593 ಕೋಟಿಗಳ ರಾಮನಾಮ ಜಪವೇ ಮಠದ ಜೀರ್ಣೋದ್ಧಾರದ ಹಿಂದಿನ ಶಕ್ತಿ:
ಪರ್ತಗಾಳಿ (ಗೋವಾ): ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಇಷ್ಟೊಂದು ಭವ್ಯವಾಗಿ ಜೀರ್ಣೋದ್ಧಾರಗೊಳ್ಳಲು, ಪ್ರಧಾನಿ ನರೇಂದ್ರ ಮೋದಿಯವರಂತಹ ಗಣ್ಯರು ಇಲ್ಲಿಗೆ ಆಗಮಿಸಲು ಮತ್ತು ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪನೆಗೊಳ್ಳಲು 593 ಕೋಟಿ ರಾಮ ತಾರಕ ಮಂತ್ರವೇ ಕಾರಣ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ನುಡಿದರು.
ಮಠದಲ್ಲಿ ದಶ ದಿನಗಳ ಕಾಲ ನಡೆದ ಸಾರ್ಧ ಪಂಚಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಧರ್ಮ ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಪಾದ ವಡೇರ್ ಸ್ವಾಮೀಜಿಯವರು, ಈ ಕಾರ್ಯಕ್ರಮದ ನಿರ್ವಿಘ್ನ ನೆರವೇರಿಕೆಗೆ ರಾಮನಾಮದ ಶಕ್ತಿಯೇ ಕಾರಣ ಎಂದು ಒತ್ತಿ ಹೇಳಿದರು.
550 ಕೋಟಿ ಜಪದ ಸಂಕಲ್ಪ, 593 ಕೋಟಿಗಳ ಸಾಧನೆ.
ಮಠಕ್ಕೆ 550 ವರ್ಷಗಳು ಪೂರ್ಣಗೊಳ್ಳುತ್ತಿರುವ ಶುಭ ಸಂದರ್ಭದಲ್ಲಿ, ಕೇವಲ 550 ದಿನಗಳಲ್ಲಿ 550 ಕೋಟಿ ರಾಮ ತಾರಕ ಮಂತ್ರ ಜಪ ಮಾಡಬೇಕೆಂದು ಸಂಕಲ್ಪ ಮಾಡಿದ್ದೆ. ಆದರೆ, ಅದು ರಾಮನ ಅನುಗ್ರಹದಿಂದ 593 ಕೋಟಿ ಜಪವಾಗಿ ಪೂರ್ಣಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಮಹತ್ವದ ಸಾಧನೆಯ ಶ್ರೇಯ 120 ಜಪ ಕೇಂದ್ರ, 104 ಉಪ ಕೇಂದ್ರದ ಸೇವಾಕರ್ತರು, ನಮ್ಮ ಸಮಾಜದ, ಮಠಾಧೀಶರು, ಎಲ್ಲಾ ಮಠದ ಸಮಸ್ತ ಶಿಷ್ಯ ವರ್ಗಕ್ಕೆ ಹಾಗೂ ಸಮಾದ ಸರ್ವರಿಗೂ ಸಲ್ಲಬೇಕು ಎಂದು ಅವರು ಹೇಳಿದರು.
ಪೀಠದ ಮಹಿಮೆ, ಶ್ರೀರಾಮನ ಅನುಗ್ರಹ.
ಪ್ರೀಯ ಗುರು ವಿದ್ಯಾಧಿರಾಜರ ಶಿಷ್ಯನಾದಾಗ ನನಗೆ ಯಾವುದೇ ಅನುಭವ ಇರಲಿಲ್ಲ. ದೈವ ಅಗ್ನಿಪರೀಕ್ಷೆ ನೀಡುತ್ತಿದ್ದಾನೇನೋ ಎಂದು ಅಂದುಕೊAಡಿದ್ದೆ. ಆದರೆ, ಈ ಪೀಠದಲ್ಲಿ ಕುಳಿತಾಗ ಎಲ್ಲವೂ ಪೀಠದ ಮಹಿಮೆಯಂತೆ ಆಗುತ್ತಿದೆ. ಈ ಎಲ್ಲದಕ್ಕೂ ರಾಮ ತಾರಕ ಮಂತ್ರ, ಗುರುಪೀಠದ ಶಕ್ತಿ ಮತ್ತು ಶ್ರೀರಾಮ ನೀಡಿದ ಅನುಗ್ರಹವೇ ಕಾರಣ. ಪ್ರತಿ ಸಂದರ್ಭದಲ್ಲೂ ಶ್ರೀರಾಮ ಶಕ್ತಿ ನೀಡಿದ್ದಾರೆ; ಪ್ರತಿ ಹೆಜ್ಜೆಯನ್ನು ಕೈ ಹಿಡಿದು ನಡೆಸಿದ್ದಾನೆ ಎಂದು ಶ್ರೀಪಾದ ವಡೇರ್ ಸ್ವಾಮೀಜಿ ಭಾವುಕರಾದರು.
ದಶ ದಿನಗಳ ಈ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದ ಅವರು, ಸಾರ್ಧ ಪಂಚಶತಮಾನೋತ್ಸವದಲ್ಲಿ ಸಮುದಾಯವೆಲ್ಲವೂ ಹೇಗೆ ಒಗ್ಗೂಡಿ ಸಂತೋಷದಿAದ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಂಡಿದೆಯೋ, ಹಾಗೆಯೇ ಎಲ್ಲರ ಜೀವನದಲ್ಲಿ ಒಗ್ಗಟ್ಟು ಮತ್ತು ಸುಖ ಪ್ರಾಪ್ತಿಯಾಗಲಿ ಎಂದು ಹಾರೈಸಿದರು.
ಸಭೆಯಲ್ಲಿ ಮಠ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಡೆಂಪೋ ಸ್ವಾಗತಿಸಿದರು. ರಾಮಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಶಿವಾನಂದ ಸಾಲಗಾಂವಕರ್, ಆರ್.ಆರ್.ಕಾಮತ್, ಕೆ.ಎಸ್ ಪ್ರಭು ಮುಂಬಯಿ, ಪವನ ಪ್ರಭು ಹುಬ್ಬಳ್ಳಿ, ಎನ್. ಎನ್. ಪಾಲ, ಅಣ್ಣಪ್ಪ ಕಾಮತ ಬೆಂಗಳೂರು, ದಿನೇಶ ಪೈ ಹುಬ್ಬಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಭಟ್ಕಳದ ಪ್ರಸನ್ನ ಪ್ರಭು ಕಾರ್ಯಕ್ರಮ ನಿರೂಪಿಸಿದರು

More Stories
ಜಯ ಕರ್ನಾಟಕ ಸಂಘಟನೆಯಿಂದ ಕೆ.ಆರ್. ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ,
ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಪರ್ತಗಾಳಿ ಮಠಕ್ಕೆ ಭೇಟಿ
ಬಿಹಾರದಿಂದ ಪರ್ತಗಾಳಿಗೆ, ನಾಯಕತ್ವದಿಂದ ಭಕ್ತಿಗೆ, ಸಾರ್ಧ ಪಂಚಶತಮಾನೋತ್ಸವಕ್ಕೆ ಮೈಥಿಲಿ ಠಾಕೂರ್