March 13, 2026

ಸಚಿವರ ತೇಜೋವಧೆಗೆ ಸಾಮಾಜಿಕ ಜಾಲತಾಣ ಬಳಕೆ ಖಂಡನೀಯ: ಗೋವಿಂದ ನಾಯ್ಕ

ಭಟ್ಕಳ: ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿಚಾರದಲ್ಲಿ ಸಚಿವ ಮಂಕಾಳ ವೈದ್ಯ ಅವರ ವಿರುದ್ಧ ಸ್ವಯಂಘೋಷಿತ ನಾಯಕ ಮಾಸ್ತಪ್ಪ ನಾಯ್ಕ ಮಾಡುತ್ತಿರುವ ವೈಯಕ್ತಿಕ ತೇಜೋವಧೆಯ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಆರೋಪಿಸಿದರು.


ಇಲ್ಲಿ ಗುರುವಾರ ಭಟ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಟ್ಕಳ–ಮಂಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭಟ್ಕಳ–ಹೊನ್ನಾವರ ಕ್ಷೇತ್ರಕ್ಕೆ ಶರಾವತಿ ನದಿ ಜೀವನಾಡಿಯಾಗಿದ್ದು, ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕುರಿತು ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಹೊನ್ನಾವರದಲ್ಲಿ ಶರಾವತಿ ಹೋರಾಟ ಸಮಿತಿ ರಚನೆಯಾಗಿ ಸಭೆಗಳು ಹಾಗೂ ಪ್ರತಿಭಟನೆಗಳು ನಡೆದಿವೆ. ಮಾರ್ಚ್ 10ರಂದು ಹೊನ್ನಾವರದಲ್ಲಿ ಮೂವರು ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ಸಮಾವೇಶ ನಡೆದಿದ್ದು, ಅದರಲ್ಲಿ ಸಚಿವ ಮಂಕಾಳ ವೈದ್ಯ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಸರ್ಕಾರದ ಮೇಲೆ ಒತ್ತಡ ತರಲು ಪಕ್ಷಾತೀತವಾಗಿ ಈ ಹೋರಾಟ ನಡೆದಿತ್ತು ಎಂದು ಹೇಳಿದರು.


ಈ ವೇಳೆ ಮಾಸ್ತಪ್ಪ ನಾಯ್ಕ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಆ ವೇದಿಕೆಯಲ್ಲಿ ಮಾತನಾಡಿಲ್ಲ ಎಂಬುದು ಖಚಿತವಾಗಿದ್ದು, ಸಚಿವರು ಕೂಡ ಅದೇ ವೇದಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಾತ್ಮಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಸ್ತಪ್ಪ ನಾಯ್ಕ ಅವರು ಗೇರುಸೊಪ್ಪದಿಂದ ಹೊನ್ನಾವರವರೆಗೆ ನಡೆಸಿದ ಪಾದಯಾತ್ರೆಗೆ ಅಲ್ಪ ಸಂಖ್ಯೆಯ ಜನ ಮಾತ್ರ ಭಾಗವಹಿಸಿದ್ದರು. ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಿ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು. ಮಹಿಳೆಯರ ಹೆಸರನ್ನು ಕೆಡಿಸುವ ಕೆಲಸ ಮಾಡಬಾರದು ಎಂದು ಎಚ್ಚರಿಸಿದರು.


ಮಂಕಾಳ ವೈದ್ಯ ಅವರು ಶಿವಮೊಗ್ಗ ಭಾಗದಲ್ಲಿ ಅಪಾರ ಆಸ್ತಿ ಮಾಡಿದ್ದಾರೆ ಎಂಬ ಆರೋಪ ಮಾಡುತ್ತಿರುವ ಮಾಸ್ತಪ್ಪ ನಾಯ್ಕ, ನಿಜವಾಗಿಯೂ ತಪ್ಪು ನಡೆದಿದೆ ಎಂದು ಭಾವಿಸಿದರೆ ತನಿಖಾ ಸಂಸ್ಥೆಗಳಿಗೆ ದೂರು ನೀಡಿ ತನಿಖೆ ಮಾಡಿಸಬಹುದು ಎಂದು ಹೇಳಿದರು.


ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತ್ರ ಮಾತನಾಡಿದ್ದರು ಎಂದು ಸ್ಪಷ್ಟಪಡಿಸಿದರು. ನಕಲಿ ಫೇಸ್‌ಬುಕ್ ಖಾತೆಗಳ ಮೂಲಕ ಅವಹೇಳನ ಮಾಡುವವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.


ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಹೆಸರನ್ನು ಕೆಡಿಸುವ ರೀತಿಯ ಪೋಸ್ಟ್‌ಗಳು ಮಾಡುತ್ತಿರುವುದು ಖಂಡನೀಯ. ರಾಜಕೀಯ ವಿಚಾರವನ್ನು ರಾಜಕೀಯದ ಮಟ್ಟದಲ್ಲೇ ಇಟ್ಟುಕೊಳ್ಳಬೇಕು ಎಂದು ಹೇಳಿದರು.


ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಉಷಾ ನಾಯ್ಕ ಮಾತನಾಡಿ, ಭಟ್ಕಳ–ಹೊನ್ನಾವರ ಕ್ಷೇತ್ರ ಬುದ್ಧಿವಂತ ಮತದಾರರ ಕ್ಷೇತ್ರವಾಗಿದ್ದು, ಇಂತಹ ವರ್ತನೆಯಿಂದ ಕೆಟ್ಟ ಹೆಸರು ಬರುತ್ತಿದೆ. ಈ ಪ್ರವೃತ್ತಿ ನಿಲ್ಲಿಸಬೇಕು ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ನಾಯ್ಕ, ವಾಮನ ನಾಯ್ಕ, ರಾಜು ನಾಯ್ಕ, ಮಂಜುನಾಥ ನಾಯ್ಕ, ಸುಧಾಕರ ನಾಯ್ಕ, ಅಣ್ಣಪ್ಪ ನಾಯ್ಕ
ಈ ಸಂದರ್ಭದಲ್ಲಿ ಮುಖಂಡರಾದ ಅಣ್ಣಪ್ಪ ನಾಯ್ಕ, ನಾರಾಯಣ ನಾಯ್ಕ, ರಾಜು ನಾಯ್ಕ, ವಾಮನ ನಾಯ್ಕ,


ಮಂಜುನಾಥ ನಾಯ್ಕ, ಸುಧಾ ನಾಯ್ಕ, ಮಾದೇವ ನಾಯ್ಕ, ವೆಂಕಟ್ರಮಣ ಮೊಗೇರ, ತಿಮ್ಮಪ್ಪ ನಾಯ್ಕ, ವಾಮನ ನಾಯ್ಕ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

About The Author

error: Content is protected !!