ಹೊನ್ನಾವರ: ತಾಲೂಕಿನ ಅರೆಅಂಗಡಿಯಲ್ಲಿ ಫೆಬ್ರವರಿ ೧೪ ರಂದು ನಡೆಯಲಿರುವ ತಾಲೂಕಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಸುರೇಶ ನಾಯ್ಕ ಮಂಕಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಪ್ರಭಾತನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸೋಮವಾರ ಕಸಾಪ ತಾಲೂಕು ಅಧ್ಯಕ್ಷ ಎಸ್.ಎಚ್.ಗೌಡ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸುರೇಶ ನಾಯ್ಕ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಭೆಯಲ್ಲಿ ಕಸಾಪ ತಾಲೂಕು ಗೌರವ ಕಾರ್ಯದರ್ಶಿಗಳಾದ ಗಜಾನನ ನಾಯ್ಕ, ಎಚ್.ಎಂ.ಮಾರುತಿ, ಕೋಶಾಧ್ಯಕ್ಷ ನಾರಾಯಣ ಹೆಗಡೆ, ಸದಸ್ಯರಾದ ಜನಾರ್ಧನ ಕಾಣಕೋಣಕರ, ಕೇಶವ ಶೆಟ್ಟಿ, ಮಹೇಶ ಭಂಡಾರಿ, ಈಶ್ವರ ಕೊಡಾಣಿ, ಎಂ.ಡಿ.ಹರಿಕಾಂತ, ಶುಭಾ ಸಭಾಹಿತ, ಸಾಧನಾ ಬರ್ಗಿ, ರಾಮ ಗೊಂಡ ಇದ್ದರು.
ಸಮ್ಮೇಳನಾಧ್ಯಕ್ಷರ ಪರಿಚಯ :
ಕ್ರಿಯಾಶೀಲ ಪ್ರವೃತ್ತಿ, ಕರ್ತವ್ಯ ಬದ್ಧತೆಯಿಂದ ಮುನ್ನಡೆದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಸಾಕ್ಷಿಯಾದವರು ಮಂಕಿಯ ಸುರೇಶ ಗಣಪತಿ ನಾಯ್ಕರವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಬದುಕಿನೊಂದಿಗೆ ಕೆಇಎಸ್ ಪದವಿ ಪಡೆದು ಪ್ರೌಢಶಾಲಾ ಅಧ್ಯಾಪಕರಾಗಿ, ಮುಖ್ಯಾಧ್ಯಾಪಕರಾಗಿ, ಸಾಹಿತಿಯಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಇಲಾಖೆ ಮತ್ತು ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಸುರೇಶ ನಾಯ್ಕ ರವರಿಗೆ ತಾಲೂಕಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಪಟ್ಟ ಒಲಿದು ಬಂದಿದೆ.
ಮೂಲತಃ ಮಂಕಿ ಬಣಶಾಲೆಯ ಸಣ್ಣಗುಂದದಲ್ಲಿ ೧೯೭೧ರಲ್ಲಿ ತಂದೆ ಗಣಪತಿ ನಾಯ್ಕ, ತಾಯಿ ಶಿವಮ್ಮ ರವರ ಮಗನಾಗಿ ಜನಿಸಿದರು. ೧೯೯೪ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಭಟ್ಕಳ ತಾಲೂಕಿನ ಉತ್ತರ ಕೊಪ್ಪದಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ೨೦೦೬ರಿಂದ ಸುಮಾರು ಆರು ವರ್ಷಗಳ ಕಾಲ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ, ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿಯಾಗಿ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ವಿಶಿಷ್ಟ ಸೇವೆ ಸಲ್ಲಿಸಿರುತ್ತಾರೆ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪ್ರಥಮ ಬಾರಿಗೆ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಸಿ, ವಿಭಾಗ ಮಟ್ಟದ ವಿಶೇಷ ಸೇವಾ ಪ್ರಶಸ್ತಿ ಇವರ ಮುಡಿಗೇರಿದೆ. ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತ “ತಣ್ಣೀರು” ಬೀದಿ ನಾಟಕದ ಪ್ರಮುಖ ಪಾತ್ರಧಾರಿಯಾಗಿ ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಾಟಕ ಅಭಿನಯಿಸಿ ಮೆಚ್ಚುಗೆ ಗಳಿಸಿದವರು. ಕೆ.