March 2, 2026

ಗೃಹೋಪಯೋಗಿ ವಸ್ತುಗಳನ್ನು ಅರ್ಧ ಬೆಲೆಗೆ ನೀಡುತ್ತೇವೆ ಎಂದು ನಂಬಿಸಿ ಮುಂಗಡ ಹಣ ಪಡೆದು ಪರಾರಿ

ಭಟ್ಕಳ: ನೂರಾರು ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದು ವಸ್ತು ನೀಡದೆ ಅಂಗಡಿ ಮುಚ್ಚಿ ಪರಾರಿಯಾದ ಘಟನೆ ಭಟ್ಕಳ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಪಟ್ಟಣದ ರಥಬೀದಿಯ ಯೂನಿಯನ್ ಬ್ಯಾಂಕ್ ಎದುರಿನ ಕಾಂಪ್ಲೆಕ್ಸ್ನಲ್ಲಿ ಗ್ಲೋಬಲ್ ಎಂಟರ್‌ಪ್ರೈಸಸ್ (ಅಥವಾ ಗ್ಲೋಬಲ್ ಇಂಟರ್ನ್ಯಾಷನಲ್) ಎಂಬ ಹೆಸರಿನಲ್ಲಿ ಗೃಹೋಪಯೋಗಿ ಮಳಿಗೆ ಆರಂಭಿಸಿದ್ದ ತಮಿಳುನಾಡು ಮೂಲದ ಉದಯಕುಮಾರ್ ರೇಂಗರಾಜು ಎಂಬಾತ ಈ ವಂಚನೆ ನಡೆಸಿದ್ದಾನೆಂದು ತಿಳಿದುಬಂದಿದೆ. ಸುಮಾರು 25 ದಿನಗಳ ಹಿಂದೆ ಅಂಗಡಿ ಆರಂಭಿಸಿದ ಆತ, ಸ್ಥಳೀಯ ಆರು ಮಂದಿ ಯುವಕ ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಂಡು ಮಾರುಕಟ್ಟೆ ದರಕ್ಕಿಂತ ಅರ್ಧ ಬೆಲೆಗೆ ವಸ್ತು ನೀಡುವುದಾಗಿ ಪ್ರಚಾರ ನಡೆಸಿ ಜನರನ್ನು ಸೆಳೆದಿದ್ದ. ಆರಂಭದಲ್ಲಿ ಬಂದ ಕೆಲ ಗ್ರಾಹಕರಿಗೆ ಹಣ ಪಡೆದ ನಾಲ್ಕೇ ದಿನಗಳಲ್ಲಿ ಟಿವಿ, ಫ್ರಿಜ್, ಎಸಿ ಸೇರಿದಂತೆ ಕೆಲವು ವಸ್ತುಗಳನ್ನು ನೀಡಿದ ಕಾರಣ ಜನರಲ್ಲಿ ನಂಬಿಕೆ ಮೂಡಿತ್ತು. ನಂತರ ಆತ ಮನೆಗೆ ಮನೆಗೆ ತೆರಳಿ ಭಿತ್ತಿಪತ್ರ ಹಂಚಿ ಆಕರ್ಷಕ ಆಫರ್‌ಗಳ ಪ್ರಚಾರ ನಡೆಸಿದ.ಅಲ್ಪಾವಧಿಯಲ್ಲಿ ನೂರಾರು ಜನರು ಬಲೆಗೆ ಸಿಲುಕಿದ್ದು, ಕೆಲವರು ಒಬ್ಬೊಬ್ಬರು 1 ಲಕ್ಷ ರೂ. ತನಕ ಮುಂಗಡ ಹಣ ನೀಡಿ ವಸ್ತು ಬುಕ್ ಮಾಡಿಕೊಂಡಿದ್ದರು.

ಅಗಡಿ ಬಂದ್ ಜನರ ಆಕ್ರೋಶ
ಬುಧವಾರ ಬೆಳಿಗ್ಗೆ ಅಂಗಡಿ ಬಾಗಿಲು ಮುಚ್ಚಿರುವುದನ್ನು ಕಂಡು ಗ್ರಾಹಕರು ಬೆಚ್ಚಿಬಿದ್ದು, ಸ್ಥಳಕ್ಕೆ ಬಂದು ಬೀಗ ಒಡೆದು ಒಳಗಿನ ವಸ್ತುಗಳನ್ನು ತೆಗೆಯಲು ಪ್ರಯ0ತ್ನಿಸಿದರು. ಅದೇ ವೇಳೆ ನಗರ ಸಿಪಿಐ ದಿವಾಕರ ಎಂ. ಸ್ಥಳಕ್ಕೆ ಬಂದು ಜನರನ್ನು ಸಮಾಧಾನಪಡಿಸಿ, ಹಣ ಕಳೆದವರು ವೈಯಕ್ತಿಕವಾಗಿ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ನಂತರ ಜನರು ಶಾಂತಗೊAಡರು.

