March 2, 2026

ಶಿಕ್ಷಕರಿಗಾಗಿ ನಡೆದ ಪುನಶ್ಚೇತನ ಪ್ರೇರಣ ಶಿಬಿರ

ಹೋನ್ನಾವರ : “ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ದಾಪುಗಾಲಿಟ್ಟು ಸಾಗುತ್ತಿದೆ. ಶಿಕ್ಷಕರು ಅದಕ್ಕನುಗುಣವಾಗಿ ರೂಪುಗೊಂಡು, ತಾವು ಬದಲಾಗುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಕಲಿತು ತಮ್ಮ ವಿದ್ಯಾರ್ಥಿಗಳಿಗೆ ಕಲಿಸಬೇಕಾದ ಜವಾಬ್ದಾರಿ ಇದೆ. ಸೇವೆಯಲ್ಲಿರುವ ಶಿಕ್ಷಕರು ಪ್ರೇರಣಾ ಶಿಬಿರದಲ್ಲಿ ಭಾಗವಹಿಸಿ ತಮ್ಮ ಜ್ಞಾನ ವರ್ಧನೆ ಮಾಡಿಕೊಳ್ಳಬೇಕು. ರಾಷ್ಟ್ರೀಯ ಯುವಕರ ದಿನದ ಅಂಗವಾಗಿ ಸೇರಿದ ನಾವೆಲ್ಲರೂ ಸದೃಢ ಭಾರತವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸೋಣ ಎಂದು ಡಾ. ಡಿ. ಎಲ್. ಹೆಬ್ಬಾರ್ ಹೇಳಿದರು. ಅವರು ಹೊನ್ನಾವರದ ಎಸ್. ಡಿ. ಎಮ್ ಪದವಿ ಮಹಾವಿದ್ಯಾಲಯ, ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ ಇವರ ಸಹಯೋಗದಲ್ಲಿ, ಡಿ. ಬಿ. ಟಿ. ಸ್ಟಾರ್ ಕಾಲೇಜ್ ಯೋಜನೆ ಅಡಿಯಲ್ಲಿ, ತಾಲೂಕಿನ ಪ್ರೌಢಶಾಲಾ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ ನಡೆದ ಪುನಶ್ಚೇತನ ಪ್ರೇರಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ವಿನಾಯಕ ಅವಧಾನಿ ಮಾತನಾಡಿ” ಎಂ.ಪಿ. ಇ ಸೊಸೈಟಿಯ ಎಸ್. ಡಿ. ಎಮ್ ಕಾಲೇಜು, ತಾಲೂಕಿನ ಶಿಕ್ಷಕರ ಬೌದ್ಧಿಕ ಬಲವರ್ಧನೆಗೆ ಬೇಕಾದ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ. ಎಸ್.ಎಸ್.ಎಲ್.ಸಿ ಫಲಿತಾಂಶದ ಹೆಚ್ಚಳದಲ್ಲಿ ಈ ಶಿಬಿರಗಳು ಪ್ರೇರಣೆಯಾಗಲಿ” ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಜಿ. ಎನ್. ಭಟ್ ಮಾತನಾಡಿ “ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ, ಡಿ. ಬಿ.ಟಿ ಯೋಜನೆ ಅಡಿಯಲ್ಲಿ ‘ಸ್ಟಾರ್ ಕಾಲೇಜು’ ಎಂದು ನಮ್ಮ ಮಹಾವಿದ್ಯಾಲಯ ಆಯ್ಕೆಯಾಗಿದ್ದು, 98 ಲಕ್ಷ ರೂಪಾಯಿ ಅನುದಾನ ಬಂದಿದೆ. ಈ ಯೋಜನೆಯಡಿ ತಾಲೂಕಿನ ಶಿಕ್ಷಕರಿಗಾಗಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಶಿಕ್ಷಕರು ಇದರ ಪ್ರಯೋಜನ ಪಡೆಯಬೇಕು” ಎಂದರು.

ಎಸ್.ಡಿ.ಎಂ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಸುರೇಶ್ ಎಸ್, ಲಕ್ಷ್ಮೀನಾರಾಯಣ ಹೆಗಡೆ, ಭಾರತೀ ಶಾನಭಾಗ, ಶ್ರೀರಾಮ ಭಟ್, ಶ್ರೀ ಪ್ರಸಾದ್, ರಾಮ ಅವಬ್ರುತ, ತನುಜ ನಾಯ್ಕ, ಆಶಾ ನೋರೋನಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಭೌತಶಾಸ್ತ್ರ ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಪ್ರಯೋಗದ ಪ್ರಾತ್ಯಕ್ಷಿಕೆ ಮತ್ತು ವಿವರಣೆಯ ಜೊತೆಗೆ ಹಲವಾರು ಹೊಸ ವಿಷಯಗಳ ಕುರಿತು ಮಾಹಿತಿ ನೀಡಿದರು.

ಉಪನ್ಯಾಸಕಿ ಶ್ರೀಲತಾ ಪ್ರಾರ್ಥಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ. ಎಚ್. ಭಟ್ ಸ್ವಾಗತಿಸಿದರು. ಉಪನ್ಯಾಸಕರಾದ ಪ್ರಶಾಂತ ಹೆಗಡೆ ಮತ್ತು ಬಿಂದು ಅವಧಾನಿ ನಿರೂಪಿಸಿದರು. ಯು ಜಿ ಆರ್ ಸಿ ಯ ಡಾ. ಶಿವರಾಮ ಶಾಸ್ತ್ರಿ ಸಹಕರಿಸಿದರು. ಸ್ಟಾರ್ ಕಾಲೇಜ್ ಯೋಜನೆಯ ಸಂಯೋಜಕ ಡಾ ಮಂಜುನಾಥ ಹೆಗಡೆ ವಂದಿಸಿದರು.

About The Author

error: Content is protected !!