಯ್ಕ, ದೇವಸ್ಥಾನದ ಅಧ್ಯಕ್ಷ ಗಜಾನನ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಿಕ್ಷಕ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರೆ, ಉಮೇಶ ನಾಯ್ಕ ಸ್ವಾಗತಿಸಿ, ಸೀತಾರಾಮ ನಾಯ್ಕ ವಂದಿಸಿದರು.

About The Author

error: Content is protected !!