March 1, 2026

ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆ ನಲ್ಲಿ ತಜ್ಞರ ಕೊರತೆ: ತಕ್ಷಣ ಕ್ರಮಕ್ಕೆ ಆಗ್ರಹ

ಭಟ್ಕಳ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳ ತೀವ್ರ ಕೊರತೆ ಉಂಟಾಗಿದ್ದು, ಸಾರ್ವಜನಿಕರು ಗಂಭೀರ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಆಟೋ ಚಾಲಕರ ಸಂಘ ಹಾಗೂ ಸಾಮಾಜಿಕ ಹೋರಾಟಗಾರರು ಪ್ರತ್ಯೇಕವಾಗಿ ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ಆಟೋ ಚಾಲಕರ ಸಂಘದ ವತಿಯಿಂದ ಮಾನ್ಯ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಮೂಳೆ (ಆರ್ಥೋಪೆಡಿಕ್) ಹಾಗೂ ಹೆರಿಗೆ ಸಂಬಂಧಿತ ತಜ್ಞ ವೈದ್ಯರ ಕೊರತೆ ಉಂಟಾಗಿದೆ ಎಂದು ಉಲ್ಲೇಖಿಸಲಾಗಿದೆ. ಹಿಂದೆ ರಾಜ್ಯಕ್ಕೆ ಮಾದರಿಯಾಗಿದ್ದ ಆಸ್ಪತ್ರೆ ಈಗ ತಜ್ಞರ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ವೈದ್ಯರ ಕೊರತೆಯಿಂದ ತುರ್ತು ಚಿಕಿತ್ಸೆಗೆ ಭಟ್ಕಳದ ಬಡ ರೋಗಿಗಳು ದೂರದ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ವೆಚ್ಚವನ್ನು ಭರಿಸಲು ಆಗದೆ ಅನೇಕರು ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ ಎಂದು ಆಟೋ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ದಿನಗೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಯಂಗ್‌ಓನ್‌ಇಂಡಿಯಾ ಮಾಲಕರು ಹಾಗೂ ಸಾಮಾಜಿಕ ಹೋರಾಟಗಾರರಾದ ಮಾಸ್ತಪ್ಪ ನಾಯ್ಕ ಅವರು ತಹಶೀಲ್ದಾರರು ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು, ಕಣ್ಣಿನ ತಜ್ಞರು, ಅಸ್ಥಿ ತಜ್ಞರು, ಫಾರ್ಮಸಿಸ್ಟ್‌ಗಳು, ಗ್ರೂಪ್-ಡಿ ನೌಕರರು ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳ ಕೊರತೆ ತೀವ್ರವಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಗುಣಮಟ್ಟದ ಔಷಧಿಗಳ ಅಭಾವವೂ ಇರುವುದಾಗಿ ತಿಳಿಸಿದ್ದಾರೆ.


ತಾಲೂಕಿನ ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಜನರು ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದೆ ಗರ್ಭಿಣಿಯರು, ವೃದ್ಧರು ಹಾಗೂ ತುರ್ತು ಚಿಕಿತ್ಸೆಗೆ ಒಳಪಡುವ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ತುರ್ತು ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ಸಿಗದ ಕಾರಣ ಅಪಘಾತ ಪೀಡಿತರು ಹಾಗೂ ಗರ್ಭಿಣಿಯರು ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಮೂರು ವೈದ್ಯರ ನೇಮಕಕ್ಕೆ ಯಾಕೆ ಹಿಂದೇಟು ಹಾಕಲಾಗುತ್ತಿದೆ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. “ಸಚಿವರ ಜನತಾ ದರ್ಶನ ಕಾರ್ಯಕ್ರಮದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಬೇಡಿಕೆ ಈಡೇರದಿದ್ದರೆ ಆಸ್ಪತ್ರೆ ಎದುರು ಧರಣಿ ನಡೆಸಲಾಗುವುದು,” ಎಂದು ಎಚ್ಚರಿಸಿದ್ದಾರೆ.
“ಸಚಿವರ ಸ್ವಕ್ಷೇತ್ರದಲ್ಲಿಯೇ ವೈದ್ಯರ ಕೊರತೆ ಇರುವುದು ಬೇಸರದ ಸಂಗತಿ. ಎರಡು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ. ಬಡ ಜನರಿಗೆ ತಕ್ಷಣ ಸೌಕರ್ಯ ಒದಗಿಸಬೇಕು,” ಆಟೋ ಚಾಲಕ ಎಂದು ಗಣೇಶ ಹಳ್ಳೇರ –ಆಗ್ರಹಿಸಿದರು.


“ಖಾಸಗಿ ಆಸ್ಪತ್ರೆ ವೆಚ್ಚವನ್ನು ಭರಿಸುವ ಸ್ಥಿತಿ ಬಡ ಜನರಿಗೆ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲೇ ತಜ್ಞರನ್ನು ನೇಮಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ,” ಎಂದು ಮಾಸ್ತಪ್ಪ ನಾಯ್ಕ – ಸಾಮಾಜಿಕ ಹೋರಾಟಗಾರ ಹೇಳಿದರು.
ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಕಚೇರಿಯ ಶಿರಸ್ತೇದಾರದ ಪ್ರವೀಣ್ ಕುಮಾರ್ ಹಾಗೂ ರಾಧಿಕಾ ಶಾಸ್ತ್ರೀ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಅರುಣ್ ಕುಮಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಟೋ ಚಾಲಕರಾದ ಗಣೇಶ ಹಳ್ಳೇರ, ಪರಮೇಶ್ವರ ನಾಯ್ಕ, ಮಂಜುನಾಥ ನಾಯ್ಕ,ಶಂಕರ್ ನಾಯ್ಕ, ಸುರೇಶ್ ನಾಯ್ಕ, ಶ್ರೀದರ್ ನಾಯ್ಕ, ಸೋಮಯ್ಯ ನಾಯ್ಕ ಹಾಗೂ ಸಾರ್ವಜನಿಕರಾದ ವಿನಾಯಕ ನಾಯ್ಕ, ಬಾಬು, ಕೃಷ್ಣ ನಾಯ್ಕ, ಅಶೋಕ ನಾಯ್ಕ, ವಿಶ್ವ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!