March 4, 2026

ಇಂದಿರಾ ಕ್ಯಾಂಟಿನ್ ಆಹಾರ ಗುಣಮಟ್ಟ ಕಳಪೆಯಾದರೆ ಕಠಿಣ ಕ್ರಮ’- ಸಚೀವ ವೈದ್ಯ ಎಚ್ಚರಿಕೆ

ಹೊನ್ನಾವರ: ತಾಲೂಕಿನಲ್ಲಿ ಇಂದಿರಾ ಕ್ಯಾಂಟಿನ್ ಯೋಜನೆ ಜಾರಿ ವಿಳಂಬಕ್ಕೆ ಜನಪ್ರತಿನಿಧಿಗಳೆ ಕಾರಣ ಎಂದು ಮೀನುಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆರೋಪಿಸಿದರು.

ಹೊನ್ನಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಬಳಿಕ ಮಾತನಾಡಿ ಶ್ರಮಿಕ ವರ್ಗದವರು, ಕೂಲಿ ಕೆಲಸ ಮಾಡುವ ತಾಯಂದಿರು ಮತ್ತು ಸಾಮಾನ್ಯ ಜನರ ಹಿತದೃಷ್ಟಿಯಿಂದ ಕೇವಲ 5 ರೂಪಾಯಿಗೆ ಹೊಟ್ಟೆತುಂಬ ತಿಂಡಿ ನೀಡುವ ವ್ಯವಸ್ಥೆ ಮಾಡಲಾಗಿದೆ. 2017 ರ ಪೂರ್ವದಲ್ಲಿ ಇಂದಿನ ಮುಖ್ಯಮಂತ್ರಿಗಳು ಈ ಯೋಜನೆ ಜಾರಿ ಮಾಡಿದರೂ, ತಾಲೂಕಿನಲ್ಲಿ ಅನುಷ್ಠಾನಗೊಂಡಿಲ್ಲ. ಕಳೆದ ಐದು ವರ್ಷದಲ್ಲಿ ನಮ್ಮ ಸರದಕಾರ ಇರದ ಕಾರಣ ಇದು ವಿಳಂಬವಾಗಿತ್ತು. ಇಂದು ಹೊನ್ನಾವರ , ಮಂಕಿ, ಜಾಲಿ ಪ.ಪಂ. ವ್ಯಾಪ್ತಿಯಲ್ಲಿ ಚಾಲನೆ ದೊರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ 136 ಸೀಟುಗಳನ್ನು ನೀಡುವ ಮೂಲಕ ಭರ್ಜರಿ ಬಹುಮತ ನೀಡಿದ್ದಾರೆ. ಈ ಶಕ್ತಿಯೇ ನಮಗೆ ಬಡವರ ಸೇವೆ ಮಾಡಲು ಪ್ರೇರಣೆ ನೀಡಿದೆ. ಜನರ ತೆರಿಗೆ ಹಣವನ್ನು ಮರಳಿ ಜನರಿಗೆ ಶ್ರೇಯೋಭಿವೃದ್ಧಿಗಾಗಿ ಬಳಸುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.


ಬೆಂಗಳೂರಿನ ಪ್ರತಿ ವಾರ್ಡ್‌ಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಈ ಯೋಜನೆಯನ್ನು ಈಗ ರಾಜ್ಯದ ಮೂಲೆ ಮೂಲೆಗೂ ವಿಸ್ತರಿಸಲಾಗುತ್ತಿದ್ದು, ಅದರ ಭಾಗವಾಗಿ ಜಿಲ್ಲೆಯಾದ್ಯಂತ ಈ ಸೌಲಭ್ಯವನ್ನು ಜನರಿಗೆ ತಲುಪಿಸಲಾಗುತ್ತಿದೆ. ಕಡಿಮೆ ಬೆಲೆಗೆ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು. ಸಾರ್ವಜನಿಕರಿಂದ ಆಹಾರದ ಬಗ್ಗೆ ದೂರು ಬಂದರೆ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜನರು ನೀಡುವ 5 ರೂಪಾಯಿ ಕೇವಲ ಸಾಂಕೇತಿಕ ಮೊತ್ತವಾಗಿದ್ದು, ಆಹಾರದ ಉಳಿದ ಬಹುಪಾಲು ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ತಾಯಂದಿರು ಕೆಲಸಕ್ಕೆ ಹೋಗುವಾಗ ಆರೋಗ್ಯವಾಗಿ ಇರಬೇಕು ಎನ್ನುವುದು ನಮ್ಮ ಆಶಯ. ನೀವು ನೀಡುವ 5 ರೂಪಾಯಿಯ ಆಧಾರದ ಮೇಲೆ ಆಹಾರದ ಗುಣಮಟ್ಟ ನಿರ್ಧರಿಸಬೇಡಿ. ಸರ್ಕಾರವು ಪೂರ್ಣ ಹಣವನ್ನು ನೀಡುತ್ತಿದೆ, ಹಾಗಾಗಿ ಜನರಿಗೆ ಅತ್ಯುತ್ತಮ ಆಹಾರವನ್ನೇ ನೀಡಬೇಕು. ಸುಮ್ಮನೆ ಯಾವುದೋ ವ್ಯತ್ಯಾಸವಿದ್ದರೆ ಅದನ್ನು ಜನರು ಸಹಿಸಿಕೊಳ್ಳಬೇಡಿ, ಕೂಡಲೇ ದೂರು ನೀಡಿ ಎಂದರು. ಬಡವರಿಗೆ ಕಡಿಮೆ ದರದಲ್ಲಿ ತಿಂಡಿ ಊಟ ಸಿಗುವ ಜೊತೆ, ಹತ್ತಾರು ಮಂದಿಗೆ ಉದ್ಯೋಗ ದೊರೆಯಲಿದೆ ಈ ಎರಡು ಉದ್ದೇಶ ಇಟ್ಟು ಈ ಯೋಜನೆ ಆರಂಭಿಸಲಾಗಿದೆ ಎಂದರು.
ರಾಜ್ಯ ಸರ್ಕಾರ ಈ ಬಾರಿ ಸುಮಾರು 4.09 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಣೆಗೆ ಸಿದ್ದವಾಗಿದೆ. ಇಂತಹ ಹತ್ತು ಹಲವು ಜನಪರ ಕಾರ್ಯಕ್ರಮಗಳಿಗೆ ಆ ಮೂಲಕ ಹಣ ಮೀಸಲಿಡುತ್ತೇವೆ ಎಂದರು.


ನಿಕಟಪೂರ್ವ ಅಧ್ಯಕ್ಷ ವಿಜಯ ಕಾಮತ್, ಸದಸ್ಯ ಶಿವಾರಾಜ ಮೇಸ್ತ, ಜೊಸ್ಪಿನಾ ಡಯಾಸ್, ಮೂಖ್ಯಾಧಿಕಾರಿ ಯೇಸು ಬೆಂಗಳೂರು, ಕಾಂಗ್ರೇಸ್ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

error: Content is protected !!