ಭಟ್ಕಳ: ದುಷ್ಟಪ್ರವೃತ್ತಿ ಹಾಗೂ ಅಮಂಗಲ ವಿಚಾರಗಳನ್ನು ನಾಶಮಾಡಿ ಸತ್ಪ್ರವೃತ್ತಿಯ ಮಾರ್ಗವನ್ನು ತೋರಿಸುವ ಉತ್ಸವವಾದ ಹೋಳಿ ಹಬ್ಬವನ್ನು ತಾಲೂಕಿನ ಹಲವೆಡೆ ಸಂಭ್ರಮದಿಂದ ಆಚರಿಸಲಾಯಿತು.

ಹಿರಿಯರ ನಂಬಿಕೆ ಪ್ರಕಾರ, ವೃಕ್ಷರೂಪಿ ಸಮಿಧೆಯನ್ನು ರಾತ್ರಿ ಅಗ್ನಿಗೆ ಅರ್ಪಿಸುವುದರಿಂದ ವಾತಾವರಣ ಶುದ್ಧವಾಗುತ್ತದೆ. ಇದೇ ಹೋಳಿ ಆಚರಣೆಯ ಮೂಲ ಉದ್ದೇಶವೆಂದು ಹೇಳಲಾಗುತ್ತದೆ. ಹಬ್ಬದ ಪೂರ್ವಸಂಧ್ಯೆಯಲ್ಲಿ ವಿವಿಧ ಭಾಗಗಳಲ್ಲಿ ಹೋಳಿ ದಹನ ಕಾರ್ಯಕ್ರಮಗಳು ನೆರವೇರಿದವು.
ಬಂದರ್ ಭಾಗದ ಯುವಕ-ಯುವತಿಯರು ಬಣ್ಣದಾಟದಲ್ಲಿ ತೊಡಗಿಸಿಕೊಂಡರೆ, ಇತರ ಭಾಗಗಳ ಯುವಕರು ವಿಭಿನ್ನ ಬಣ್ಣದ ಟಿ-ಶರ್ಟ್ ಧರಿಸಿ ತಮ್ಮದೇ ಪಂಗಡಗಳನ್ನು ರಚಿಸಿಕೊಂಡು ಶಾಂತಿಯುತವಾಗಿ ಹಬ್ಬವನ್ನು ಆಚರಿಸಿದರು. ವಡೇರ ಮಠ ಕಂಪೌಂಡ್, ಮಣ್ಕುಳಿ ಗೆಳೆಯರು, ಮುಟ್ಟಳ್ಳಿ, ಮೂಡಭಟ್ಕಳ, ಸರ್ಪನಕಟ್ಟೆ, ತಲಾಂದ, ರೈಲ್ವೆ ನಿಲ್ದಾಣ, ಮುರ್ಡೇಶ್ವರ ಹಾಗೂ ಶಿರಾಲಿ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗಗಳಲ್ಲೂ ಪರಸ್ಪರ ಬಣ್ಣ ಹಚ್ಚಿ ಹರ್ಷೋದ್ಗಾರ ವ್ಯಕ್ತಪಡಿಸಿದರು.
ಕೆಲವು ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಹ ಸ್ನೇಹಿತರೊಂದಿಗೆ ಬಣ್ಣದಾಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ, ಶಾಂತಿ ಹಾಗೂ ಸಹಭಾವದ ವಾತಾವರಣದಲ್ಲಿ ತಾಲೂಕಿನಾದ್ಯಂತ ಹೋಳಿ ಹಬ್ಬ ಯಶಸ್ವಿಯಾಗಿ ಸಂಪನ್ನಗೊಂಡಿತು.

More Stories
ಭಟ್ಕಳದಲ್ಲಿ ಶಾಲಾ ಮಕ್ಕಳನ್ನ ಸಾಗಿಸುತ್ತಿದ್ದ ವಾಹನ ಪಲ್ಟಿ: 13 ವಿದ್ಯಾರ್ಥಿಗಳಿಗೆ ಸಣ್ಣ ಗಾಯ
ಬ್ಯಾಂಕ್ ದಾಖಲೆ ಪಡೆದು ವಂಚನೆ: ಠಾಣೆಯಲ್ಲಿ ಪ್ರಕರಣ
ಮನೆಯಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