December 23, 2025

ಉಚಿತ ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣಾ ಶಿಬಿರ

ಗ್ರಾಮೀಣ ಪ್ರದೇಶದ ಜನರ ಸ್ವಾವಲಂಬಿ ಬದುಕಿಗೆ, ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವರದಾನ ವಾಗಿದೆ. ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ, ಆರ್‌ಟಿಓ ಮಲ್ಲಿಕಾರ್ಜುನ ಅಭಿಮತ. ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬದ್ಧತೆಯಿಂದ ಕೆಲಸ ಮಾಡುತ್ತಾ ಸಮರ್ಥವಾಗಿ ಮುನ್ನಡೆಯುತ್ತಿದೆ ಎಂದು ಧರ್ಮಸ್ಥಳ ಜನಜಾಗ್ರತಿ ವೇದಿಕೆಯ ಚನ್ನರಾಯಪಟ್ಟಣ ಜಿಲ್ಲಾಧ್ಯಕ್ಷ ಆರ್‌ಟಿಓ ಮಲ್ಲಿಕಾರ್ಜುನ್ ಹೇಳಿದರು. ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಕಛೇರಿಯ ಸಭಾಂಗಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ, ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದ ಗ್ರಾಮೀಣ ಫಲಾನುಭವಿಗಳಿಗೆ ಕನ್ನಡಕಗಳನ್ನು ವಿತರಿಸಿ ಮಾತನಾಡಿದರು. ಒಂದು ಚುನಾಯಿತ ಸರ್ಕಾರವು ಮಾಡಲಾಗದ ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಕೆಲಸ, ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಖಾವಂದರು ಬದ್ಧತೆಯಿಂದ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ವೃತ್ತಿ ಕೌಶಲ್ಯ ಮಾರ್ಗದರ್ಶನ ನೀಡುವ ಜೊತೆಗೆ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯವನ್ನು ಕೊಡಿಸಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ ಕೆಲಸ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಆತ್ಮವಿಶ್ವಾಸದಿಂದ ಸ್ವಾವಲಂಬಿಗಳಾಗಿ ಕೆಲಸ ಮಾಡಿ ತಮ್ಮ ಕುಟುಂಬ ಸೇರಿದಂತೆ ಇಡೀ ಸಮಾಜವನ್ನೇ ಮುನ್ನಡೆಸುವ ಮೂಲಕ ಮಹಿಳಾ ಶಕ್ತಿಯ ಪ್ರತೀಕವಾಗಿ ಹೊರಹೊಮ್ಮಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದ ಜನರು ಬೇಡುವ ಎಲ್ಲಾ ಕಾರ್ಯಕ್ರಮಗಳನ್ನು ನೀಡುವ ಕಾಮಧೇನು ಕಲ್ಪವೃಕ್ಷದಂತೆ ಕೆಲಸ ಮಾಡುತ್ತ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ದುಡಿಯುತ್ತಿದೆ ಎಂದು ಮಲ್ಲಿಕಾರ್ಜುನ ಅಭಿಮಾನದಿಂದ ಹೇಳಿದರು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಕ್ಕಿಹೆಬ್ಬಾಳು ಗ್ರಾಮದ ಹೇಮಾವತಿ ಹೊನ್ನಾರು ವೇದಿಕೆ, ಸಾಕ್ಷಿಬೀಡು ಗ್ರಾಮದ ಶ್ರೀ ಲಕ್ಷ್ಮಿದೇವಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್, ಬೂಕನಕೆರೆ ಹೋಬಳಿಯ ಅಟ್ಟುಪ್ಪೆ ಗ್ರಾಮದ ಶ್ರೀ ಮಾರಮ್ಮ ದೇವಸ್ಥಾನ ಹಾಗೂ ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ತಲಾ 50,000 ರೂಪಾಯಿಗಳ ಸಹಾಯ ಧನದ ಚೆಕ್ಕುಗಳನ್ನು ವಿತರಿಸಿದರು. ಮಂಡ್ಯ ಜಿಲ್ಲಾ ಕಿವುಡರ ಸಂಘ ಅನಾರೋಗ್ಯದಿಂದ ಬಳಲುತ್ತಿರುವ ಗಂಜಿಗೆರೆ ಮಂಜೇಗೌಡ ಹೊಸ ಹೊಳಲು ಜಯಲಕ್ಷ್ಮಿ ದೊಡ್ಡಯಾಚನೆ ಹಳ್ಳಿ ಸೋಮಶೇಖರ್ ಹಾಗೂ ಬಿಹಾರದಲ್ಲೇ ನಡೆಯುತ್ತಿರುವ ರಾಷ್ಟ್ರಮಟ್ಟದ ಸೈಕಲ್ ಪೋಲೋ ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಲಂಬಾಡಿ ಕಾವಲು ಗ್ರಾಮದ ವಿದ್ಯಾರ್ಥಿಗಳಾದ ಪ್ರೀತಂ ಮತ್ತು ಅಜಯ್ ಅವರಿಗೆ ಆರ್ಥಿಕ ಸಹಾಯ ನೀಡಿ ಗೌರವಿಸಿ ಬೀಳ್ಕೊಡಲಾಯಿತು. ಧರ್ಮಸ್ಥಳ ಜನಜಾಗೃತಿ ವೇದಿಕೆಯ ಚನ್ನರಾಯಪಟ್ಟಣ ಜಿಲ್ಲಾ ಉಪಾಧ್ಯಕ್ಷರಾದ ನಳಿನಾ, ಸದಸ್ಯರಾದ ಅಕ್ಕಿಹೆಬ್ಬಾಳು ರಘು, ಮೊಟ್ಟೆಮಂಜು , ಸುನಿತಾ ದಯಾನಂದ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣ ತಿಲಕ್, ಕೆ.ಆರ್.ನೀಲಕಂಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಡಾಕ್ಟರ್ ಯೋಗೇಶ್ ತಾಲೂಕು ಯೋಜನಾಧಿಕಾರಿಗಳಾದ ತಿಲಕರಾಜ್, ಪ್ರಸಾದ್, ಮೇಲ್ವಿಚಾರಕರಾದ ಸಂಗೀತ, ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಟ್ರಸ್ಟಿ ಗಂಜಿಗೆರೆ ಮಹೇಶ್, ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ವಾಸುರಾಜೇಗೌಡ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎನ್.ಪ್ರವೀಣ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭುದೇವೆಗೌಡ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!