ಭಟ್ಕಳ: ಭಟ್ಕಳ ನಗರದ ಸೊನಾರಕೇರಿಯ ದೈವಜ್ಞ ಸಮಾಜದ ಶ್ರೀ ಗಣಪತಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವರ್ಧಂತಿ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವು ಸಾವಿರಾರು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿವಿಧ ಧಾರ್ಮಿಕ ಹೋಮ–ಹವನಗಳು ಹಾಗೂ ವಿಶೇಷ ಪೂಜೆಗಳು ನೆರವೇರಿದವು. ಮಧ್ಯಾಹ್ನ 13.30ರ ಅಭಿಜಿತ ಮುಹೂರ್ತದಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಸಮಾಜ ಬಾಂಧವರು ಸರದಿಯಲ್ಲಿ ನಿಂತು ರಥಕಾಣಿಕೆ ಅರ್ಪಿಸಿ ಪೂಜೆಯಲ್ಲಿ ಪಾಲ್ಗೊಂಡರು.
ರಥೋತ್ಸವದ ನಂತರ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ವೇಳೆಗೆ ಬೆಳ್ಳಿಯ ರಥೋತ್ಸವ ಭಕ್ತರ ಗಮನ ಸೆಳೆಯಿತು. ಸಾವಿರಾರು ಭಕ್ತರು ಭಕ್ತಿಭಾವದಿಂದ ಬೆಳ್ಳಿಯ ರಥವನ್ನು ಎಳೆದರು. ಭಟ್ಕಳ ತಾಲೂಕಿನಷ್ಟೇ ಅಲ್ಲದೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವದ ಬಳಿಕ ಮೃಗಯಾತ್ರೆ ಸಂವಾದ ಪೂಜೆ, ಮೃಗಬೇಟೆ ಪ್ರಯುಕ್ತ ಅಷ್ಟಾವದಾನದ ಸೇವೆ ಹಾಗೂ ಸಿಡಿಮದ್ದು ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ದೈವಜ್ಞ ಸಮಾಜದ ಪ್ರಮುಖರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