ಹೊನ್ನಾವರ : “ಹತ್ತು ಹೇಳಬಹುದು, ಒಂದು ಊರಬಾರದು” ಎಂಬುದು ಹಿರಿಯರ ಮಾತು, ಅರ್ಥಾತ್ ಹೇಳುವುದಕ್ಕಿಂತ ಬರೆಯುವುದು ಬಹಳ ಕಷ್ಟವೆಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಸ್ಪಷ್ಟವೂ, ನಿಖರವು ಮತ್ತು ಕಾನೂನಿನ ಸೀಮಿತ ಚೌಕಟ್ಟಿನಲ್ಲಿ,ತಮ್ಮ ಬರವಣಿಗೆಯಿಂದ ಶಾಲಾ ಆಡಳಿತ ಯಂತ್ರವು ಸುಸೂತ್ರವೂ, ಅರ್ಥಪೂರ್ಣವೂ ಆಗುವಂತೆ ಶ್ರಮಿಸಿದ, ನೇರ ನಡೆ-ನುಡಿಯ, ಸದಾಚಾರಗಳಿಂದ ಹೆಗ್ಗಳಿಕೆಗೆ ಪಾತ್ರರಾದ ಶ್ರೀ ಗಣೇಶ ಕೆ.ಭಟ್ಟರು ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಸಹಾಯಕರಾಗಿ ದಿನಾಂಕ 7-12-1993 ರಂದು ಸೇರಿ, ಸುಧೀರ್ಘವಾದ 32 ವರ್ಷಗಳ ಪ್ರಾಮಾಣಿಕ ಸೇವೆ ಸಲ್ಲಿಸಿ, ದಿನಾಂಕ 31-03-2026 ರಂದು ವೃತ್ತಿಯಿಂದ ನಿವೃತ್ತಿಯನ್ನು ಸರ್ಕಾರದ ನಿಯಮದಂತೆ ಹೊಂದುತ್ತಿದ್ದಾರೆ.33 ವರ್ಷಗಳ ಕಾಲ ಅವರು ಶಾಲೆಗೆ ನೀಡಿದ ಸೇವಾ ಕಾಯಕ ಸ್ಮರಣೀಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಕಚೇರಿಯ ಕಡತಗಳನ್ನು ವ್ಯವಸ್ಥಿತವಾಗಿ ಇಟ್ಟ ರೀತಿಯನ್ನು ಮತ್ತು ಸಂಬAಧಿಸಿದ ವಿಷಯಗಳಲ್ಲಿರುವ ಅವರ ಅಪಾರ ಜ್ಞಾನದ ಮಟ್ಟವನ್ನು ಮೇಲಾಧಿಕಾರಿಗಳು ಕಣ್ಣಾರೆ ಪರಾಮರ್ಶಿಸಿ, ಪ್ರಶಂಶಿಸಿದ ದಾಖಲೆಗಳು ಇರುವುದು ಶ್ರೀ ಜಿ.ಕೆ.ಭಟ್ಟರ ಕಾರ್ಯ ವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಮದುವೆ ಮನೆಯಲ್ಲಿ ಅಡುಗೆಭಟ್ಟನ ಪರಿಶ್ರಮ ಕಣ್ಣಿಗೆ ಕಾಣದು ಮತ್ತು ಅವನ ಮಹತ್ವ ಅಡುಗೆ ಸರಿಯಾಗದೇ ಇದ್ದಾಗ ಮಾತ್ರ ಅರಿವಿಗೆ ಬರುತ್ತದೆ. ಹಾಗೆಯೇ ಶಾಲೆಯ ಆಡಳಿತದ ಮುಖ್ಯ ಪಾತ್ರ ಕರಣಿಕರದ್ದು ಆಗಿರುತ್ತದೆ. ಅಂದು 1992 ರಲ್ಲಿ ಈ ಶಾಲೆಯಲ್ಲಿ ಕರಣಿಕರಾಗಿ ವಿದ್ವಜ್ಜನರಲ್ಲಿ ಮನ್ನಣೆ ಪಡೆದ ಶ್ರೀ ಜಿ.ಕೆ.ಭಟ್ಟರ ತಂದೆಯವರಾದ ಶ್ರೀ ಕೆ. ಐ. ಭಟ್ಟರ ಅಕಾಲಿಕ ನಿಧನದಿಂದ ತೆರವಾದ ಹುದ್ದೆಯನ್ನು ಅಲಂಕರಿಸಿದ ಇವರು ಈವರೆಗೆ ನಾಲ್ಕು ಮುಖ್ಯಾಧ್ಯಾಪಕರೊಂದಿಗೆ ಸಮನ್ವಯದಲ್ಲಿ ಕಾರ್ಯ ನಿರ್ವಹಿಸಿರುವುದು ಶ್ಲಾಘನೀಯ ಮತ್ತು ಉಲ್ಲೇಖನೀಯ.
