March 2, 2026

ಮುರ್ಡೇಶ್ವರ ಮಹಾಶಿವರಾತ್ರಿ ಭವ್ಯತೆಗೆ ಸರ್ಕಾರದ ಬೆಂಬಲ:ಸಚಿವ ಮಂಕಾಳ ವೈದ್ಯ

ಭಟ್ಕಳ: ತಾಲೂಕಿನ ಮುರ್ಡೇಶ್ವರದಲ್ಲಿ ನಡೆಯಲಿರುವ ಮೂರನೇ ವರ್ಷದ ಮಹಾಶಿವರಾತ್ರಿ ಆಚರಣೆಯನ್ನು ಈ ಬಾರಿ ಇನ್ನಷ್ಟು ಭವ್ಯ, ಶಿಸ್ತಿನ ಹಾಗೂ ಭಕ್ತಿಭಾವಪೂರ್ಣವಾಗಿ ಆಯೋಜಿಸಲಾಗುವುದು ಎಂದು ಕಾರ್ಮಿಕ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಮುರ್ಡೇಶ್ವರದಲ್ಲಿ ನಡೆದ ಶಿವರಾತ್ರಿ ಆಚರಣೆಯ ರೂಪರೇಷೆ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಫೆಬ್ರವರಿ ೧೫ರಂದು ಸಂಜೆ ೬ ಗಂಟೆಗೆ ಆರಂಭವಾಗುವ ಮಹಾಶಿವರಾತ್ರಿ ಕಾರ್ಯಕ್ರಮವು ಫೆಬ್ರವರಿ ೧೬ರ ಬೆಳಿಗ್ಗೆಯವರೆಗೆ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.

ಮೊದಲ ವರ್ಷ ಆರ್.ಎನ್.ಎಸ್. ಸಂಸ್ಥೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ, ಎರಡನೇ ವರ್ಷ ಸರ್ಕಾರದಿಂದ ೫೦ ಲಕ್ಷ ರೂ. ಅನುದಾನ ನೀಡುವ ಮೂಲಕ ಶಿವರಾತ್ರಿ ಆಚರಣೆ ಯಶಸ್ವಿಯಾಗಿ ನಡೆದಿದ್ದು, ಈ ಬಾರಿ ಸರ್ಕಾರದಿಂದ ಇನ್ನಷ್ಟು ಹೆಚ್ಚಿನ ಅನುದಾನ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು.


ಪ್ರತಿ ವರ್ಷ ಮುರ್ಡೇಶ್ವರಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕನಿಷ್ಠ ೫ ಎಕರೆ ಜಾಗ ಸಿಗುವವರೆಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಪ್ರಸ್ತುತ ಮುರ್ಡೇಶ್ವರದ ತ್ಯಾಜ್ಯವನ್ನು ಭಟ್ಕಳದಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು, ಇದು ದೀರ್ಘಕಾಲಿಕ ಪರಿಹಾರವಲ್ಲ. ತ್ಯಾಜ್ಯ ವಿಲೇವಾರಿಗೆ ಅಗತ್ಯವಿರುವ ೫ ಎಕರೆ ಜಾಗವನ್ನು ಖರೀದಿಸಲು ಸರ್ಕಾರ ಸಿದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.


ಸಭೆಯಲ್ಲಿ ಮಾತನಾಡಿದ ಬೈಲೂರಿನ ಕಿಶನ್ ಬಲ್ಸೆ, ಸಚಿವ ಮಂಕಾಳ ವೈದ್ಯ ಅವರ ಮಹತ್ವಾಕಾಂಕ್ಷೆಯ ಶಿವರಾತ್ರಿ ಆಚರಣೆ ಭಕ್ತರಲ್ಲಿ ಅಪಾರ ಭಕ್ತಿ ಮೂಡಿಸಿ ಇತಿಹಾಸ ನಿರ್ಮಿಸಿದೆ ಎಂದು ಪ್ರಶಂಸಿಸಿದರು. ಪಾರ್ಕಿಂಗ್ ವ್ಯವಸ್ಥೆ ಸುಧಾರಣೆ, ಸಮುದ್ರಕ್ಕೆ ಇಳಿಯುವ ಭಕ್ತರಿಗೆ ಲೈಫ್ ಜಾಕೆಟ್ ವ್ಯವಸ್ಥೆ ಕಡ್ಡಾಯಗೊಳಿಸುವ ಅಗತ್ಯವಿದೆ ಎಂದರು. ದೇವಸ್ಥಾನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳ ಆರೋಪಗಳಿದ್ದರೂ ಈವರೆಗೆ ಆರೋಪಿಗಳ ಬಂಧನವಾಗದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.


ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಮಾತನಾಡಿ, ಶಿವರಾತ್ರಿ ಸಂದರ್ಭದಲ್ಲಿ ಸಾರಿಗೆ, ಸುರಕ್ಷತೆ, ವಸತಿ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿ ಎಂದು ತಿಳಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಮಾವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಯನಾ ನಾಯ್ಕ, ಮಾವಳ್ಳಿ–೨ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಪಡಿಯಾರ, ಕಾಮತ ಪುಷ್ಪಲತಾ, ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

error: Content is protected !!