ಕೂಡ್ಲಿಗಿ: ಪಟ್ಟಣದ ಗ್ರಾಮ ದೇವತೆ ಶ್ರೀ ಊರಮ್ಮ ದೇವಿಗೆ ನೂತನವಾಗಿ ಚಿನ್ನದ ಮುಖ ಹಾಗೂ ಚಿನ್ನ ಲೇಪಿತ ಬೆಳ್ಳಿ ಕಿರೀಟ ಸಮರ್ಪಣೆ ಮಾಡುವ ಧಾರ್ಮಿಕ ಕಾರ್ಯಕ್ರಮ ಭಕ್ತಿ ಭಾವದಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಡಾ॥ ಎನ್.ಟಿ. ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ವಸತಿ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಜೊತೆಗೆ ಧಾರ್ಮಿಕ ಪುನಶ್ಚೇತನಕ್ಕೂ ಆದ್ಯತೆ ನೀಡಲಾಗಿದೆ ಎಂದರು. ಕಳೆದ ವರ್ಷ ಭಕ್ತರ ದೇಣಿಗೆ ಸಹಾಯದಿಂದ ಸುಮಾರು ಮೂರು ಕೋಟಿಗೂ ಅಧಿಕ ವೆಚ್ಚದಲ್ಲಿ ಶ್ರೀ ಊರಮ್ಮ ದೇವಿಯ ದೇವಸ್ಥಾನವನ್ನು ಭವ್ಯವಾಗಿ ನಿರ್ಮಿಸಲಾಗಿದೆ ಎಂದು ಹೇಳಿದರು.
ದೇವಸ್ಥಾನದ ಅಭಿವೃದ್ಧಿಗೆ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಚ್. ವೀರನಗೌಡ ಹಾಗೂ ಸೇವಾ ಸಮಿತಿ ಸದಸ್ಯರು ಸೇರಿದಂತೆ ಅನೇಕ ಭಕ್ತರು ನೀಡಿದ ಸಹಕಾರ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ದೇವಿಗೆ ಚಿನ್ನದ ಮುಖ ಹಾಗೂ ಚಿನ್ನ ಲೇಪಿತ ಕಿರೀಟ ಸಮರ್ಪಣೆಗೊಂಡಿರುವುದು ದೇವಸ್ಥಾನದ ಧಾರ್ಮಿಕ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
ಶಾಸಕರಾಗಿ ತಾವು ದೇವಸ್ಥಾನದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ದೇವಾಲಯಗಳಿಗೆ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಗ್ರಾಮ ದೇವತೆಯ ನೂತನ ಚೌಕಿ ಮನೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗಂಗಾಜಲ ತಂದು ಲೋಕಾರ್ಪಣೆ ಮಾಡಲಾಯಿತು.
ದೇವಿಗೆ ಸಮರ್ಪಿಸಲಾದ ಚಿನ್ನದ ಮುಖವನ್ನು ಸುಮಾರು 22 ತೊಲೆ ಚಿನ್ನದಲ್ಲಿ ನಿರ್ಮಿಸಲಾಗಿದ್ದು, ಇದರ ವೆಚ್ಚ ಅಂದಾಜು 25 ಲಕ್ಷ ರೂ. ಆಗಿದೆ. ಹಾಗೆಯೇ ಕೆ.ಎಚ್. ವೀರನಗೌಡ ಹಾಗೂ ಮಾಜಿ ಪಪಂ ಸದಸ್ಯ ಸಣ್ಣ ಕೊತ್ಲಪ್ಪ ಅವರ ದೇಣಿಗೆಯಲ್ಲಿ ಚಿನ್ನ ಲೇಪಿತ ಬೆಳ್ಳಿ ಕಿರೀಟವನ್ನು ತಯಾರಿಸಲಾಗಿದೆ. ಒಟ್ಟಾರೆ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ಈ ಆಭರಣಗಳನ್ನು ಸಮರ್ಪಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿ ತಿಳಿಸಿದೆ.
ಈ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ಕೆ.ಎಚ್. ವೀರನಗೌಡ, ಹಿ.ಮ. ಚಿದಾನಂದ ಸ್ವಾಮಿ, ಜೋಯೀಸ್ ಹಯವಧನಾಚಾರ್, ಸಣ್ಣ ಕೊತ್ಲಪ್ಪ, ಉದಯ ಜನ್ನು, ಮಂಜುನಾಥ, ಟಿ.ಜಿ. ಮಲ್ಲಿಕಾರ್ಜುನ ಗೌಡ, ಸಿ.ಬಿ. ಜಯರಾಂ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

More Stories