March 29, 2026

ನೈಜ ಒತ್ತುವರಿಗಳನ್ನು ಸಕ್ರಮ ಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಚ್ಛಾಶಕ್ತಿ ತೋರಬೇಕು ಚಂದ್ರಕಾಂತ ಕೊಚರೇಕರ ಆಗ್ರಹ

ಹೋನ್ನಾವರ :ಜಿಲ್ಲೆಯಲ್ಲಿ ವಸತಿ ಮತ್ತು ಜೀವನೋಪಾಯಕ್ಕೆ 2005ರ ಪೂರ್ವದಿಂದ ಅರಣ್ಯ ಭೂಮಿಯಲ್ಲಿ ಮಾಡಿರುವ ಐದು ಎಕರೆ ಒಳಗಿನ ನೈಜ ಒತ್ತುವರಿಗಳನ್ನು ಸಕ್ರಮ ಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಚ್ಛಾಶಕ್ತಿ ತೋರಬೇಕು ಮತ್ತು ಜಿಲ್ಲೆಯ ಈ ಪ್ರಮುಖ ಜ್ವಲಂತ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲೆಯ ಸಂಸದರು ಮತ್ತು ಶಾಸಕರುಗಳು ಮದ್ಯಪ್ರವೇಶ ಮಾಡಬೇಕು ಎಂದು ಉತ್ತರಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಆಗ್ರಹ ಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯಲ್ಲಿ ಬಡಜನರು ಈ ಹಿಂದೆ ಮಾಡಿರುವ ಒತ್ತುವರಿಯ ಸಕ್ರಮದ ಸಮಸ್ಯೆ ಇತ್ತೀಚೆಗೆ ಕಗ್ಗಂಟಾಗುತ್ತಿದೆ. ಅರಣ್ಯ ಮತ್ತು ಅರಣ್ಯ ಭೂಮಿಯ ಬಗೆಗಿನ ವ್ಯತ್ಯಾಸವನ್ನು ಗಮನಿಸದೇ ಕೆಲವರು ಅನಗತ್ಯ ಗೊಂದಲವನ್ನು ಸ್ರಷ್ಠಿಸುತ್ತಿದ್ದಾರೆ.ಜಿಲ್ಲೆ ಹೊಂದಿರುವ ಒಟ್ಟು ಭೂಭಾಗದಲ್ಲಿ ಶೇ82ರಷ್ಟು ಅರಣ್ಯ ಭೂಮಿಯಾಗಿದ್ದು,ಅದರಲ್ಲಿ ಶೇಕಡ 50ರಷ್ಟು ಮಾತ್ರ ಅರಣ್ಯಪ್ರದೇಶವಾಗಿರುತ್ತದೆ. ಶೇ32ರಷ್ಟು ಅರಣ್ಯ ಇಲಾಖೆಯ ಭೂಮಿ ಜನವಸತಿ ಪ್ರದೇಶದಲ್ಲಿದ್ದು ಅದು ಜನರ ವಸತಿ ಮತ್ತು ಜೀವನೋಪಾಯಕ್ಕೆ ಬಳಕೆಯಾಗಿದೆ. ಇದರಲ್ಲಿ ಸರ್ಕಾರ ಹಲವೆಡೆ ನೆರೆಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿದ್ದು 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಸಕ್ರಮ ಪಡಿಸುವ ಅಂದಿನ ಸಮೀಕ್ಷೆಯ ಸಂದರ್ಭದಲ್ಲಿ ಬಿಟ್ಟು ಹೋಗಿರುವ ಹಲವು ಸಾವಿರ ಒತ್ತುವರಿ ಪ್ರಕರಣಗಳೂ ಸಹ ಸೇರಿದೆ ಎನ್ನುವದು ಇಲ್ಲಿ ಗಮನಾರ್ಹವಾಗಿದೆ. ಇನ್ನು ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯಡಿ ತಿರಸ್ಕ್ರತಗೊಂಡ ಅರ್ಜಿಗಳ ಮರುಪರಿಶೀಲನೆ ನಡೆಸುವದು ಸಹ ಜಿಲ್ಲೆಯಲ್ಲಿ ಇನ್ನೂ ಬಾಕಿ ಇದೆ.ಈ ನಡುವೆ ರಾಜ್ಯದಲ್ಲಿ 3ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವ ಅರಣ್ಯ ಭೂಮಿಯನ್ನು ತೆರವು ಮಾಡದಂತೆ ರಾಜ್ಯ ಸರ್ಕಾರ 2015ರ ಸೆ.21ರಂದು ಆದೇಶ ಮಾಡಿ ಅರಣ್ಯ ಭೂಮಿಸಾಗುವಳಿದಾರರ ಹಿತರಕ್ಷಣೆಗೆ ಮುಂದಾಗಿತ್ತು.ಈಗ ಹತ್ತು ವರ್ಷದ ನಂತರ ಸರ್ಕಾರದ ಸದರೀ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಜಗದೀಶ ಎನ್ನುವವರು ರಾಜ್ಯದ ಹೈಕೋರ್ಟಿನಲ್ಲಿ ಈಗ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ದಾಖಲಿಸಿದ್ದಾರೆ.

