ಭಟ್ಕಳ: ಸಣ್ಣ ನೀರಾವರಿ ಮತ್ತು ಅಂತರಜಲ ಅಭಿವೃದ್ಧಿ ಇಲಾಖೆಯ 2024-25ನೇ ಸಾಲಿನ 4702 ಪಶ್ಚಿಮ ವಾಹಿನಿ ಯೋಜನೆಯಡಿ ಮಂಜೂರಾಗಿರುವ ತಾಲೂಕಿನ ಮಾವಳ್ಳಿ-2 ಗ್ರಾಮ ಪಂಚಾಯತ ವ್ಯಾಪ್ತಿಯ ಆಚಾರಿಕೆರೆಯಿಂದ ಬೈಲಹೊಳೆಕಟ್ಟೆವರೆಗೆ ಎಡದಂಡೆ ಹಾಗೂ ಬಲದಂಡೆ ಖಾರ್ಲಾಂಡ್ ನಿರ್ಮಾಣ ಕಾಮಗಾರಿಗೆ ಸೇರಿದಂತೆ ಒಟ್ಟು 19 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳನ್ನು ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವ ಮಂಕಾಳ ವೈದ್ಯ, “ಬೈಲೂರಿನಲ್ಲಿ ಹುಟ್ಟಿದ್ದೇನೆ, ಆದರೆ ಕಳೆದ 25 ವರ್ಷಗಳಿಂದ ಈ ಭಾಗದಲ್ಲೇ ವಾಸವಾಗಿದ್ದೇನೆ. ಈ ಊರು ನನ್ನದು. ನನ್ನ ರಾಜಕೀಯ ಹಾಗೂ ವ್ಯಾಪಾರ ಜೀವನಕ್ಕೆ ಬೆಂಬಲ ನೀಡಿದ ಜನರನ್ನು ನಾನು ಮರೆಯುವುದಿಲ್ಲ. ಜಿಲ್ಲಾ ಪಂಚಾಯತ ಸದಸ್ಯನಿಂದ ಸಚಿವ ಸ್ಥಾನವರೆಗೆ ನನ್ನನ್ನು ತಂದದ್ದು ಜನರ ವಿಶ್ವಾಸ,” ಎಂದರು.
“ಮಿನಿ ವಿಧಾನ ಸೌಧ ಮತ್ತು ಕೆ.ಎಸ್.ಆರ್.ಟಿ.ಸಿ. ಡಿಪೋ ನಿರ್ಮಾಣ ನನ್ನ ಕಲ್ಪನೆ. ಆದರೆ ಬಿಜೆಪಿಯವರು ಅದನ್ನು ಮಾರಾಟ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಬಂದರೂ ನಾನು ಕ್ಷೇತ್ರದ ಅಭಿವೃದ್ಧಿ ಕೆಲಸಗಳಲ್ಲಿ ನಿರತರಾಗಿದ್ದೇನೆ,” ಎಂದು ಹೇಳಿದರು.
“ನಮ್ಮ ಸರಕಾರದ ಎಲ್ಲಾ ಗ್ಯಾರಂಟಿಗಳು ಫಲಾನುಭವಿಗಳ ಖಾತೆಗೆ ತಲುಪಿವೆ. ಉಚಿತ ಬಸ್ ಸೇವೆಯಂತಹ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ ಸರ್ಕಾರ ದಿವಾಳಿ ಆಗುತ್ತಿದೆ ಎನ್ನುವುದು ಬಿಜೆಪಿಯ ಸುಳ್ಳು ಪ್ರಚಾರ,” ಎಂದು ಟೀಕಿಸಿದರು.
ಖಾರ್ಲಾಂಡ್ ಕಾಮಗಾರಿಯ ಕುರಿತು ಮಾತನಾಡಿದ ಅವರು, “ಈ ಭಾಗದ ಜನರಿಗೆ ಅನುಕೂಲವಾಗುವಂತೆ ಒಂದು ವರ್ಷ ಕಾದು ಯೋಜನೆಯನ್ನು ರೂಪಿಸಿದ್ದೇವೆ. ಅಧಿಕಾರದಲ್ಲಿಲ್ಲದಿದ್ದರೂ ನಮ್ಮ ಕೆಲಸವೇ ಮಾತನಾಡಬೇಕು. ಕಾಯ್ಕಿಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಡಿ 40 ಕೋಟಿ ರೂ. ಕಾಮಗಾರಿಗಳನ್ನು ಕೈಗೊಂಡಿದ್ದೇನೆ,” ಎಂದರು.
“ಜನರಿಂದ ಬಂದ ಮನವಿಗಳನ್ನು ನೆರವೇರಿಸುವಲ್ಲಿ ಪ್ರಯತ್ನಿಸುತ್ತೇನೆ. ಕಾಯ್ಕಿಣಿಯಲ್ಲಿ ಪಿಯು ಕಾಲೇಜು ಆರಂಭಕ್ಕೆ ಕ್ರಮ ಕೈಗೊಂಡಿದ್ದೇನೆ. ಶಿಕ್ಷಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಯ್ಕಿಣಿ ಪಂಚಾಯತ ಮಾಜಿ ಅಧ್ಯಕ್ಷ ರಾಜು ನಾಯ್ಕ, ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ರಾಘವೇಂದ್ರ ಗೋಯ್ದಪ್ಪ ನಾಯ್ಕ, ಕುಪ್ಪಯ್ಯ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More Stories
ಭಟ್ಕಳ ಕೋಣಾರದಲ್ಲಿ ಚಿರತೆ ಓಡಾಟ:
ಮುರ್ಡೇಶ್ವರದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಸ್ವರ್ಣ ಪಾದುಕಾ ಸಂಚಾರ
ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ 90ನೇ ವರ್ಷದ ಸಂಭ್ರಮ: ನೂತನ ಕಟ್ಟಡ ಉದ್ಘಾಟನೆ ಹಾಗೂ ಗುರುವಂದನಾ ಕಾರ್ಯಕ್ರಮ