ಹೊನ್ನಾವರ : ಸ್ವಾತಂತ್ರ‍್ಯ ಪೂರ್ವದಿಂದಲೇ ಸಂಘ-ಸAಸ್ಥೆಗಳು, ಮಠಮಾನ್ಯಗಳು ಅನುದಾನಿತ ಶಾಲೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣ ನೀಡುತ್ತಾ, ಶೈಕ್ಷಣಿಕ ಕ್ರಾಂತಿಗೆ ಕಾರಣವಾದ ಅನುದಾನಿತ ಸಂಸ್ಥೆಗಳು ಪ್ರಸ್ತುತ ಸರ್ಕಾರದ ಅವೈಜ್ಞಾನಿಕ ಸುತ್ತೋಲೆಗಳಿಂದ ಪ್ರತಿವರ್ಷವೂ ಮಾನ್ಯತೆ ನವೀಕರಣದ ಪ್ರಕ್ರಿಯೆ ಜಟೀಲವಾಗುತ್ತಿರುವುದರಿಂದ ತೊಂದರೆ ಅನುಭವಿಸುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಈ ವಿಷಯಗಳನ್ನು ಸಂಘವು ಕಾಲಕಾಲಕ್ಕೆ ಸರ್ಕಾರದ ಗಮನಕ್ಕೆ ತಂದರೂ, ಆ ವಿಷಯಗಳನ್ನು ಪರಿಗಣಿಸದೇ ಇರುವುದನ್ನು ಗಮನಿಸಿದಾಗ, ಅನುದಾನಿತ ಸಂಸ್ಥೆಗಳನ್ನು ಮುಚ್ಚುವ ಹುನ್ನಾರಕ್ಕೆ ಪರೋಕ್ಷವಾಗಿ ಸರ್ಕಾರ ತಯಾರಿ ನಡೆಸುತ್ತಿದೆಯೇ ಎಂದು ಪ್ರಶ್ನಿಸಬೇಕಾಗುತ್ತದೆ. 2015 ರಿಂದ ಅನುದಾನಿತ ಸಂಸ್ಥೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡದೇ ಇದ್ದುದರಿಂದ, ಅನುದಾನಿತ ಶಾಲೆಗಳಲ್ಲಿ ಅನುಭವಿ ಶಿಕ್ಷಕರ ಕೊರತೆಯಿಂದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕುಸಿತ ಕಂಡಿರುವುದು ಸ್ವಾಭಾವಿಕ. ಫಲಿತಾಂಶ ಕುಸಿತದಿಂದ ಆದ ಪರಿಣಾಮದಿಂದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿರುವುದು ಸರ್ಕಾರ ಗಂಭೀರವಾಗಿ ಯೋಚಿಸಬೇಕಾದ ವಿಷಯವಾಗಿದೆ. ಆಡಳಿತ ಮಂಡಳಿಗಳು ಈ ಎಲ್ಲಾ ಕಷ್ಟಗಳ ಮಧ್ಯೆ ಆರ್ಥಿಕ ಸಂಕಷ್ಟದಿAದ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವಾಗ, ಸರ್ಕಾರಿ ಶಾಲೆಗಳಿಗೆ ಇಲ್ಲದ ಮಾನದಂಡಗಳನ್ನು, ಅನುದಾನಿತ ಶಾಲೆಗಳಿಗೆ ಮಾನ್ಯತೆ ನವೀಕರಣದ ಸಂದರ್ಭದಲ್ಲಿ ಇಲ್ಲ ಸಲ್ಲದ ಕಾಗದಪತ್ರಗಳನ್ನು ಪೂರೈಸಬೇಕೆಂಬ ಶರತ್ತುಗಳನ್ನು ವಿಧಿಸಿ ತೊಂದರೆ ಕೊಡುತ್ತಿರುವುದು ಖಂಡನೀಯ ವಿಚಾರವಾಗಿದೆ.
ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು 15 ಮೀಟರಗಿಂತ ಕಡಿಮೆ ಎತ್ತರದಲ್ಲಿ ನಿರ್ಮಾಣವಾದ ಕಟ್ಟಡಗಳಿಗೆ ಅಗ್ನಿನಂದಕದಿAದ ವಿನಾಯಿತಿ ಇದೆ ಎಂದು ನೀಡಿದ ತೀರ್ಪನ್ನು ಈ ತನಕವು ಸರ್ಕಾರ ಆದೇಶಹೊರಡಿಸಿ ಜಾರಿಗೆ ಮಾಡದೇ ಇರುವುದನ್ನು ಶಿಕ್ಷಣ ಸಂಸ್ಥೆಗಳು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು. ಮುಂದುವರಿದು ಅಗ್ನಿನಂದಕದ ಅಳವಡಿಕೆಯೊಂದಿಗೆ ಅಗ್ನಿ ಸುರಕ್ಷಾ ಪ್ರಮಾಣ ಪತ್ರ,ಭೂ ಪರಿವರ್ತನೆ ಕಾಗದ ಪತ್ರಗಳು, ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಮತ್ತು ಹಳೆಯ ಶಾಲೆಯ ಮುದ್ಧಿತ ಠೇವಣಿ ಪ್ರತಿಗಳನ್ನು ಕಡ್ಡಾಯವಾಗಿ ನವೀಕರಣದ ದಾಖಲೆಗಳಲ್ಲಿ ಸೇರಿಸಿರುವುದು ನವೀಕರಣ ಪ್ರಕ್ರಿಯೆಗೆ ತೊಂದರೆಯಾಗಿದೆ. ಪ್ರತಿ ವರ್ಷವೂ ನವೀಕರಣ ಮಾಡುವ ಸಂದರ್ಭದಲ್ಲಿ ಆನ್ಲೈನ್ ನಲ್ಲಿ ಸುಮಾರು 50 ದಾಖಲೆಗಳನ್ನು ಪಟ್ಟಿ ಮಾಡಿ ಅದರೊಂದಿಗೆ 10,000 ಸಂಸ್ಕರಣಾ ಶುಲ್ಕವನ್ನು ಕಟ್ಟಬೇಕಾಗಿರುವುದು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಹೊರೆಯಾಗಿದೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷಾ ನೋಂದಣಿ ಆಗುತ್ತಿರುವ ಮತ್ತು