ಭಟ್ಕಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಪರಿಕಲ್ಪನೆಗೆ ಪೂರಕವಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಮಾಡಲಾಗಿರುವ ಆರೋಪಗಳು ಸತ್ಯಾಸತ್ಯತೆಯಿಂದ ದೂರವಾಗಿವೆ ಎಂದು ಕರ್ನಾಟಕ ಬಿಜೆಪಿ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆಯಲ್ಲಿ ಅವರು, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಆರ್.ವಿ. ದೇಶಪಾಂಡೆ ಅವರು ಸಂಸದರ ವಿರುದ್ಧ ಮಾಡಿರುವ ಟೀಕೆಗಳು ಹತಾಶ ಮನೋಭಾವದಿಂದ ಕೂಡಿವೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಸಾವಿರ ದಿನಗಳ ಸಾಧನಾ ಸಮಾವೇಶವನ್ನು ಹಾವೇರಿಯಲ್ಲಿ ನಡೆಸಿ ಅಂಕಿ-ಅಂಶಗಳ ಮೂಲಕ ಜನರನ್ನು ತಪ್ಪು ದಾರಿಗೆಳೆಯಲಾಗುತ್ತಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ ಸಂಸದರ ಹೇಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ಟೀಕಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಸಾಲದ ಹೊರೆ ಹೆಚ್ಚುತ್ತಿದೆ ಎಂಬುದು ಸಾರ್ವಜನಿಕರಿಗೆ ತಿಳಿದ ವಿಚಾರ. ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿಯೂ ತೊಂದರೆಗಳಿರುವುದು ವಿಧಾನಸಭೆಯ ಚರ್ಚೆಯಲ್ಲೇ ದಾಖಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಸಂಸದರಾಗಿ ಆಯ್ಕೆಯಾದ ಬಳಿಕ ಕೇಂದ್ರ ಸಚಿವರನ್ನು ಭೇಟಿಯಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಅನುದಾನ ಹಾಗೂ ಯೋಜನೆಗಳನ್ನು ತರಲು ಕಾಗೇರಿಯವರು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನಗಳನ್ನು ನಿರ್ಲಕ್ಷಿಸಿ ಟೀಕೆ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿಯಲ್ಲಿ ಹಳಿಯಾಳ ತಾಲೂಕನ್ನು ಅತಿ ಹಿಂದುಳಿದ ತಾಲೂಕು ಎಂದು ಗುರುತಿಸಲಾಗಿದೆ. 2023-24ರ ಕರ್ನಾಟಕ ಆರ್ಥಿಕ ಸಮೀಕ್ಷೆ ವರದಿಯ ಪ್ರಕಾರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉತ್ತರ ಕನ್ನಡ ಜಿಲ್ಲೆ 11ನೇ ಸ್ಥಾನದಲ್ಲಿದೆ ಎಂಬುದನ್ನೂ ಅವರು ಗಮನಕ್ಕೆ ತಂದಿದ್ದಾರೆ.

ಜಿಲ್ಲೆಯ ಅಭಿವೃದ್ಧಿಯಲ್ಲಿ ದೇಶಪಾಂಡೆಯವರ ಪಾತ್ರ ಕುರಿತು ಸಾರ್ವಜನಿಕ ವಲಯಗಳಲ್ಲಿ ಪ್ರಶ್ನೆಗಳು ಎದ್ದಿವೆ. ಮೂಲಸೌಕರ್ಯ ಸಮಸ್ಯೆಗಳು, ಉದ್ಯೋಗಾವಕಾಶಗಳ ಕೊರತೆ ಹಾಗೂ ಕೈಗಾರಿಕಾ ಅಭಿವೃದ್ಧಿಯ ನಿಧಾನಗತಿ ಕುರಿತು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಈಶ್ವರ ನಾಯ್ಕ ತಿಳಿಸಿದ್ದಾರೆ.
ಸಚಿವ ಸ್ಥಾನಾಕಾಂಕ್ಷಿಯಾಗಿ ಹೈಕಮಾಂಡ್ ಮೆಚ್ಚಿಸಲು ಈ ರೀತಿಯ ಹೇಳಿಕೆಗಳನ್ನು ನೀಡುವುದು ದುಃಖಕರ ಸಂಗತಿ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
About The Author


More Stories
AITM ಭಟ್ಕಳದಲ್ಲಿ IPR ಮತ್ತು ಪೇಟೆಂಟ್ಗಳ ಕುರಿತು ರಾಷ್ಟ್ರೀಯ ಮಟ್ಟದ ಆನ್ಲೈನ್ ಕಾರ್ಯಾಗಾರ
ಸತತ 5ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗೆದ್ದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು
ಯಶಸ್ವಿಯಾಗಿ ನಡೆದ ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟ: ಜನತಾ ವಿದ್ಯಾಲಯ ಸಮಗ್ರ ವೀರಾಗ್ರಣಿ