ನೇರ ನಡೆ-ನುಡಿಯ, ನುಡಿದಂತೆ ನಡೆಯುವ ಮತ್ತು ಸಾರ್ವಜನಿಕ ಜೀವನವನ್ನು ಭ್ರಷ್ಟರಹಿತವಾಗಿ ರೂಪಿಸಿಕೊಂಡ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದ ಇವರು ಈ ಶಾಲೆಗೆ ನೀಡಿದ ಸೇವೆ ಅನುಕರಣೀಯವಾಗಿದೆ ಮತ್ತು ಇತರರಿಗೆ ಆದರ್ಶವಾಗಿದೆ. ಸೇವಾ ಪಥದಲ್ಲಿ ಸದ್ರಿಯವರ ನೇರನುಡಿ ಕೆಲವೊಮ್ಮೆ ನಿಷ್ಠುರವಾಗಿದ್ದರೂ, ಸಮಾಧಾನದಲ್ಲಿ ಅರ್ಥೈಸಿದಾಗ ಅದು ಭವಿಷ್ಯದಲ್ಲಿ ಪಾಠವಾಗಿರುವ ದೃಷ್ಟಾಂತ ಅನುಭವಿಸಿರುವ ಹಲವರ ಅಭಿಪ್ರಾಯವಾಗಿದೆ.ಕಛೇರಿಯಿಂದ ತೆರಳುವ ಪ್ರಸ್ತಾವನೆಯನ್ನು ವ್ಯವಸ್ಥಿತವಾಗಿ ಅರ್ಥೈಸಿ, ಅಂತೆಯೇ ಜೋಡಿಸಿ ಕಳಿಸುವ ವಿಧಾನ ಸಹಪಾಠಿಗಳಿಗೆ ಪಾಠವೇ ಆಗಿತ್ತು
ಇವರ ಕೃತೃತ್ವ ಶಕ್ತಿ ಮತ್ತು ಸೇವಾ ಶ್ರೇಷ್ಠತೆಯನ್ನು ಗೌರವಿಸಿ, ಸಲ್ಲಿಸಿರುವ ಸಾರ್ಥಕ ಸೇವೆ ನಮಗೆಲ್ಲ ಪ್ರೇರಕ ಶಕ್ತಿಯಾಗಿದೆ ಎಂದು ತಿಳಿಸುತ್ತಾ, ನಿವೃತ್ತಿ ಜೀವನ ಸುಖಮಯ ಹಾಗೂ ನೆಮ್ಮದಿಪೂರ್ಣವಾಗಲಿ ಎಂದು ಹಾರೈಸುತ್ತಾ, ಶ್ರೀ ಚೆನ್ನಕೇಶವ ತಮಗೆ ಆಯುರಾರೋಗ್ಯ, ಐಶ್ವರ್ಯ ಮತ್ತು ನೆಮ್ಮದಿಯ ಬಾಳನ್ನು ಭವಿಷ್ಯದಲ್ಲಿ ನೀಡಲಿ ಎಂದು ಪ್ರಾರ್ಥಿಸುತ್ತಾ, ಶ್ರೀ ಜಿ.ಕೆ.ಭಟ್ಟರನ್ನು,ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಸಿಬ್ಬಂದಿಗಳು, ಪಾಲಕರು, ಪೋಷಕರು, ವಿದ್ಯಾರ್ಥಿಗಳು,ಊರ ನಾಗರಿಕರು ಮತ್ತು ಶ್ರೀ ಚೆನ್ನಕೇಶವ ಸಹಕಾರಿ ವಿದ್ಯಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಶುಭ ಹಾರೈಸುತ್ತಾ, ಅಭಿನಂದನೆ ಸಲ್ಲಿಸಿದ್ದಾರೆ.

More Stories
ಕಾಸರಕೋಡ್ ಬೀಚಿನಲ್ಲಿ 102 ಕಡಲಾಮೆ ಮರಿ ಜನ್ಮ
ಉತ್ತಮ ಆರೋಗ್ಯ ಸುಸ್ಥಿರ ಸಂಪತ್ತು” ಆರೋಗ್ಯ ಮತ್ತು ಹೂಡಿಕೆ ಜಾಗೃತಿ ಕಾರ್ಯಕ್ರಮ
ಎ.ಸಿ.ಪಿ ಪಾಂಡುರಂಗ ಭಂಡಾರಿ ಇವರಿಗೆ ಮುಖ್ಯಮಂತ್ರಿಗಳ ಪೊಲೀಸ್ ಪದಕ.