October 5, 2025

ಸ್ತ್ರೀರೋಗ ತಜ್ಞ ಡಾ. ಸಹನ್ ಎಸ್. ಕುಮಾರ (39) ಭೋಪಾಲ್‌ನಲ್ಲಿ ಆತ್ಮಹತ್ಯೆ

ಭಟ್ಕಳ: ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿ ಕೆಲಸ ಮಾಡಿದ ಡಾ. ಸಹನ್ ಎಸ್. ಕುಮಾರ (39) ಭೋಪಾಲ್‌ನ ಟಿ.ಟಿ. ನಗರದಲ್ಲಿರುವ ಹೋಟೆಲೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ತೆಂಕಮಿಜಾರು ಗ್ರಾಮದ ಮೂಲದ ಡಾ.ಸಹನ್ ಕುಮಾರರು 2021ರಿಂದ 2024ರ ಜೂನ್ ತನಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಬಾಲಾಘಾಟ್‌ನ ಖಾಸಗಿ ಆಸ್ಪತ್ರೆಗೆ ಸೇರಿ ವೈದ್ಯಕೀಯ ಸೇವೆ ಮಾಡುತ್ತಿದ್ದರು.

ಮಧ್ಯಪ್ರದೇಶ ವೈದ್ಯಕೀಯ ಮಂಡಳಿಯ ಕೌನ್ಸೆಲಿಂಗ್ ಸಭೆಯಲ್ಲಿ ಪಾಲ್ಗೊಳ್ಳಲು ಅವರು ಭೋಪಾಲ್‌ಗೆ ತೆರಲಿದ್ದರು. ಆದರೆ ಸಭೆಗೆ ಹಾಜರಾಗುವ ಮುನ್ನವೇ ಹೋಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ಕೊಠಡಿಯಿಂದ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ.
ಮಧ್ಯಾಹ್ನದವರೆಗೂ ಕೊಠಡಿ ತೆರೆದುಕೊಳ್ಳದ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿ ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೊಬೈಲ್ ಫೋನ್, ಇಯರ್‌ಫೋನ್ ಹಾಗೂ ಬ್ಯಾಗ್ ಸೇರಿದಂತೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆತ್ಮಹತ್ಯೆಗೆ ಮೊದಲು ಯಾರೊಂದಿಗಾದರೂ ದೂರವಾಣಿ ಕರೆ ಮಾಡಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹಕ್ಕೆ ಮರಣೋತ್ತರ ಪರೀಕ್ಷೆ ನಡೆಸಿ ಮೂಡುಬಿದಿರೆಗೆ ಕಳುಹಿಸಲಾಗಿದ್ದು, ಕುಟುಂಬಸ್ಥರು ಅಂತಿಮ ವಿಧಿ ವಿಧಿಗಳನ್ನು ನೆರವೇರಿಸಿದ್ದಾರೆ.
ಇತ್ತೀಚೆಗೆ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ವೈದ್ಯರು ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವ ತ್ಯಜಿಸಿರುವ ಸಾಧ್ಯತೆ ವ್ಯಕ್ತವಾಗಿದೆ ಎಂದು ಭೋಪಾಲ್ ಟಿಟಿ ನಗರ ಠಾಣಾ ಪ್ರಭಾರಿ ಗೌರವ್ ದೋಹರೆ ತಿಳಿಸಿದ್ದಾರೆ.

About The Author

error: Content is protected !!