March 29, 2026

ಭಟ್ಕಳ: ಯುಗಾದಿ ಉತ್ಸವದಲ್ಲಿ ಧರ್ಮ ಜಾಗೃತಿಗೆ ಕರೆ

ಭಟ್ಕಳ: ಸನಾತನ ಹಿಂದೂ ಧರ್ಮದ ಮೇಲೆ ಹಲವು ದಾಳಿಗಳು ನಡೆದರೂ ಅದನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲು ಯಾರಿಗೂ ಸಾಧ್ಯವಾಗಿಲ್ಲ. ಆಚರಣೆ ಮತ್ತು ಸಂಸ್ಕೃತಿಯೇ ಧರ್ಮವನ್ನು ಜೀವಂತವಾಗಿರಿಸಿದೆ. ಹಿಂದೂಗಳು ಸಂಘಟಿತರಾಗಿ ಧರ್ಮರಕ್ಷಣೆಗೆ ಮುಂದಾಗಬೇಕು ಎಂದು ಬೆಂಗಳೂರಿನ ಖ್ಯಾತ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.

ಅವರು ಕೋಣಾರದಲ್ಲಿ ಯುಗಾದಿ ಉತ್ಸವ ಸಮಿತಿಯಿಂದ ಆಯೋಜಿಸಲಾದ ಯುಗಾದಿ ಉತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಹಿಂದೂಗಳು ಜಾತಿಗಿಂತ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಜಾತಿಯನ್ನು ಮನೆಗೆ ಸೀಮಿತಗೊಳಿಸಿ, ಹೊರಗೆ ಎಲ್ಲರೂ ಹಿಂದೂ ಎಂದು ಗುರುತಿಸಿಕೊಳ್ಳಬೇಕು. ಧರ್ಮವೇ ಇಲ್ಲದಿದ್ದರೆ ಜಾತಿಯೂ ಉಳಿಯುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಮನೆಯಿಂದಲೇ ಧರ್ಮ ಜಾಗೃತಿ ಆರಂಭವಾಗಬೇಕು. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸನಾತನ ಧರ್ಮದ ಮಹತ್ವ, ಆಚಾರ-ವಿಚಾರ ಮತ್ತು ಸಂಸ್ಕೃತಿ ಬಗ್ಗೆ ತಿಳುವಳಿಕೆ ನೀಡುವುದು ಹಿರಿಯರ ಜವಾಬ್ದಾರಿ. ಶಿಕ್ಷಣದ ಜೊತೆಗೆ ಸಂಸ್ಕೃತಿಯೂ ಮಕ್ಕಳಿಗೆ ಕಲಿಸಬೇಕೆಂದು ಹೇಳಿದರು.
ಹಿಂದೂ ಧರ್ಮದ ಬಗ್ಗೆ ನಾವು ತಾವೇ ಕಡಿಮೆ ಭಾವನೆ ಹೊಂದಿದರೆ, ಧರ್ಮವನ್ನು ಉಳಿಸಲು ಯಾರು ಬರುತ್ತಾರೆ ಎಂದು ಪ್ರಶ್ನಿಸಿದ ಅವರು, ಕಾಶ್ಮೀರದಲ್ಲಿ ಸಂಘಟನೆ ಕೊರತೆಯಿಂದ ಹಿಂದೂಗಳ ಪರಿಸ್ಥಿತಿ ಹೇಗಾಗಿದೆ ಎಂಬುದನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.
ಭಾರತ ಹಿಂದೂಗಳ ಏಕೈಕ ದೇಶ. ಇಲ್ಲಿ ತೊಂದರೆ ಎದುರಾದರೆ ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ಸನಾತನ ಧರ್ಮದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಧರ್ಮ ಉಳಿದರೆ ಭಾರತವೂ ಸುರಕ್ಷಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಮುಖಂಡ ಹಾಗೂ ಮಾಜಿ ಗ್ರಾಪಂ ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ ಮಾತನಾಡಿ, ಧರ್ಮ ಜಾಗೃತಿಗಾಗಿ ಯುಗಾದಿ ಉತ್ಸವವನ್ನು ಆಯೋಜಿಸಲಾಗಿದೆ. ಮನೆಮನೆ ಭೇಟಿ, ಶೋಭಾಯಾತ್ರೆ, ಹಿಂದೂ ಸಮಾವೇಶಗಳ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ನಾರಾಯಣ ಶೆಟ್ಟಿ ಮಾತನಾಡಿ, ನಮ್ಮ ಆಚಾರ-ಸಂಸ್ಕೃತಿಯನ್ನು ಮರೆಯಬಾರದು. ಮೌಲ್ಯಗಳನ್ನು ಉಳಿಸಿಕೊಂಡು ಜೀವನ ನಡೆಸುವುದು ಮುಖ್ಯ ಎಂದರು.
ವೇದಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯಾಯ ಉಪಸ್ಥಿತರಿದ್ದರು. ವೇ.ಮೂ ಯೋಗೇಶ ಹೆಬ್ಬಾರ ಹಾಗೂ ವಿನಯ ಉಪಾಧ್ಯಾಯ ವೇದಘೋಷ ಮಾಡಿದರು. ಶ್ರೀಶ ಹೆಬ್ಬಾರ ಶಂಖನಾದಗೈದರು. ಸುಷ್ಮಾ ಗಣೇಶ ಹೆಬ್ಬಾರ ಪ್ರಾರ್ಥಿಸಿದರು. ಶ್ರೀಕರ ಹೆಬ್ಬಾರ ದೇಶಭಕ್ತಿಗೀತೆ ಹಾಡಿದರು.
ಹಿರಿಯ ಮುಖಂಡ ಗೋವಿಂದ ನಾಯ್ಕ ಸ್ವಾಗತಿಸಿದರು. ವಿನಾಯಕ ಭಟ್ಟ ತೆಕ್ಕನಗದ್ದೆ ನಿರೂಪಿಸಿದರು. ಸುಬ್ರಹ್ಮಣ್ಯ ಮಧ್ಯಸ್ಥ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.

About The Author

error: Content is protected !!