ಆದ್ದರಿಂದ ಈ ದಿಶೆಯಲ್ಲಿ ಅರಣ್ಯ ಭೂಮಿಸಾಗುವಳಿದಾರರ ಪರವಾಗಿ ರಾಜ್ಯ ಸರ್ಕಾರ ಅಗತ್ಯ ಅಫೀಟವೀಟ್ ಸಲ್ಲಿಸಲು ಆಸಕ್ತಿ ವಹಿಸಬೇಕು.ಅಗತ್ಯ ಸಮೀಕ್ಷೆಯಿಂದ 1978ರ ಪೂರ್ವದ ಮತ್ತು 2005 ರ ಪೂರ್ವದ ನೈಜ ಪ್ರಕರಣಗಳನಗುರುತಿಸಿ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಜಮಿನಿಯ ಬಿಡುಗಡೆಗೆ ರಾಜ್ಯದಿಂದ ಕೇಂದ್ರಕ್ಕೆ ಮರು ಪ್ರಸ್ತಾವ ಸಲ್ಲಿಸುವುದು ಸೇರಿದಂತೆ ಅರ್ಹರಿಗೆ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯಡಿ ಹಕ್ಕುಪತ್ರ ನೀಡಲು ಕ್ರಮ ಆಗಬೇಕು. ಈ ದಿಶೆಯಲ್ಲಿ ಜಿಲ್ಲೆಯ ಮಾನ್ಯ ಉಸ್ತುವಾರಿ ಸಚಿವರು,ಜಿಲ್ಲೆಯ ಶಾಸಕರ, ಸಂಸದರ ,ಹೋರಾಟ ಪ್ರಮುಖರ ಮತ್ತು ಉನ್ನತಾಧಿಕಾರ ಮಟ್ಟದ ಜಂಟಿ ಸಭೆಕರೆದು ಸೂಕ್ತ ಚರ್ಚೆಯಿಂದ ಜಿಲ್ಲೆಯ ಈ ಪ್ರಮುಖ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೊಚರೇಕರ್ ಅವರು ಒತ್ತಾಯ ಪಡಿಸಿದ್ದಾರೆ.


ಸಚಿವರ ಭರವಸೆ:ಅರಣ್ಯ ಹಕ್ಕುಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲ ಮತ್ತು ಲೋಪದೋಷಗಳನ್ನು ಕೂಡಲೇ ಸರಿಪಡಿಸಬೇಕು ಹಾಗೂ ತಿರಸ್ಕರಿಸಿದ ಅರ್ಜಿಗಳ ಪುನರ್ ಪರಿಶೀಲನೆಯಿಂದ ನೈಜ ಅರಣ್ಯ ಭೂಮಿ ಸಾಗುವಳಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳವೈದ್ಯರಿಗೆ ನಮ್ಮ ಹೋರಾಟ ಸಮಿತಿ ಇತ್ತೀಚೆಗೆ ಮನವಿ ಮಾಡಿದ್ದು, ಮಾರ್ಚ ಕೊನೆಯಲ್ಲಿ ಅಥವಾ ಎಪ್ರಿಲ ಮೊದಲವಾರ ಉನ್ನತಾಧಿಕಾರ ಮಟ್ಟದ ಸಭೆಕರೆದು ಚರ್ಚಿಸಲಾಗುವುದೆಂದು ಸಚಿವ ಮಂಕಾಳವೈದ್ಯ ಇತ್ತೀಚೆಗೆ ತಮ್ಮ ನಿಯೋಗಕ್ಕೆ ಭರವಸೆ ನೀಡಿದ್ದು, ಹೋರಾಟ ಪ್ರಮುಖರು ಸಭೆಯ ಆಹ್ವಾನದ ನೀರಿಕ್ಷೆ ಮಾಡುತ್ತಿದ್ದಾರೆ ಎಂದು ಅವರು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.

About The Author

error: Content is protected !!