December 23, 2025

ಸಮಾಜಕ್ಕೆ ಮಾದರಿ: ಭಟ್ಕಳದಲ್ಲಿ ಆಟೋ ಚಾಲಕರ ರಕ್ತದಾನ ಶಿಬಿರ

ಭಟ್ಕಳ: ತಾಲೂಕಿನ ರಿಕ್ಷಾ ಚಾಲಕರ ಸಂಘ, ತಾಲೂಕಾ ಆಸ್ಪತ್ರೆ ಭಟ್ಕಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಶಿಬಿರವನ್ನು ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಜಾಲಿಯ ಅಧ್ಯಕ್ಷ ವಸಂತ ಎಂ. ನಾಯ್ಕ ಉದ್ಘಾಟಿಸಿ ಮಾತನಾಡಿ, “ಇದು ಕೇವಲ ಕಾರ್ಯಕ್ರಮವಲ್ಲ, ಒಂದು ಜೀವ ಉಳಿಸುವ ಮಾನವೀಯ ಸೇವೆ. ರಕ್ತವನ್ನು ಯಾವುದೇ ಕಾರ್ಖಾನೆಗಳಲ್ಲಿ ತಯಾರಿಸಲು ಸಾಧ್ಯವಿಲ್ಲ. ಅದರ ಅಗತ್ಯ ಬಂದಾಗ ಮಾತ್ರ ಅದರ ಮೌಲ್ಯ ಸ್ಪಷ್ಟವಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು ಹಾಗೂ ತುರ್ತು ಚಿಕಿತ್ಸೆ ಅಗತ್ಯವಿರುವ ಸಂದರ್ಭಗಳಲ್ಲಿ ರಕ್ತದ ಕೊರತೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ರಿಕ್ಷಾ ಚಾಲಕರು ಸೇವಾಭಾವದಿಂದ ಶಿಬಿರ ಆಯೋಜಿಸಿರುವುದು ಸಮಾಜಕ್ಕೆ ಸ್ಪೂರ್ತಿದಾಯಕ,” ಎಂದು ಹೇಳಿದರು.

ಶಿಬಿರದಲ್ಲಿ ಒಟ್ಟು 55 ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ರಿಕ್ಷಾ ಚಾಲಕರ ಜೊತೆಗೂಡಿ ಭಟ್ಕಳ ತಾಲೂಕಾ ಸರ್ಕಾರಿ ಆಸ್ಪತ್ರೆಯ ಡಾ. ಪ್ರಕಾಶ್ ನಾಯ್ಕ ಅವರು ಕೂಡ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅರುಣಕುಮಾರ್ ಎನ್.ಎ. ವಹಿಸಿದ್ದರು.

ಈ ಸಂದರ್ಭದಲ್ಲಿ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ, ತಾಲೂಕಾ ಆರೋಗ್ಯಾಧಿಕಾರಿ ಡಾ. ಪಟೇಲ್ ರಾಹಿಲಾ ಸನಾ ಮಸೂದ್, ಉಡುಪಿ ಜಿಲ್ಲಾ ಆಸ್ಪತ್ರೆಯ ಡಾ. ವೀಣಾ ಕುಮಾರಿ, ಡಾ. ಸವಿತಾ ಕಾಮತ್, ಡಾ. ಸತೀಶ್ ಬಿ., ನಜೀರ್ ಕಾಶಿಮ್ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!