ತ್ಯಾಗಲಿ/ಶಿರಸಿ: “ನದಿಗಳು ಉಳಿದರೆ ಉಳಿದವು ನಾಡು, ನದಿಗಳು ಆಳಿದರೆ ಆಳಿದವು ನಾಡು” ಎನ್ನುವ ಆಶಯದೊಂದಿಗೆ, ಶ್ರೀ ಸ್ವರ್ಣವಲ್ಲಿ ಮಹಾಸ್ವಾಮಿಗಳವರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಆದೇಶದಂತೆ ಹಾಗೂ “ಬೇಡ್ತಿ – ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ”ಯ ಸಲಹೆಯನ್ವಯ ಹಂಗಾರಖಂಡ – ಬಾಳೇಕೈ ಹೊಳೆ ಅಂಚಿನಲ್ಲಿ (ತ್ಯಾಗಲಿ ಯಿಂದ ಹಂಗಾರಖಂಡ ರಸ್ತೆ) ಭಾನುವಾರ (ಜೂನ್ 7) ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ “ವನ ಮಹೋತ್ಸವ” ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

ನಮ್ಮ ಪವಿತ್ರ ನದಿಯ ಉಳಿವಿಗಾಗಿ ಹಾಗೂ ಧಾರ್ಮಿಕ-ಆಧ್ಯಾತ್ಮಿಕ ಅಸ್ಮಿತೆಯ ಪುನರುಜ್ಜೀವನಕ್ಕಾಗಿ ಆಯೋಜಿಸಲಾಗಿದ್ದ ಈ ಹಸಿರು ಕಾರ್ಯಕ್ರಮದ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನವನ್ನು ವೇದಮೂರ್ತಿ ಶ್ರೀಯುತ ವಿನಾಯಕ ಸುಬ್ರಾಯ ಭಟ್ ಮತ್ತೀಹಳ್ಳಿ ಅವರು ವಹಿಸಿದ್ದರು.

ಗಿಡ ನೆಟ್ಟು ಚಾಲನೆ – ನದಿ ರಕ್ಷಣೆಗೆ ದಿವ್ಯ ಸಂದೇಶ:
ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದ ವೇದಮೂರ್ತಿ ಶ್ರೀ ವಿನಾಯಕ ಸುಬ್ರಾಯ ಭಟ್ ಅವರು, “ಪಾಪನಾಶಿನಿ ನದಿಯ ಅಂಚಿನಲ್ಲಿ ಗಿಡಗಳನ್ನು ನೆಟ್ಟು ನಾವೆಲ್ಲರೂ ಪುಣ್ಯ ಪಾವನರಾಗಬೇಕು. ನಮ್ಮ ನದಿ, ನಮ್ಮ ನೀರನ್ನು ರಕ್ಷಿಸಿಕೊಳ್ಳಲು ನಾವೇ ಶ್ರಮಿಸಬೇಕು. ಎಲ್ಲರೂ, ಎಲ್ಲಾ ಊರುಗಳಲ್ಲೂ ಇಂತಹ ಪವಿತ್ರ ಕಾರ್ಯವನ್ನು ಕೈಗೊಳ್ಳುವ ಮೂಲಕ ಪ್ರಕೃತಿ ಮಾತೆಯ ರಕ್ಷಣೆಗೆ ಕೈಜೋಡಿಸಬೇಕು ಹಾಗೂ ಪರಮಪೂಜ್ಯ ಶ್ರೀ ಶ್ರೀಗಳವರ ಆಶೀರ್ವಾದಕ್ಕೆ ಪಾತ್ರರಾಗಬೇಕು. ಈ ನಿಟ್ಟಿನಲ್ಲಿ ಹಂಗಾರಖಂಡದ ಗ್ರಾಮಸ್ಥರು ಸದಾ ಉತ್ತಮ ಕೆಲಸಗಳನ್ನು ಮಾಡುತ್ತಾ ಮಾದರಿಯಾಗಿದ್ದಾರೆ” ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ನೆರೆದಿದ್ದ ನೂರಾರು ಪರಿಸರ ಪ್ರೇಮಿಗಳು “ಬೇಡ್ತಿ ನೀರನು ಬಿಡೆವು ಬಿಡೆವು… ಅಘನಾಶಿನಿ ಜಲ ಕೊಡೆವು ಕೊಡೆವು” ಎಂಬ ಘೋಷವಾಕ್ಯಗಳನ್ನು ಮೊಳಗಿಸಿ ಗಿಡ ನೆಡುವ ಮೂಲಕ ನದಿ ಸಂರಕ್ಷಣೆಯ ಸಂಕಲ್ಪ ಮಾಡಿದರು.