ಹಿ0ದೇ ದೂರು ನೀಡಿದ್ದ ಸ್ಥಳೀಯ ವ್ಯಾಪಾರಿ

ಈ ಘಟನೆಯ ಹಿನ್ನೆಲೆ ಆಸಕ್ತಿದಾಯಕವಾಗಿದೆ. ಗ್ಲೋಬಲ್ ಇಂಟರ್ನ್ಯಾಷನಲ್ ಎದುರಿನ ಅಂಗಡಿಯ ಮಾಲಿಕ ಸನವುಲ್ಲ ಗವಾಯಿ ಕಳೆದ ತಿಂಗಳಲ್ಲೇ ನಗರ ಪೊಲೀಸ್ ಠಾಣೆಗೆ ಪಿಟಿಷನ್ ಸಲ್ಲಿಸಿದ್ದರಾಗಿ ತಿಳಿದುಬಂದಿದೆ.

ಅವರ ಅರ್ಜಿಯಲ್ಲಿ, ತಮಿಳುನಾಡು ಮೂಲದ ವ್ಯಕ್ತಿ ಹೊಸ ಅಂಗಡಿ ತೆರೆಯುವ ಮೂಲಕ ಅರ್ಧ ಬೆಲೆಯ ಆಫರ್ ಹೇಳಿ ಜನರಿಗೆ ಮೋಸ ಮಾಡುವ ಉದ್ದೇಶದಿಂದ ವ್ಯವಹಾರ ನಡೆಸುತ್ತಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಅವರ ಪ್ರಕಾರ, ಅಂಗಡಿ ಮಾಲೀಕರು ಗ್ರಾಹಕರಿಂದ ಮೊದಲು ಪೂರ್ಣ ಮುಂಗಡ ಹಣವನ್ನು ಪಡೆದು ಎರಡು ವಾರಗಳಲ್ಲಿ ವಸ್ತುಗಳನ್ನು ನೀಡುತ್ತೇವೆ ಎಂದು ಭರವಸೆ ನೀಡುತ್ತಿದ್ದರು. ಮಾರ್ಕೆಟ್ ದರಕ್ಕಿಂತ ಅತೀ ಕಡಿಮೆ ಬೆಲೆಗೆ ವಸ್ತು ನೀಡುವ ಭರವಸೆಯ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದ್ದುದರಿಂದ ವಂಚನೆ ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು.

ಭಿತ್ತಿಪತ್ರ ನೋಡಿ ಬಂದು ಮೊದಲು ಫ್ರಿಜ್ ಖರೀದಿಸಿದೆ. ನಾಲ್ಕು ದಿನದಲ್ಲಿ ವಸ್ತು ನೀಡಿದ ಕಾರಣ ನಂಬಿಕೆ ಬಂದಿತ್ತು. ಬಳಿಕ ಐದು ವಸ್ತುಗಳಿಗೆ ಒಂದು ಲಕ್ಷ ಮುಂಗಡ ನೀಡಿದ್ದೆ. ಆದರೆ ಈಗ ಅಂಗಡಿ ಬಂದ್ ಮಾಡಿ ಮಾಲೀಕ ಪರಾರಿಯಾಗಿದ್ದಾನೆ. ನನ್ನಂತೆಯೇ ನೂರಾರು ಜನ ಮೋಸಕ್ಕೊಳಗಾಗಿದ್ದಾರೆ,” ಎಂದು ಹಣ ಕಳೆದ ಸ್ಥಳೀಯ ಅಜಮತ್ತುಲ್ಲಾ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ತನಿಖೆ ಮುಂದುವರಿಕೆ
ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
ಪೊಲೀಸರು ಪರಾರಿಯಾದ ಮಾಲೀಕನ ಪತ್ತೆಗೆ ಶೋಧ ತೀವ್ರಗೊಳಿಸಿದ್ದು, ವಂಚನೆಯ ಮೊತ್ತ ಲಕ್ಷಾಂತರ ರೂಪಾಯಿಗಳಷ್ಟಾಗುವ ಸಾಧ್ಯತೆ ಇದೆ.

About The Author

error: Content is protected !!