ಹೊನ್ನಾವರ: ತಾಲೂಕಿನಲ್ಲಿ ನಡೆದಿದ್ದ ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರವನ್ನು ಜಪ್ತು ಮಾಡಲಾಗಿದೆ.
ಘಟನೆಯ ಹಿನ್ನೆಲೆ:
ತಾಲೂಕಿನ ಮನೆಯೊಂದರ ಕಬ್ಬಿಣದ ಟ್ರಂಕ್‌ನಲ್ಲಿ ಇರಿಸಲಾಗಿದ್ದ ಒಟ್ಟು 128 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ ನಗದು ಹಣ ಕಳುವಾಗಿತ್ತು. ಈ ಬಗ್ಗೆ ಸಂಶಯಗೊಂಡ ದೂರುದಾರರು, ಹೊನ್ನಾವರ ತಾಲೂಕಿನ ದೇವಸ್ಥಾನ ಕೇರಿ ನಿವಾಸಿಯಾದ ಧನುಷ್ ಶ್ರೀಧರ ಗೌಡ ಎಂಬಾತನ ಮೇಲೆ ದೂರು ನೀಡಿದ್ದರು. ದೂರಿನ ಅನ್ವಯ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕಲಂ 305 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆ ಮತ್ತು ಬಂಧನ:
ಪ್ರಕರಣದ ಗಾಂಭೀರ್ಯತೆಯನ್ನು ಅರಿತ ಪೊಲೀಸರು, ಆರೋಪಿಗಳ ಪತ್ತೆಗಾಗಿ ಅನುಭವಿ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿದ್ದರು. ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಪ್ರಮುಖ ಆರೋಪಿ ಧನುಷ್ ಶ್ರೀಧರ ಗೌಡ ಹಾಗೂ ಆತನಿಗೆ ಕದ್ದ ಆಭರಣಗಳನ್ನು ಮಾರಾಟ ಮಾಡಲು ಮತ್ತು ವಿಲೇವಾರಿ ಮಾಡಲು ಸಹಾಯ ಮಾಡಿದ ಆತನ ಸ್ನೇಹಿತ, ಗೇರುಸೊಪ್ಪ ಮೆಟ್ಟಿನಗದ್ದೆ ನಿವಾಸಿ ಗೌರೀಶ ಗಣಪತಿ ಗೌಡ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಯಿತು.
ಫೈನಾನ್ಸ್ ಕಂಪನಿಗಳಲ್ಲಿ ಅಡವಿಟ್ಟಿದ್ದ ಚಿನ್ನ ಜಪ್ತು: ವಿಚಾರಣೆಯ ವೇಳೆ ಆರೋಪಿಗಳು ತಾವೂ ಕದ್ದ ಬಂಗಾರವನ್ನು ಹೊನ್ನಾವರದ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಹಾಗೂ ಮುತ್ತೂಟ್ ಫಿನ್‌ಕಾರ್ಪ್‌ನಲ್ಲಿ ಅಡವಿಟ್ಟಿರುವುದಾಗಿ ಬಾಯಿಬಿಟ್ಟಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಒಟ್ಟು ₹17,08,300 ಮೌಲ್ಯದ 127.5 ಗ್ರಾಂ ಬಂಗಾರದ ಆಭರಣಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ. ಸದ್ಯ ಬಂಧಿತರಿಬ್ಬರಿಗೂ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸ್ ತಂಡಕ್ಕೆ ಶ್ಲಾಘನೆ:
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಹಾಗೂ ಭಟ್ಕಳ ಉಪವಿಭಾಗದ ಡಿವೈಎಸ್‌ಪಿ ಗಿರೀಶ ಬಿ. ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಹೊನ್ನಾವರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದಲ್ಲಿ, ಪಿ.ಎಸ್.ಐ ಮಹಾಂತೇಶ ವಾಲ್ಮೀಕಿ, ಪಿ.ಎಸ್.ಐ ಸಂಗೀತಾ, ಪ್ರೊಬೇಷನರಿ ಪಿ.ಎಸ್.ಐ ರೇಣುಕಾ ಹಾಗೂ ಸಿಬ್ಬಂದಿಗಳಾದ ಗಜಾನನ ನಾಯ್ಕ, ಮನೋಜ ಡಿ, ರವಿ ನಾಯ್ಕ ಮತ್ತು ಸಚಿನ್ ನಾಯ್ಕ ಅವರು ಆರೋಪಿಗಳನ್ನು ಬಂಧಿಸಿ, ಮಾಲು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
More Stories
ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ರೂ. 14 ಲಕ್ಷ ವೆಚ್ಚದ ಸಿಎಸ್ಆರ್ ಶೌಚಾಲಯ ಉದ್ಘಾಟನೆ
ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವರ್ಷದ ಅತ್ಯುತ್ತಮ ICSE ಶಾಲಾ ಪ್ರಶಸ್ತಿಯನ್ನು ಪಡೆದಿರುತ್ತದೆ.
ಉಪ್ಪೋನಿಯ ಶ್ರೀ ನಾಗಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅಧಿಕ ಮಾಸದ ಪುಣ್ಯೋತ್ಸವ: ವನದುರ್ಗ ಹೋಮ ಮತ್ತು ಜಪ ಕಾರ್ಯಕ್ರಮ