ಇ. ಎಸ್. ಪದವಿ ಪಡೆದಿರುವುದರಿಂದ ಬೈಂದೂರು ತಾಲೂಕಿನ ಶಿರೂರಿನ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರಾಗಿ ಭಡ್ತಿ ಪಡೆದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಪ್ರೌಢಶಾಲೆಯಾಗಿ ಉಡುಪಿ ಜಿಲ್ಲೆಯ ಉಪ ನಿರ್ದೇಶಕರಿಂದ ವಿಶೇಷ ಗೌರವಕ್ಕೆ ಪಾತ್ರರಾದರು. ನಂತರ ಹೊನ್ನಾವರ ತಾಲೂಕಿನ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾ, ೨೦೧೮ ರಿಂದ ಪ್ರಭಾರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಜನಸ್ನೇಹಿ ಅಧಿಕಾರಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ರಸಕ್ತವಾಗಿ ಕೋಟೆಬೈಲ್ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯದ ಬಗ್ಗೆ ವಿಶೇಷ ಒಲವು. ಮಂಕಿಪುರ ದರ್ಶನ ಇಲ್ಲಿಂದ ಪ್ರಾರಂಭವಾಗುವ ಸುರೇಶ ನಾಯ್ಕ ರವರ ಸಾಹಿತ್ಯ ಪಯಣದಲ್ಲಿ ಇಲ್ಲಿಯವರೆಗೆ ಎಂಟು ಕೃತಿಗಳನ್ನು, ಮೂರು ಸಂಪಾದಿತ ಕೃತಿಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ. ಅವರ ಕೃತಿಗಳಲ್ಲಿ ವಸ್ತುವೈವಿದ್ಯ, ಸರಳ ಭಾಷೆ, ಸಾಮಾನ್ಯ ಪ್ರತಿಮೆಗಳಿಂದ ಕೂಡಿದ ಜ್ಞಾನ ಬಂಡಾರವನ್ನೇ ತೆರೆದಿಟ್ಟಿರುತ್ತಾರೆ. ಶಿವಮ್ಮ ಪ್ರಕಾಶನದಿಂದ ಮಂಕಿಪುರ ದರ್ಶನ, ಭಟ್ಕಳ ತಾಲೂಕಾ ಯಕ್ಷರಕ್ಷಕರು, ಜಾನಪದ ಹಕ್ಕಿ ಕೊಪ್ಪದ ಮಕ್ಕಿ, ಮುರುಡೇಶ್ವರ ದರ್ಶನ, ಯುಗಾದಿ, ಜೀವನ, ಹೆಜ್ಜೆ ಕೃತಿಗಳನ್ನು, ಯಕ್ಷ ಧನ್ವಂತರಿ, ಪರಿವಾರ, ಪ್ರತಿಬಿಂಬ ಎಂಬ ಸಂಪಾದಿತ ಕೃತಿಗಳನ್ನು ಪ್ರಕಟಿಸಿರುತ್ತಾರೆ. ಸಮಾಜ ಸೇವೆಯ ಮಾರ್ಗದಿಂದ ಸಮಾನತೆ ಸಾಧಿಸುವುದು ಕವಿಯ ಆಶಯವಾಗಿದೆ. ಜಾತೀಯ ಸಂತೆಯಲ್ಲಿ, ನೀತಿಯು ಮಾರಾಟವಾಗಿದೆ ಎಂದು ಜರೆಯುವ ಕವಿ ಮನುಕುಲ ಒಂದಾಗಬೇಕು ಎಂಬ ಕನಸು ಹೊತ್ತಿರುತ್ತಾರೆ. ಕನಸುಗಾರನ ನಡೆ ಕವಲಾದರೂ, ಯಶಸ್ಸಿನ ದಾರಿ ಹಲವಾದರೂ, ಸಾಧಿಸುವ ಹಟವೇ ನಮ್ಮ ಗೆಲುವಿಗೆ ಕಾರಣವೆಂಬುದನ್ನು ತಮ್ಮ ಹೆಜ್ಜೆ ಹನಿಗವನದಲ್ಲಿ ದಾಖಲಿಸಿ ಸಮಾಜದ ಗಾಯಗಳನ್ನೆಲ್ಲ ಬೆರಳಿಟ್ಟು ತೋರಿಸಿರುತ್ತಾರೆ.
ಹೊನ್ನಾವರದಲ್ಲಿ ನಡೆದ ೨೩ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿಯೂ, ಲಯನ್ಸ್ ಕಾರ್ಯದರ್ಶಿಯಾಗಿಯೂ, ನೌಕರರ ಸಂಘದ ಉಪಾಧ್ಯಕ್ಷರಾಗಿಯೂ, ರಾಜ್ಯ ಪರಿಷತ್ ಸದಸ್ಯರಾಗಿಯೂ, ರಾಮ ಕ್ಷತ್ರಿಯ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಅನೇಕ ಹನಿಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸುಮಾರು ಆರು ಬಾರಿ ತಾಲೂಕಾ ಪಂಚಾಯತ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ತಾಲೂಕಿನಾದ್ಯಂತ ಚಿರಪರಿಚಿತರಾದ ಸುರೇಶ ನಾಯ್ಕ ರವರು ಹೊನ್ನಾವರ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಇವರ ಕಾರ್ಯದಕ್ಷತೆಗೆ ಸಂದ ಗೌರವವಾಗಿದೆ.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