March 1, 2026

ಹುಡಗೋಡು ಚಂದ್ರಹಾಸ ನಾಯ್ಕ ಇವರ ಏಳನೇ ವರ್ಷದ ಪುಣ್ಯ ಸ್ಮರಣೆ.

ಹೊನ್ನಾವರ; ಯಕ್ಷಗಾನ ಕಲಾವಿದ ಹುಡಗೋಡು ಚಂದ್ರಹಾಸ ನಾಯ್ಕ ಇವರ ಏಳನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಹಡಿನಬಾಳ ಗ್ರಾ.ಪಂ. ವ್ಯಾಪ್ತಿಯ ಹುಡಗೋಡಲ್ಲಿ ಜರುಗಿತು. ಈ ಬಾರಿ  ಮಂಜಾನೆ ಉಚಿತ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. 125ಕ್ಕೂ ಅಧಿಕ ಜನರ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆಯನ್ನು ಕಾರವಾರದ ವೈದ್ಯರಿಂದ ತಪಾಸಣೆ ನಡೆಸಿಕೊಂಡರು.

ಸಂಜೆ ನಡೆದ ಸಭಾ ಕಾರ್ಯಕ್ರಮವನ್‌ಉ ಜೆಡಿಎಸ್ ಮುಖಂಡ ಟಿ.ಟಿ. ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿ  ಹುಡಗೋಡರವರು ಯಕ್ಷಗಾನ ಪಾತ್ರ ಮತ್ತು ನಮ್ಮ ಯಕ್ಷಗಾನ ಕ್ಷೇತ್ರಕ್ಕೆ ಅತ್ಯಂತ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಯಕ್ಷಗಾನ ಎನ್ನುವುದು ಇಂದೋ ನಾಳೆಗೋ ಮಿಂಚಿ ಮರೆಯಾಗುವ ಕಲೆಯಲ್ಲ ಎನ್ನುವುದಕ್ಕೆ ಚಂದ್ರಹಾಸ ನಾಯ್ಕರು ಪ್ರತ್ಯಕ್ಷ ಸಾಕ್ಷಿ  ಎಂದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ ಡಾ| ಗಜಾನನ ನಾಯ್ಕ ಮಾತನಾಡಿ ಕಲೆ, ಸಾಹಿತ್ಯ, ಸಂಸ್ಕಾರ ಇದ್ದವನು ಸಮಾಜದಲ್ಲಿ ಉತ್ತಮವಾಗಿ ಬಾಳಬಹುದು ಎನ್ನುವುದಕ್ಕೆ ಚಂದ್ರಹಾಸ ಹುಡಗೋಡರವರು ಪ್ರತ್ಯಕ್ಷ ಸಾಕ್ಷಿಯಾಗಿ ಬದುಕಿದರು ಎನ್ನುವುದನ್ನು ಪ್ರಸ್ತುತಪಡಿಸಿದರು.

ಇತಿಹಾಸ ತಜ್ಞರಾದ ಲೋಕರಾಜ ಜೈನ್ ಮಾತನಾಡಿ ಚಂದ್ರಹಾಸ ನಾಯ್ಕರ ಪಾತ್ರದ ಮೆರಗು ಎಂದು ಮರೆಯಲಾಗದ ಬೆರಗು. ಅವರ ಪಾತ್ರಕ್ಕಿರುವ ವರ್ಚಸ್ಸು ಪಾತ್ರದ ಒಟ್ಟು ಸಾಂಸ್ಕೃತಿಕ ಮೌಲ್ಯ ಯಾವ ಶ್ರೇಷ್ಠ ದಿಗ್ಗಜ ಕಲಾವಿದರಿಗಿಂತಲೂ ಕಡಿಮೆ ಇರಲಿಲ್ಲ. ಯಕ್ಷಗಾನ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಯಕ್ಷಲೋಕವೇ ಮೆಚ್ಚುವ ಹಾಗೆ ರಂಗಭೂಮಿಯಲ್ಲಿ ಕುಣಿದು ಕುಪ್ಪಳಿಸಿದ ಹುಡಗೋಡರವರನ್ನು ನೆನಪಿಸಿಕೊಳ್ಳುವುದು ಇಂದಿನ ಅತ್ಯಮೂಲ್ಯ ಕಾರಣವಾಗಿದೆ ಎಂದರು. ಮುಖ್ಯ      ಅತಿಥಿಗಳಾಗಿ ಆಗಮಿಸಿದ ಚಂದ್ರಶೇಖರ ಭಟ್ ಸೂರಾಲು ಮಾತನಾಡಿ ಹುಡಗೋಡನ್ನು ಯಕ್ಷಗಾನ ದೃಷ್ಟಿಯಿಂದ ಮಾತ್ರ ನೆನಪಿಸಿಕೊಳ್ಳುವುದಲ್ಲ ಒಬ್ಬ ರಾಜಕಾರಣಿಯಾಗಿ ಮಾಡಿದ ಸಮಾಜ ಸೇವೆ, ಈ ಊರಿಗೆ ನೀಡಿದ ಕೊಡುಗೆಯಿಂದಲೂ ಅವರನ್ನು ಸ್ಮರಿಸಿಕೊಳ್ಳುವ ಅಗತ್ಯ ಇಂದಿನ ಸಮಾಜಕ್ಕಿದೆ ಎಂದರು.    

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೈಕೋರ್ಟ್ ವಕೀಲರಾದ ನಾಗೇಂದ್ರ ನಾಯ್ಕ ಅವರು ಚಂದ್ರಹಾಸ ಹುಡಗೋಡರವರ ಅಗತ್ಯತೆಯನ್ನು ಕುರಿತು ಸ್ಮರಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಹುಡಗೋಡು ಸ್ಮರಣೆಯಲ್ಲಿ ನೀಡುವ ಕಲಾಶ್ರೀ ಪ್ರಶಸ್ತಿಯನ್ನು ಈಗಷ್ಟೇ ಅನಾರೋಗ್ಯದಿಂದ ಚೇತರಿಕೆಯನ್ನು ಕಾಣುತ್ತಿರುವಂತಹ ಖ್ಯಾತ ಯಕ್ಷಗಾನ ಕಲಾವಿದರಾದಂತಹ ಶಶಿಕಾಂತ ಶೆಟ್ಟಿ ಕಾರ್ಕಳ ಇವರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾಗಿರುವ ರಾಜಕುಮಾರ ಟಿ. ನಾಯ್ಕ ಮತ್ತು ವಿ.ಎಸ.ಎಸ್. ಹಡಿನಬಾಳ ಇದರ ಅಧ್ಯಕ್ಷರಾಗಿರುವ ಹರಿಯಪ್ಪ ವಿ ನಾಯ್ಕ ಇವರು ಉಪಸ್ಥಿತರಿದ್ದರು.  ಎಂ.ಆರ್. ನಾಯ್ಕ ಹುಡಗೋಡು ಪ್ರಾಸ್ಥಾವಿಕವಾಗಿ ಮಾತನಾಡಿದರು, ಬಿಂದು ಅವಧಾನಿ ನಿರೂಪಿಸಿದರು. ಡಾ| ಸತೀಶ ನಾಯ್ಕ ವಂದಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!