August 30, 2025

ಭಟ್ಕಳದಲ್ಲಿ ಬೈಕ್‌ಗಳಿಗೆ ಸರಣಿ ಬೆಂಕಿ!, ಒಂದೇ ಮನೆಯ 3 ಬೈಕ್‌ಗಳು ತಿಂಗಳೊಳಗೆ ಭಸ್ಮ ಮನೆಗೂ ಹಾನಿ

ಭಟ್ಕಳ: ಪುರವರ್ಗ ಪ್ರದೇಶದಲ್ಲಿ ಬೈಕ್‌ಗಳಿಗೆ ಬೆಂಕಿ ಹಚ್ಚುವ ಘಟನೆಗಳು ಅಟ್ಟಹಾಸ ಮೆರೆಯುತ್ತಿರುವ ಮಧ್ಯೆ, ಮತ್ತೊಮ್ಮೆ ಇದೇ ರೀತಿಯ ಕೃತ್ಯ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಗುರುವಾರ ಮಧ್ಯರಾತ್ರಿ, ಪುರವರ್ಗ 3ನೇ ಕ್ರಾಸ್‌ನ ಗಂಗಾವಳಿ ನಿವಾಸಿ ಅಬ್ದುಲ್ ವಾಹೀದ್ ಅವರ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿದ ಅಜ್ಞಾತರು, ಅಂಗಳದಲ್ಲಿ ನಿಲ್ಲಿಸಿದ್ದ ಹೀರೋ ಹೊಂಡಾ ಪ್ಯಾಶನ್ ಪ್ಲಸ್ ಹಾಗೂ ಟಿವಿಎಸ್ ಅಪಾಚಿ ಬೈಕ್‌ಗಳಿಗೆ ಬೆಂಕಿ ಹಚ್ಚಿದರು. ಪರಿಣಾಮ, ಎರಡೂ ವಾಹನಗಳು ಭಸ್ಮವಾಗಿದ್ದು, ಮನೆಯ ಅಂಗಳದ ತಗಡಿನ ಶೀಟ್ ಹಾಗೂ ಹಾಲ್ ಭಾಗಕ್ಕೂ ಹಾನಿಯಾಗಿದೆ.

ಈ ಕೃತ್ಯಕ್ಕೆ ಸಂಬAಧಿಸಿ, ಪಕ್ಕದ ಮನೆಯಲ್ಲಿ ವಾಸಿಸುವ ತೌಸಿಪ್ ಸಲಾವುದ್ದಿನ್ ಜಬಾಲಿ ಮತ್ತು ಸಾದ್ ಸಲಾವುದ್ದಿನ್ ಜಬಾಲಿ ಇವರ ಮೇಲೆ ದೂರುದಾರರು ಸಂಶಯ ವ್ಯಕ್ತಪಡಿಸಿದ್ದಾರೆ.

ಹಿಂದಿನ ಕೃತ್ಯ: ಇದೇ ಮನೆ ಮುಂದೆ ಜುಲೈ 25ರಂದು ನಿಲ್ಲಿಸಿದ್ದ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳವು ಮಾಡಿ ಪಕ್ಕದ ರಸ್ತೆಯಲ್ಲಿ ಬೆಂಕಿ ಹಚ್ಚಲಾಗಿತ್ತು. ಒಂದೇ ತಿಂಗಳಲ್ಲಿ ಈ ಮನೆಗೆ ಸೇರಿದ ಮೂರು ಬೈಕ್‌ಗಳು ಬೆಂಕಿಗೆ ಆಹುತಿಯಾದ ಘಟನೆ ಪುರವರ್ಗದಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ.

ಸುದ್ದಿ ತಿಳಿದು, ಜಿಲ್ಲಾ ಎಸ್‌ಪಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಎಂ., ಡಿವೈಎಸ್ಪಿ ಮಹೇಶ್ ಹಾಗೂ ಸಿಪಿಐ ದಿವಾಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

About The Author