ಹೊನ್ನಾವರ: ಮಕ್ಕಳ ದಿನಾಚರಣೆಯ ಅಂಗವಾಗಿ ಪಿಎಂಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಹರ್ಷ ಮಹೇಶ್ ಹರಿಕಾಂತ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ, ಶಾಲೆಯಲ್ಲಿ ಮೆರವಣಿಗೆ ಮೂಲಕ ಭವ್ಯ ಸ್ವಾಗತ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಜಿತ್ ನಾಯ್ಕ ಮಾತನಾಡಿ, ಮಕ್ಕಳ ದಿನಾಚರಣೆಯ ಅಂಗವಾಗಿ ವಿಶೇಷ ಮತ್ತು ವಿಶಿಷ್ಟವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಇಲ್ಲಿನ ಶಿಕ್ಷಕರು ನಿಷ್ಠೆಯಿಂದ ನೆರವೇರಿಸುತ್ತಿರುವುದರಿಂದ ಪ್ರತಿವರ್ಷ ಶಾಲೆಗೆ ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸುತ್ತಿವೆ. ನಮ್ಮ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೂ ಸಾಧಿಸಲಿ ಎಂದು ಹಾರೈಸಿದರು.
ಗ್ರಾಮ ಪಂಚಾಯತ್ ಪಿಡಿಓ ಜಿ.ಎಲ್. ನಾಯ್ಕ ಮಾತನಾಡಿ, ಜೀವನದಲ್ಲಿ ಜನ್ಮ ನೀಡಿದವರೂ, ವಿದ್ಯೆ ನೀಡಿದವರೂ ಇವರಿಬ್ಬರ ಋಣ ತೀರಿಸಲಾಗದು. ಶಿಕ್ಷಕರು ಮಕ್ಕಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಉತ್ತಮ ಜೀವನ ರೂಪಿಸಲು ನಿಸ್ವಾರ್ಥ ಸೇವೆ ನೀಡುತ್ತಿದ್ದಾರೆ, ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಎಸ್‌ಡಿಎಂಸಿ ಅಧ್ಯಕ್ಷ ಅರುಣ್ ಹಬ್ಬು ಮಾತನಾಡಿ ಪಿಎಂಶ್ರೀ ಹಳದಿಪುರ ಶಾಲೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ಇದಕ್ಕೆ ಪಾಲಕರು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಒಟ್ಟಿನ ಸಹಕಾರ ಕಾರಣ. ಶಾಲೆಗೆ ಕೊಠಡಿಗಳ ಕೊರತೆಯಿದ್ದು, ಪೂರ್ವದಲ್ಲಿ ಸಚಿವರು ಆರು ಕೊಠಡಿಗಳನ್ನು ಮಂಜೂರು ಮಾಡುವ ಭರವಸೆ ನೀಡಿದ್ದರು. ಇದನ್ನು ಶೀಘ್ರ ನೆರವೇರಿಸಿದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮನರಂಜನಾ ಕಾರ್ಯಕ್ರಮ ಮತ್ತು ಪಾಲಕರ ಶಿಕ್ಷಕರ ಮಹಾಸಭೆ ಜರುಗಿತು. ಕಾರ್ಯಕ್ರಮದಲ್ಲಿ ಸಿ.ಆರ್.ಪಿ ನಾಗವೇಣಿ, ಗ್ರಾಮ ಆಡಳಿತಾಧಿಕಾರಿ ವೈಭವಿ ಭಂಡಾರಿ, ಶಾಲಾ ಮುಖ್ಯಾಧ್ಯಾಪಕಿ ನಸೀಮಾ ಬಾನು ಸೇರಿದಂತೆ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಮಹತೋಭಾರ ಸೇನೇಶ್ವರ ದೇವಸ್ಥಾನ ಉತ್ಸವ ಮೂರ್ತಿ ವನಭೋಜನ
ವತ್ತಿನಕಟ್ಟೆ ಮಹಾಸತಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ
ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ, ಶಿರೂರು- ಸುತ್ತುಪೌಳಿ ನವೀಕರಣಕ್ಕೆ ಚಾಲನೆ