November 19, 2025

ಯಕ್ಷಗಾನ ನಮ್ಮ ಪರಂಪರೆ, ಸಂಸ್ಕೃತಿಯನ್ನು ಉಳಿಸುವ ಕಲೆಯಾಗಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.

ಹೊನ್ನಾವರ: ಪಟ್ಟಣದ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆ ಅಭಿನಂದನಾ ಸಮಿತಿ ವತಿಯಿಂದ ಹಮ್ಮಿಕೊಂಡ “ಯಲಗುಪ್ಪಾ ಯಕ್ಷಾರ್ಚನೆ” ಯಕ್ಷಗಾನ ಕಲಾವಿದ ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆ ಅವರ ಅಭಿನಂದನೆ-ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

 ಕಲೆ ಹಾಗೂ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯವಾಗಬೇಕು. ಯಲಗುಪ್ಪಾ ಸುಬ್ರಹ್ಮಣ್ಯ ಯಕ್ಷರಂಗದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಮೇರು ಕಲಾವಿದರಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.  ಮುಂಗಾರುಮಳೆ ಚಿತ್ರದ  ನಟಿ ಪೂಜಾ ಗಾಂಧಿ ಮಾತನಾಡಿ ಸುಬ್ರಹ್ಮಣ್ಯ ಹೆಗಡೆಯವರ ಯಕ್ಷಗಾನ ನೃತ್ಯ ನನ್ನನ್ನು ಮಂತ್ರಮುಗ್ದವನ್ನಾಗಿ ಮಾಡಿತು ಎಂದರು.

ಯಕ್ಷಗಾನ ಈ ನಾಡಿದ ಕಲೆ. ವಿಶ್ವದರ್ಜೆಗೇರಿದ ಕಲೆ. ನಮ್ಮ ಭಾಷೆ, ಸಂಸ್ಕೃತಿ ಉಳಿಸುವ ಕಲೆ ಎಂದು ಬಣ್ಣಿಸಿದರು. ಕನ್ನಡ ಉತ್ಸವ ಒಂದು ತಿಂಗಳಕ್ಕೆ ಮೀಸಲಾಗದೇ ವರ್ಷವಿಡೀ ನಡೆಯಬೇಕು ಎಂದ ಅವರು ಕನ್ನಡವನ್ನು ಹೆಚ್ವು ಮಾತನಾಡಿ. ಕನ್ನಡವನ್ನು ಉಳಿಸಬೇಕು ಎಂದರು. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಮಾತನಾಡಿ ಸುಬ್ರಹ್ಮಣ್ಯ ಹೆಗಡೆ ಕಲಾ ನೈಪುಣ್ಯತೆ, ಪೌರಾಣಿಕ ಜ್ಞಾನ ಹೊಂದಿದ ಕಲಾವಿದ ಎಂದರು.

ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಅವರನ್ನು ದಂಪತಿ ಸಮೇತ ಸನ್ಮಾನಿಸಲಾಯಿತು. ಸುಬ್ರಹ್ಮಣ್ಯ ಹೆಗಡೆ ಅವರಿಗೆ 5ಲಕ್ಷ ರೂ.ಗಳ ಮೊತ್ತದ ಕಲಾಕಾಣಿಕೆಯನ್ನು ಅರ್ಪಿಸಲಾಯಿತು. ಪ್ರೋ. ಪವನ ಕುಮಾರಕೆರೆ ಅಭಿನಂದನಾ ನುಡಿಗಳನಾಡಿ ಸುಬ್ರಹ್ಮಣ್ಯ ಹೆಗಡೆ ಅವರು ಪೋಷಿಸಿಕೊಂಡು ಬಂದ ಸ್ರ‍್ತೀ ಪಾತ್ರದ ದಾಖಲೀಕರಣ ಆಗಬೇಕು ಎಂದರು.

ಸನ್ಮಾನ ಸ್ವೀಕರಿಸಿದ ಸುಬ್ರಹ್ಮಣ್ಯ ಹೆಗಡೆ ತನ್ನ ಯಕ್ಷಜೀವನದಲ್ಲಿ ಪ್ರೋತ್ಸಾಹ ನೀಡಿದವರನ್ನು ಸ್ಮರಿಸಿ ಮಾತನಾಡಿ ಎಲ್ಲರ ಆಶೀರ್ವಾದದ ಫಲ ತನ್ನನ್ನು ಬೆಳೆಸಿದೆ ಎಂದರು.
ಅಭಿನಂದನಾ ಸಮಿತಿ ಅಧ್ಯಕ್ಷ ರಾಜೇಶ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ 35 ವರ್ಷಗಳ ಸುದೀರ್ಘ ಕಾಲದಿಂದ ಯಕ್ಷಗಾನ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಜಿ.ಪಂ. ನಿಕಟಪೂರ್ವ ಸದಸ್ಯ ಶಿವಾನಂದ ಹೆಗಡೆ ಕಡತೋಕಾ, ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ, ಸಮಾಜಿಕ ಕಾರ್ಯಕರ್ತ ಮಂಜುನಾಥ ನಾಯ್ಕ ಕುಮಟಾ, ಯಕ್ಷಗಾನ ಅಕಾಡಮಿ ಸದಸ್ಯ ವಿದ್ಯಾಧರ ಜಲವಳ್ಳಿ, ಜ್ಯೋತಿಷಿ ಅನಂತಣ್ಣ ಗಂಗೆ ಹಿರೇಮನೆ, ನಾಗರಾಜ ನಾಯಕ ಅಂಕೋಲ, ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಮಾತನಾಡಿದರು.

ವೇದಿಕೆಯಲ್ಲಿ ಡಾ.ಪ್ರಕಾಶ ನಾಯ್ಕ, ಶ್ರೀಕಾಂತ ಮೊಗೇರ ಮತ್ತಿತರರು ಉಪಸ್ಥಿತರಿದ್ದರು. ನಟ ರಮೇಶ ಅರವಿಂದ ಅವರ ಶುಭಾಶಯಗಳ ವಿಡಿಯೋ ಪ್ರದರ್ಶಿಸಲಾಯಿತು.
ನಾಗರಾಜ ಹೆಗಡೆ ಖಾಸ್ಕಂಡ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಅಂಗವಾಗಿ ಖ್ಯಾತ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!