March 2, 2026

ಅರಣ್ಯ ಹಕ್ಕು ಕ್ಲೇಮುದಾರರ ಹಿತರಕ್ಷಣೆಗೆ ಚಂದ್ರಕಾಂತ ಕೊಚರೇಕರ ನೇತೃತ್ವದ ನಿಯೋಗದಿಂದ ಮನವಿ

ಕ್ಲೇಮುಗಳ ಪುನರ್ ಪರೀಶೀಲನೆಯೊಂದಿಗೆ ನ್ಯಾಯದಾನದ ಅಂತಿಮ ಹಂತದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಅರಣ್ಯ ಹಕ್ಕು ಕ್ಲೇಮುದಾರರನ್ನು,ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸದಂತೆ ಮತ್ತು ರೈತರು ಬೆಳೆಸಿದ ಗಿಡ ಮರ,ಫಸಲುಗಳನ್ನು ನಾಶಪಡಿಸದಂತೆ ಅರಣ್ಯ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಮತ್ತು ಅರಣ್ಯ ಹಕ್ಕುಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ವಹಿಸಬೇಕು ಎಂದು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರು ರಾಜ್ಯ ಮಟ್ಟದ ಅರಣ್ಯ ಹಕ್ಕು ಮೇಲ್ವಿಚಾರಣಾ ಸಮಿತಿಯನ್ನು ಮತ್ತು ಸರ್ಕಾರವನ್ನು ಆಗ್ರಹ ಪಡಿಸಿದ್ದಾರೆ.

ಈ ಸಂಬಂಧ ಅವರು ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ,ಅರಣ್ಯ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶೀಯವರಿಗೆ ಪತ್ರ ಬರೆದಿದ್ದು,ಅಗತ್ಯ ಮದ್ಯಪ್ರವೇಶಕ್ಕೆ ಮನವಿಮಾಡಿದ್ದಾರೆ. ಅರಣ್ಯ ಭೂಮಿಯಲ್ಲಿ ಪಾರಂಪರಿಕವಾಗಿ ಸಾಗುವಳಿ ಮಾಡಿ ಜೀವನ ಸಾಗಿಸುತ್ತಿರುವ ಜಿಲ್ಲೆಯ ಕೆಲವು ರೈತರನ್ನು,ಅರಣ್ಯ ಇಲಾಖೆ ಬಲವಂತದಿಂದ ಒಕ್ಕಲೆಬ್ಬಿಸುತ್ತಿದೆ ಮತ್ತು ಹಲವು ದಶಕಗಳಿಂದ ರೈತರು ಕಷ್ಟ ಪಟ್ಟು ಬೆಳಿಸಿದ ಅಡಿಕೆ,ತೆಂಗಿನ ಗಿಡ ಮರಗಳನ್ನು,ಮತ್ತು ಫಸಲನ್ನು ಏಕಾ-ಏಕೀ ಕಡಿದು ನಾಶಪಡಿಸಿರುವದು ಕೆಲವೆಡೆ ನಡೆದಿದೆ.ನೂರಾರು ಜನರಿಗೆ ಅರಣ್ಯಭೂಮಿಯಿಂದ ಒಕ್ಕಲೆಬ್ಬಿಸುವದಾಗಿ ನೋಟಿಸು ನೀಡಲಾಗಿದೆ.ಇದರಿಂದ ಜನರು ಆಕ್ರೋಶಿತರಾಗಿದ್ದು,ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಭೂಮಿಯಲ್ಲಿನ ಯಾವುದೇ ಹಳೆಯ ಒತ್ತುವರಿಗಳನ್ನು ತೆರವುಮಾಡದಂತೆ ಮತ್ತು ರೈತರನ್ನು ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸದಂತೆ ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯದ ಉಪಮುಖ್ಯಮಂತ್ರಿಗಳು, ಅರಣ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದು ಸ್ವಾಗತಾರ್ಹ ಎಂದ ಅವರು ಈ ದಿಶೆಯಲ್ಲಿ ಸರಕಾರದಿಂದ ಅಧೀಕ್ರತ ನಿರ್ದೇಶನ ಹೊರಡಿಸಬೇಕು ಎಂದು ಅವರು ಮನವಿಮಾಡಿದ್ದಾರೆ.

