December 24, 2025

ಹಿರೇಗುತ್ತಿ ಹೈಸ್ಕೂಲಿಗೆ ಗುರುಪ್ರಸಾದ ಗಾಂವಕರ ಕುಟುಂಬದಿಂದ ಲ್ಯಾಪ್‌ಟಾಪ್ ಕೊಡುಗೆ

ಕುಮಟಾ: ಮಹಾತ್ಮ ಗಾಂಧಿ ವಿದ್ಯಾವರ್ಧಕ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗುವಂತೆ ಗುರುಪ್ರಸಾದ ಗಣಪತಿ ಗಾಂವಕರ ಹಾಗೂ ಅಪೇಕ್ಷಾ ಗಾಂವಕರ ದಂಪತಿ ಹಾಗೂ ಸುಪುತ್ರಿ ಕುಮಾರಿ ಅದಿತ್ರಿ ಗಾಂವಕರ ರವರು ಲ್ಯಾಪ್‌ಟಾಪ್‌ನ್ನು ಹೈಸ್ಕೂಲಿಗೆ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅಪೇಕ್ಷಾ ಗಾಂವಕರ, “ಹಿರೇಗುತ್ತಿ ಹೈಸ್ಕೂಲಿನೊಂದಿಗೆ ತಮ್ಮ ಕುಟುಂಬದ ಆತ್ಮೀಯ ನಂಟನ್ನು ವಿವರಿಸಿ, “ನಮ್ಮ ತಂದೆ ಶ್ರೀ ಗಂಗಾಧರ ಬೀರಣ್ಣ ಕವರಿ, ತಾಯಿ ಸ್ಮೀತಾ ಗಂಗಾಧರ ಕವರಿ, ಚಿಕ್ಕಪ್ಪಂದಿರಾದ ಸದಾನಂದ ಮತ್ತು ವಿವೇಕ ಕವರಿ ಹಾಗೂ ಅತ್ತೆ ರಾಜಶ್ರೀ ಗಾಂವಕರ—ಎಲ್ಲರೂ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಎಂಬುದು ನಮ್ಮ ಹೆಮ್ಮೆ. ಹಿರೇಗುತ್ತಿ ಎಂದರೆ ನಮ್ಮ ಯಜಮಾನರಾದ ಗುರುಪ್ರಸಾದ ಗಾಂವಕರ ಅವರಿಗೆ ವಿಶೇಷ ಪ್ರೀತಿ ಮತ್ತು ಅಭಿಮಾನ,” ಎಂದು ತಿಳಿಸಿದರು”.

ಲ್ಯಾಪ್‌ಟಾಪ್ ಅನ್ನು ಕುಮಾರಿ ಅದಿತ್ರಿ ಗಾಂವಕರ ಅವರು ಹೈಸ್ಕೂಲ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೊನ್ನಪ್ಪ ಎನ್. ನಾಯಕರಿಗೆ ಹಸ್ತಾಂತರಿಸಿದರು.

ಗುರುಪ್ರಸಾದ ಗಾಂವಕರ, “ಶಾಲೆಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ನಿರೂಪಣೆ, ಸ್ವಾಗತ ಭಾಷಣ, ಪರಿಚಯ ಹಾಗೂ ವಂದನಾರ್ಪಣೆ ಮಾಡುವುದರಿಂದ ಅವರಲ್ಲಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆ ವೃದ್ಧಿಯಾಗುತ್ತದೆ. ಇಂತಹ ಕಲಿಕಾ ವಾತಾವರಣಕ್ಕೆ ಈ ಲ್ಯಾಪ್‌ಟಾಪ್ ಹೊಸ ಶಕ್ತಿ ನೀಡಲಿದೆ,” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತ ಮಂಡಳಿಯ ಅಧ್ಯಕ್ಷ ಹೊನ್ನಪ್ಪ ಎನ್. ನಾಯಕ, “ಇಂದಿನ ಕಂಪ್ಯೂಟರ್ ಯುಗದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ಹೆಜ್ಜೆ ಹಾಕುವುದು ಅನಿವಾರ್ಯ. ಈ ಕಂಪ್ಯೂಟರ್ ಕೊಡುಗೆಯಿಂದ ನಮ್ಮ ವಿದ್ಯಾರ್ಥಿಗಳ ಕಲಿಕೆ ಮತ್ತಷ್ಟು ಸಮೃದ್ಧವಾಗಲಿದೆ,” ಎಂದು ಹೇಳಿದರು.

ವಿಜ್ಞಾನ ಶಿಕ್ಷಕ ಮಹಾದೇವ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿ, “ಗುರುಪ್ರಸಾದ ಗಾಂವಕರ ಗೂಗಲ್ ಕಂಪನಿಯಂತಹ ಜಾಗತಿಕ ಸಂಸ್ಥೆಯ ಉನ್ನತ ಹುದ್ದೆ ಅಲಂಕರಿಸಿದ್ದರೂ ಕೂಡ ಅವರ ಸರಳತೆ ಮತ್ತು ವಿಧೇಯತೆ ವಿದ್ಯಾರ್ಥಿಗಳಿಗೆ ಆದರ್ಶವಾಗಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೈಸ್ಕೂಲ್ ಮುಖ್ಯಾಧ್ಯಾಪಕ ವಿಶ್ವನಾಥ ಬೇವಿನಕಟ್ಟಿ ಮಾತನಾಡಿ ದಾನಿಗಳ ಸೇವೆ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಗಣಪತಿ ಗಾಂವಕರ, ಸುನಂದಾ ಗಾಂವಕರ, ಕುಮಾರಿ ಅನಿಕಾ ಗಾಂವಕರ, ಸವಿತಾ ನಾಯಕ ಹಾಗೂ ಹೈಸ್ಕೂಲ್ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸಿಂಧೂ ನಾಯ್ಕ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸೃಜನ ಗೌಡ ಕಾರ್ಯಕ್ರಮ ನಿರೂಪಣೆ ಮಾಡಿದರು, ನಿವೇದಿತಾ ವಂದಿಸಿದರು. ಎನ್. ರಾಮು ಹಿರೇಗುತ್ತಿ ಕಾರ್ಯಕ್ರಮ ಸಂಯೋಜನೆ ಮಾಡಿದರು.

ವರದಿ: ಎನ್ ರಾಮು ಹಿರೇಗುತ್ತಿ

About The Author

error: Content is protected !!