ಭಟ್ಕಳ: ಭಟ್ಕಳ ತಾಲೂಕಾ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ (ರಿ) ವತಿಯಿಂದ ಶನಿವಾರ ಭಟ್ಕಳ ನಗರ ಪೊಲೀಸ್ ಠಾಣೆಗೆ ತೆರಳಿ ಪಿಐ ದಿವಾಕರ್ ಪಿ.ಎಂ. ಅವರಿಗೆ ಮನವಿ ಸಲ್ಲಿಸಿ, ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ತೀವ್ರವಾಗಿ ಖಂಡಿಸಿದರು.
ಸಂಘದ ಪದಾಧಿಕಾರಿಗಳು ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಟ್ಯಾಕ್ಸಿ ಚಾಲಕ-ಮಾಲಕರ ಸಂಘವನ್ನು ಕಾನೂನುಬದ್ಧವಾಗಿ ನಡೆಸಿಕೊಂಡು ಬರುತ್ತಿದ್ದು, ಪರ್ಮಿಟ್ ಹಾಗೂ ಅಗತ್ಯ ದಾಖಲೆಗಳೊಂದಿಗೆ ಯಾವುದೇ ವಿವಾದವಿಲ್ಲದೆ ವೃತ್ತಿ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು. ಭಟ್ಕಳದಿಂದ ದೂರದ ಊರುಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಸೇವೆಯನ್ನು ನಿಯಮಾನುಸಾರವಾಗಿ ನೀಡುತ್ತಿದ್ದೇವೆ ಎಂದು ವಿವರಿಸಿದರು.
ಫೆ.12ರಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಸಮಕ್ಷಮ ನಡೆದ ಸಭೆಯಲ್ಲಿ ತಮ್ಮ ಸಂಘದವರೂ ಪಾಲ್ಗೊಂಡಿದ್ದು, ಪರ್ಮಿಟ್ ವಿಚಾರವನ್ನು ಪರಿಶೀಲಿಸಿ ಅಂತಿಮ ಆದೇಶ ಹೊರಡಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಆವರೆಗೆ ಶಾಂತತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದನ್ನು ಸಂಘದವರು ಉಲ್ಲೇಖಿಸಿದರು.
ಇಂತಹ ಸಂದರ್ಭದಲ್ಲಿ ಫೆ.14ರಂದು ಭಟ್ಕಳ ಆಟೋ ಚಾಲಕ-ಮಾಲಕರ ಸಂಘ ತಮ್ಮ ವಿರುದ್ಧ ದಬ್ಬಾಳಿಕೆ ಹಾಗೂ ಹಣ ಲೂಟಿ ಆರೋಪ ಮಾಡಿ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿರುವುದು ಆಧಾರರಹಿತ ಎಂದು ಟ್ಯಾಕ್ಸಿ ಸಂಘದವರು ಹೇಳಿದರು.
ಬೈಂದೂರಿಗೆ ಬಾಡಿಗೆಗೆ ತೆರಳಿದ್ದ ಆಟೋ ಚಾಲಕರಿಗೆ ಕೇವಲ ಸೌಜನ್ಯದಿಂದ ಜಿಲ್ಲಾಧಿಕಾರಿಗಳ ಆದೇಶ ಬರುವವರೆಗೆ ತಾಳ್ಮೆಯಿಂದ ಇರಲು ವಿನಂತಿಸಿದ್ದೇವೆ ಹೊರತು ಯಾವುದೇ ರೀತಿಯ ಹಿಂಸೆ ಅಥವಾ ಹಣ ವಸೂಲಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಘಟನೆ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಭಟ್ಕಳ ನಗರ ಠಾಣೆಯಲ್ಲಿ ದೂರು ಸಲ್ಲಿಸಿರುವುದು ಕಾನೂನಾತ್ಮಕವಲ್ಲ ಎಂಬುದನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಸಂಘದ ಸದಸ್ಯರು ಯಾವುದೇ ತಪ್ಪು ಮಾಡಿಲ್ಲವೆಂದು ತಿಳಿಸಿ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ಪಿಐ ದಿವಾಕರ್ ಪಿ.ಎಂ. ಅವರು ಮಾತನಾಡಿ, ಅಪರಾಧ ಎಲ್ಲಿಯೇ ನಡೆದಿದ್ದರೂ ಯಾವುದೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು. ಜೀರೋ ಎಫ್‌ಐಆರ್ ನೋಂದಾಯಿಸಿದ ಬಳಿಕ ಸಂಬಂಧಪಟ್ಟ ಠಾಣೆಗೆ ತನಿಖೆಗಾಗಿ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದರು. ಎಲ್ಲ ಟ್ಯಾಕ್ಸಿ ಚಾಲಕರು ಕಾನೂನು ಕೈಗೆ ಎತ್ತಿಕೊಳ್ಳಬಾರದು; ಯಾವುದೇ ಸಮಸ್ಯೆಯಿದ್ದರೆ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ನವೀನ ನಾಯ್ಕ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕೊಟ್ಟಿಯಾನ್, ತಾಲ್ಲೂಕು ಅಧ್ಯಕ್ಷ ಗಣೇಶ ದೇವಡಿಗ್, ಸಾಸ್ತಾನ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ, ಭಟ್ಕಳ ಪ್ರಧಾನ ಕಾರ್ಯದರ್ಶಿ ಜಗದೀಶ್ ನಾಯ್ಕ, ಉಪಾಧ್ಯಕ್ಷ ಮಹ್ಮದ ಮುಷ್ತಾಕ್ ಹಾಗೂ ಉ.ಕ ಜಿಲ್ಲಾ ಮತ್ತು ದಕ್ಷಿಣ ಕನ್ನಡ ಭಾಗದ ಟ್ಯಾಕ್ಸಿ ಚಾಲಕರು ಉಪಸ್ಥಿತರಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