ಗುಣಮಟ್ಟದ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಪಡೆಯಬೇಕಾದ ಅನಿವಾರ್ಯತೆ ಶಿಕ್ಷಕ ಸಮೂಹಕ್ಕೆ ಇರುವ ಈ ಸಂದರ್ಭದಲ್ಲಿ ಮಾನ್ಯತೆ ನವೀಕರಣ ಆಗದೇ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸರ್ಕಾರ ನಗಣ್ಯ ಭಾವನೆ ತೋರುತ್ತಿರುವುದು ಖಂಡನೀಯ ವಿಚಾರವಾಗಿದೆ. ಮೂಲಭೂತ ಅವಶ್ಯಕತೆಗಳು ಇದ್ದಾಗಲೂ ಕಾರಣಾಂತರದಿAದ ವಿದ್ಯಾರ್ಥಿಗಳ ಸಂಖ್ಯೆ ಒಂದು ತರಗತಿಯಲ್ಲಿ ಮೂವತ್ತಕ್ಕಿಂತ ಕಡಿಮೆ ಇದ್ದಾಗ ಮಾನ್ಯತೆ ಕೊಡುವ ಸಂದರ್ಭದಲ್ಲಿ ಈ ವಿಷಯವನ್ನು ಅನವಶ್ಯಕವಾಗಿ ಪರಿಗಣಿಸಿ ತೊಂದರೆ ಕೊಡುತ್ತಿರುವುದು ಗಮನಕ್ಕೆ ಬಂದಿದೆ.
ಸರ್ಕಾರ ಮಾನ್ಯತೆ ಕೊಡುವ ಸಂದರ್ಭದಲ್ಲಿ ಒಂದು ವರ್ಷ ಕೊಡುವ ಬದಲು ಕನಿಷ್ಠ ಮೂರು,ಐದು ಅಥವಾ ಹತ್ತು ವರ್ಷಕ್ಕೆ ನೀಡುವ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಮಾನ್ಯತೆ ಪ್ರಕ್ರಿಯೆಯನ್ನು ಕೂಡಲೇ ಸರಳೀಕರಿಸಿ ಮಾನ್ಯತೆ ನವೀಕರಣ ಮಾಡಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳನ್ನು ಅತಿ ಶೀಘ್ರದಲ್ಲಿ ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಬೇಕು. ಗುಡ್ಡಗಾಡು ಪ್ರದೇಶ, ಗಡಿ ಪ್ರದೇಶ ಮತ್ತು ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಕನಿಷ್ಠ ಸಂಖ್ಯೆಗಳಿಗೆ ವಿನಾಯತಿ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲೆಗಳಿಗೂ ವಿಸ್ತರಿಸಬೇಕು.
ಅನುದಾನಿತ ಶಿಕ್ಷಣ ಸಂಸ್ಥೆಗಳಿAದ ಗುಣಮಟ್ಟದ ಫಲಿತಾಂಶವನ್ನು ನಿರೀಕ್ಷೆ ಮಾಡುವ ಸರ್ಕಾರ ಈ ಮೇಲಿನ ಎಲ್ಲ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಈಗಾಗಲೇ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿ,ಪಾಲಕರಲ್ಲಿ ಮತ್ತು ಶಿಕ್ಷಕ ಸಮೂಹದಲ್ಲಿ ಆಕ್ರೋಶದ ವಾತಾವರಣ ಸೃಷ್ಟಿಯಾಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮೇಲಿನ ಎಲ್ಲ ಬೇಡಿಕೆಗಳನ್ನ ಶೀಘ್ರ ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷರಾದ ಶ್ರೀ ಎಲ್. ಎಮ್. ಹೆಗಡೆ ಮತ್ತು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರಭಾಕರ ಬಂಟ ಸರ್ಕಾರಕ್ಕೆ ಮನವಿ ಸಲ್ಲಿಸಿ,ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಶಿಕ್ಷಕರು, ಆಡಳಿತ ಮಂಡಳಿಯವರು ಜಂಟಿಯಾಗಿ ಹೋರಾಟದ ಮಾರ್ಗ ಅನುಸರಿಸಿ, ಬೇಡಿಕೆ ಈಡೇರಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಈ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

More Stories
ಕೆರೆಕೋಣ ಶಾಲೆಯಲ್ಲಿ ಶಿಕ್ಷಕಿ ಲಲಿತಾ ಹೆಗಡೆಯವರಿಗೆ ಬೀಳ್ಕೊಡುಗೆ ಮತ್ತು CCTV ಉದ್ಘಾಟನಾ ಕಾರ್ಯಕ್ರಮ ಸಂಪನ್ನ
ಶ್ರೀ ಸತ್ಯಸಾಯಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಯಶಸ್ವಿಯಾಗಿ ಸುಸಂಪನ್ನ
ಉತ್ತರ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಂಘಟನೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಕ್ರಿಸ್ಮಸ್ ಗೀತಾ ಸ್ಪರ್ಧಾ ಕಾರ್ಯಕ್ರಮ