March 2, 2026

ಕಾಯ್ಕಿಣಿ ಗ್ರಾಮದ ಗ್ರಾಮ ಆಡಳಿತಾಧಿಕಾರಿ ವಿಜೇತಾ ಶಾನಭಾಗಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ

ಭಟ್ಕಳ: ಭಟ್ಕಳ ತಾಲ್ಲೂಕಿನ ಕಾಯ್ಕಿಣಿ ಗ್ರಾಮದ ಗ್ರಾಮ ಆಡಳಿತಾಧಿಕಾರಿಯಾಗಿರುವ ವಿಜೇತಾ ಶಾನಭಾಗ ಅವರು 2023–2024–2025ನೇ ಸಾಲಿನ ಪ್ರತಿಷ್ಠಿತ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯ ಸರ್ಕಾರವು ಅತ್ಯುತ್ತಮ ಆಡಳಿತ, ಜನಸೇವೆಗೆ ಸಲ್ಲಿಸಿದ ಶ್ರೇಷ್ಠ ಕಾರ್ಯಕ್ಷಮತೆ ಹಾಗೂ ಗಣನೀಯ ಸಾಧನೆಗಳನ್ನು ಗುರುತಿಸಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಈ ಗೌರವಾನ್ವಿತ ಪ್ರಶಸ್ತಿಗೆ, ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಆಡಳಿತಾಧಿಕಾರಿಗಳ ಪೈಕಿ ವಿಜೇತಾ ಶಾನಭಾಗ ಅವರನ್ನು ಆಯ್ಕೆ ಮಾಡಲಾಗಿದೆ.
ನಾಳೆ ನಡೆಯುವ ಗಣರಾಜ್ಯೋತ್ಸವ ಸಮಾರಂಭದ ಅಂಗವಾಗಿ ಕಾರವಾರ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈ ಮಹತ್ವದ ಗೌರವ ಲಭಿಸಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಗ್ರಾಮ ಆಡಳಿತಾಧಿಕಾರಿ ಸಂಘದ ಅಧ್ಯಕ್ಷ ಚಾಂದಬಾಷಾ, ಜಿಲ್ಲಾ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಮಾಸ್ತಯ್ಯ ನಾಯ್ಕ, ತಾಲ್ಲೂಕು ಗ್ರಾಮ ಆಡಳಿತಾಧಿಕಾರಿ ಸಂಘದ ಅಧ್ಯಕ್ಷ ಗಣೇಶ ಕುಲಾಲ್, ತಾಲ್ಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ನಾಗಪ್ಪ ನಾಯ್ಕ ಸೇರಿದಂತೆ ಭಟ್ಕಳ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ವಿಜೇತಾ ಶಾನಭಾಗ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

About The Author

error: Content is protected !!