March 4, 2026

ಭಟ್ಕಳದಲ್ಲಿ ಮನೆಗಳ ಮೇಲೆ ಕಲ್ಲುತೂರಾಟ:೭ ಅಪ್ರಾಪ್ತರ ಬಂಧನ, ಗಾಂಜಾ ಸೇವನೆ ಪಾಸಿಟಿವ್

ಭಟ್ಕಳ: ತಾಲೂಕಿನ ಮುರುಡೇಶ್ವರ–ಬೈಲೂರು ಮಾರ್ಗದ ತೆಂಗಾರ್ ರಸ್ತೆಯ ಅಕ್ಕಪಕ್ಕದ ಕೆಲವು ಹಿಂದೂ ಮನೆಗಳ ಮೇಲೆ ಬೈಕ್‌ನಲ್ಲಿ ಬಂದ ಅನ್ಯಕೋಮಿನ ಅಪ್ರಾಪ್ತ ಯುವಕರು ಕಲ್ಲುತೂರಾಟ ನಡೆಸಿದ ಘಟನೆ ರಾತ್ರಿ ನಡೆದಿದೆ ಎಂದು ತಿಳಿದುಬಂದಿದೆ.


ಸ್ಥಳೀಯರ ಮಾಹಿತಿ ಪ್ರಕಾರ, ಬೈಕ್‌ನಲ್ಲಿ ಬಂದ ಸುಮಾರು ೭ ಜನ ಯುವಕರು ಏಕಾಏಕಿ ಮನೆಗಳತ್ತ ಕಲ್ಲು ತೂರಿ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಸಿದರು. ಕಲ್ಲುತೂರಾಟದಿಂದ ಕೆಲ ಮನೆಗಳ ಕಿಟಕಿ ಗಾಜುಗಳು ಹಾನಿಗೊಂಡಿರುವುದಾಗಿ ತಿಳಿದುಬಂದಿದೆ.
ಘಟನೆಯ ವೇಳೆ ಸ್ಥಳೀಯ ಸಾರ್ವಜನಿಕರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಇಬ್ಬರು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪೊಲೀಸರು ತನಿಖೆ ನಡೆಸಿ ಒಟ್ಟು ೭ ಅಪ್ರಾಪ್ತ ಯುವಕರನ್ನು ಬಂಧಿಸಿದ್ದಾರೆ. ಬಂಧಿತರನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ‘ಪಾಸಿಟಿವ್’ ಎಂದು ವರದಿ ಬಂದಿದೆ ಎಂದು ತಿಳಿದುಬಂದಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹಿಂದೂ ಸಂಘಟನೆಗಳ ಆಕ್ರೋಶ
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಜಾಗರಣಾ ವೇದಿಕೆ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮುರುಡೇಶ್ವರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು.


“ಶಾಂತಿಯುತವಾಗಿರುವ ಪ್ರದೇಶದಲ್ಲಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಇಂತಹ ಕೃತ್ಯವೆಸಗಿ ಕೋಮು ಸೌಹಾರ್ದತೆ ಕೆಡಿಸಲು ಯತ್ನಿಸುತ್ತಿದ್ದಾರೆ. ಕೇವಲ ಬಾಲಕರು ಎಂದು ಇವರನ್ನು ಬಿಡಬಾರದು. ಇವರ ಹಿಂದೆ ಯಾರ ಪ್ರಚೋದನೆ ಇದೆ ಎಂಬುದನ್ನು ತನಿಖೆ ಮಾಡಬೇಕು,” ಎಂದು ಅವರು ಒತ್ತಾಯಿಸಿದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆಗ್ರಹಿಸಿದರು.
ಪೊಲೀಸ್ ಬಿಗಿ ಬಂದೋಬಸ್ತ್
ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಘಟನೆಯಿಂದಾಗಿ ಸ್ಥಳದಲ್ಲಿ ಸಣ್ಣ ಮಟ್ಟದ ಉದ್ವಿಗ್ನತೆ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬೈಲೂರು ಮತ್ತು ಮುರುಡೇಶ್ವರ ಭಾಗದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಬಂಧಿತರಾದವರು ಅಪ್ರಾಪ್ತ ಬಾಲಕರಾಗಿರುವುದರಿಂದ ಅವರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ಕಲ್ಲುತೂರಾಟದ ಹಿಂದೆ ಯಾವುದಾದರೂ ಸಂಚು ಇದೆಯೇ ಅಥವಾ ಕೇವಲ ಪುಂಡಾಟಿಕೆಯೇ ಎಂಬ ಬಗ್ಗೆ ಪೊಲೀಸರು ಆಳವಾದ ತನಿಖೆ ಕೈಗೊಂಡಿದ್ದಾರೆ.


ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

About The Author

error: Content is protected !!