August 30, 2025

ಭಟ್ಕಳದ ದೋಣಿ ದುರಂತ: ನಾಲ್ವರು ಮೀನುಗಾರರು ನಾಪತ್ತೆ : ಸ್ಥಳಕ್ಕೆ ದೌಡಾಯಿಸಿದ ಸಚಿವರು

ಭಟ್ಕಳ : ಭಟ್ಕಳದ ಅಳ್ವೆಕೊಡಿಯಲ್ಲಿ ಬೃಹತ್ ದುರಂತ ಸಂಭವಿಸಿದ್ದು, ಮೀನುಗಾರಿಕೆಗೆ ತೆರಳಿದ್ದ ದೋಣಿ ಸಮುದ್ರದ ಅಲೆಗಳ ಆರ್ಭಟಕ್ಕೆ ಮಗುಚಿ ಬಿದ್ದು, ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಈ ಭೀಕರ ಘಟನೆಯ ಮಾಹಿತಿ ತಿಳಿದ ಶ್ರಮಿಕ ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ತಕ್ಷಣವೇ ಬೆಂಗಳೂರಿನಿAದ ಭಟ್ಕಳಕ್ಕೆ ದೌಡಾಯಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬುಧವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಗುರುವಾರವೂ ಶೋಧ ಕಾರ್ಯ ಮುಂದುವರಿದಿದೆ. ನಾಪತ್ತೆಯಾದವರ ಕುಟುಂಬ ಸದಸ್ಯರೊಂದಿಗೆ ಸಚಿವರು ಭೇಟಿ ಮಾಡಿ ಸಮಾಧಾನ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಂಕಾಳ ವೈದ್ಯರು ಇದು ತುಂಬಾ ನೋವು ತಂದ ಘಟನೆ. ನಾಲ್ಕು ಜೀವಗಳು ಸಮುದ್ರದ ಅಲೆಗಳಲ್ಲಿ ನಾಪತ್ತೆಯಾಗಿವೆ. ತುರ್ತು ಶೋಧ ಕಾರ್ಯವು ನಿರಂತರ ನಡೆಯುತ್ತಿದೆ ಎಂದು ತಿಳಿಸಿದರು.

ತೂಫಾನ ಎಚ್ಚರಿಕೆಯ ನಡುವೆಯೇ ಮೀನುಗಾರಿಕೆ;

ಇತ್ತೀಚೆಗಷ್ಟೆ ಕರಾವಳಿಯಲ್ಲಿ ತೀವ್ರ ತೂಫಾನ ಎಚ್ಚರಿಕೆ ನೀಡಲಾಗಿತ್ತು. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದ್ದರೂ, ಕೆಲವು ದೋಣಿಗಳು ಮೀನುಗಾರಿಕೆಗೆ ಹೊರಟಿದ್ದವು. ಒಬ್ಬರು ತೆರಳಿದರೆ ಇತರರೂ ಹೋಗುತ್ತಾರೆ. ಆದ್ದರಿಂದ ಇಂಥ ದುರ್ಘಟನೆಗಳು ಸಂಭವಿಸುತ್ತಿವೆ ಎಂದು ಸಚಿವರು ಅಳಲು ತೋಡಿದರು.

ಲೈಫ್ ಜಾಕೆಟ್ ಧರಿಸದ ಸ್ಥಿತಿಯಲ್ಲಿ ಅಪಾಯ ಹೆಚ್ಚು

ಪ್ರತಿಯೊಂದು ಮೀನುಗಾರರಿಗೆ ಲೈಫ್ ಜಾಕೆಟ್ ಇರಬೇಕು ಮತ್ತು ಧರಿಸಬೇಕು ಎಂಬುದು ಸರ್ಕಾರದ ಸ್ಪಷ್ಟ ನಿಯಮವಾಗಿದೆ. ನಾವು ಪ್ರತಿ ವರ್ಷ ಲೈಫ್ ಜಾಕೆಟ್ ನೀಡುತ್ತೇವೆ. ಆದರೆ ಕೆಲವರು ಇದನ್ನು ಧರಿಸುವುದಿಲ್ಲ. ಕನಿಷ್ಟ ಇಲ್ಲಿ ಹೋಗುವಾಗ ಮತ್ತು ಬರುವಾಗ ಹಾಕಿದರೆ, ಸಾವು ತಪ್ಪಿಸಬಹುದಾಗಿತ್ತು ಎಂದು ಮಂಕಾಳ ವೈದ್ಯ ವಿಷಾದ ವ್ಯಕ್ತಪಡಿಸಿದರು.

ಈ ವರ್ಷ 20 ದಿನಗಳಲ್ಲಿ 12 ಮಂದಿ ಮೀನುಗಾರರ ಸಾವು!

ಈ ವರ್ಷ ಕರಾವಳಿಯಲ್ಲಿ ಈಗಾಗಲೇ 20 ದಿನಗಳಲ್ಲಿ 12 ಮಂದಿ ಮೀನುಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಈ ವರ್ಷ ದುರ್ಘಟನೆಗಳು ಸಂಭವಿಸಿವೆ. ಮೀನುಗಾರರ ಸುರಕ್ಷತೆಗಾಗಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

About The Author