ಅರಣ್ಯ ಭೂಮಿಯಲ್ಲಿನ ಚಿಕ್ಕ ಹಿಡುವಳಿದಾರರ 2005ರ ಪೂರ್ವದ ಒತ್ತುವರಿಗಳನ್ನು ಅರಣ್ಯ ಹಕ್ಕು ಕಾಯ್ದೆಯಡಿ ಸಕ್ರಮ ಪಡಿಸಲು ಉಪಮುಖ್ಯಮಂತ್ರಿಗಳು ನೀಡಿರುವ ಕೆಲವು ಸಲಹೆಗಳಿಗೆ ಪೂರಕವಾಗಿ ನಮ್ಮ ಹೋರಾಟ ಸಮಿತಿಯು ಸಹ ಕೆಲವು ಬೇಡಿಕೆಗಳನ್ನು ಮಂಡಿಸಿದೆ.ಅವುಗಳನ್ನು ರಾಜ್ಯ ಮಟ್ಟದ ಅರಣ್ಯ ಹಕ್ಕು ಮೇಲ್ವಿಚಾರಣಾ ಸಮಿತಿಯು ಪರಾಮರ್ಶಿಸಬೇಕು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಹಿತದ್ರಷ್ಟಿಯಿಂದ ವಸ್ತುನಿಷ್ಠ, ಬದಲೀ ಯೋಗ್ಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅರಣ್ಯ ಹಕ್ಕುಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜ್ಯಾರಿಗೆ ತರಲು ಪರಿಶೀಲಿಸಬೇಕೆಂದು ಅವರು ರಾಜ್ಯ ಸರ್ಕಾರವನ್ನು ಮತ್ತು ಅರಣ್ಯ ಹಕ್ಕು ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿರುವ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಮಾಡಿ ಒತ್ತಾಯ ಪಡಿಸಿದ್ದಾರೆ.
——————————–‘
ನಮ್ಮ ದೇಶದಲ್ಲಿ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಅವರ ಸಾಗುವಳಿಯಲ್ಲಿರುವ ಅರಣ್ಯ ಭೂಮಿಯ ಅಧಿಭೋಗದ ಹಕ್ಕು ಸಹಿತ ಅರಣ್ಯ ಹಕ್ಕುಗಳನ್ನು ಮಾನ್ಯಮಾಡಲು 2006ರಲ್ಲಿ ಕೇಂದ್ರ ಸರ್ಕಾರ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯನ್ನು ಜ್ಯಾರಿಗೆ ನೀಡಿದೆ.
—————————-‘———-

ಆದರೆ ಇಚ್ಛಾಶಕ್ತಿಯ ಕೊರತೆ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಯ “ಮೂರು ತಲೆಮಾರು”, ವ್ಯಾಖ್ಯಾನದ ಬಗೆಗೆ ಅಧಿಕಾರಿಗಳಲ್ಲಿ ಇರುವ ತಪ್ಪು ತಿಳುವಳಿಕೆಯಿಂದಾಗಿ ಸುದೀರ್ಘ 19 ವರ್ಷಗಳ ನಂತರವೂ ಕಾಯ್ದೆಯ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಸಂಪೂರ್ಣ ವಿಫಲವಾಗಿದೆ.

ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಶೇಕಡಾ 79 ರಷ್ಟು ಮತ್ತು ಕೇರಳದಲ್ಲಿ ಶೇಕಡಾ 65 ರಷ್ಟು ಜನರಿಗೆ ಅರಣ್ಯ ಹಕ್ಕುಕಾಯ್ದೆಯಡಿ ಅಧಿಭೋಗದ ಹಕ್ಕು ನೀಡಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಕೇವಲ ಪ್ರತಿಶತ 4ರಷ್ಟು ಜನರಿಗೆ ಮತ್ತು ಅತೀ ಹೆಚ್ಚು ಅರಣ್ಯ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ ಪ್ರತಿಶತ 3ಜನರಿಗೆ ಮಾತ್ರ ಅಧಿಭೋಗದ ಹಕ್ಕು ನೀಡಲಾಗಿದೆ. ಉಳಿದ ಕ್ಲೇಮುಗಳನ್ನು ವಿಚಾರಣೆ ನಡೆಸದೇ ಸಾರಾಸಗಟು ತಿರಸ್ಕರಿಸಲಾಗಿದೆ.

ಅರಣ್ಯ ಹಕ್ಕು ವಿಚಾರದಲ್ಲಿ ಈಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮಧ್ಯಪ್ರವೇಶ ಆಗಿದೆ. ಜಿಲ್ಲೆಯ ಅರಣ್ಯ ಅತೀಕ್ರಮಣದಾರರ ಬಹುದಿನಗಳ ಕನಸು ಇನ್ನಾದರೂ ನನಸಾಗಲಿದೆಯೇ .? ಕಾದುನೋಡಬೇಕಿದೆ.

About The Author

error: Content is protected !!