ಅರಣ್ಯ ಅಧಿಕಾರಿಗಳಿಗೆ ಗೌರವ ಸಮರ್ಪಣೆ:
ಇದೇ ಶುಭ ಸಂದರ್ಭದಲ್ಲಿ ವಲಯಕ್ಕೆ ಹೊಸದಾಗಿ ಆಗಮಿಸಿದ ಫಾರೆಸ್ಟ್ ಅಧಿಕಾರಿಗಳನ್ನು ಹಂಗಾರಖಂಡ ಗ್ರಾಮಸ್ಥರ ಪರವಾಗಿ ಶಾಲು ಹೊದಿಸಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಶಿರಸಿ ವಲಯ ಅರಣ್ಯ ಇಲಾಖೆಯ ಆರ್‌ಎಫ್‌ಒ (RFO) ಮಾನ್ಯ ಗಿರೀಶ್ ಸರ್, ಕಾನಸೂರು ಫಾರೆಸ್ಟ್ ವಲಯದ ಡೆಪ್ಯುಟಿ ಆರ್‌ಎಫ್‌ಒ ಶ್ರೀ ಕಾರ್ತಿಕ್ ನಾಯ್ಕ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸ್ವರ್ಣವಲ್ಲಿ ಮಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಎಂ. ಆರ್. ಹೆಗಡೆ ಬಾಳೆಜಡ್ಡಿ, ತಂಗಾರಮನೆಯ ಶ್ರೀ ಗೋಪಾಲಕೃಷ್ಣ ಹೆಗಡೆ, ನಾಣಿಕಟ್ಟಾದ ಅಗ್ರಗಣ್ಯ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಜಿ. ಹೆಗಡೆ ಬೇಳಗದ್ದೆ, ಊರಿನ ಹಿರಿಯರಾದ ಶ್ರೀ ಮಂಜುನಾಥ ಎಂ. ಹೆಗಡೆ ಹಂಗಾರಖಂಡ, ಶ್ರೀ ನಾರಾಯಣ ಹುಲಿಯಾ ನಾಯ್ಕ ಹಂಗಾರಖಂಡ ಹಾಗೂ ಸಮಿತಿಯ ಸದಸ್ಯರಾದ ಶ್ರೀ ನಾಗರಾಜ ಆರ್. ನಾಯ್ಕ ಹಂಗಾರಖಂಡ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಗಣಪತಿ ಅಣ್ಣಪ್ಪ ಹೆಗಡೆ ತ್ಯಾಗಲಿ, ಊರಿನ ಪ್ರಮುಖರಾದ ಶ್ರೀ ಗಣಪತಿ ವಿ. ಹೆಗಡೆ, ಶ್ರೀ ಪ್ರಕಾಶ್ ಜಿ. ಹೆಗಡೆ, ಶ್ರೀ ಶಶಿಧರ ಎನ್. ಹೆಗಡೆ ತ್ಯಾಗಲಿ, ಶ್ರೀ ಕೌಶಿಕ್ ಎನ್. ಹೆಗಡೆ ಮತ್ತೀಹಳ್ಳಿ, ಶ್ರೀ ವಿನಾಯಕ ಕೃಷ್ಣ ನಾಯ್ಕ ಹಂಗಾರಖಂಡ, ಶ್ರೀ ಅಭಿಷೇಕ ಎಸ್. ಹೆಗಡೆ ತ್ಯಾಗಲಿ, ಶ್ರೀ ಹನುಮ ಆರ್. ನಾಯ್ಕ ಹಂಗಾರಖಂಡ, ಶ್ರೀ ಪ್ರವೀಣ್ ನಾಯ್ಕ್ ಸೇರಿದಂತೆ ಅಘನಾಶಿನಿ ಸಮಿತಿಯ ಸದಸ್ಯರು, ಹಂಗಾರಖಂಡ-ಬಾಳೇಕೈನ ಸಮಸ್ತ ಗ್ರಾಮಸ್ಥರು, ಮಾತೆಯರು ಮತ್ತು ಮಕ್ಕಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮ ನಿರ್ವಹಣೆ:
ಸಮಿತಿಯ ಸದಸ್ಯರಾದ ಶ್ರೀ ರಮೇಶ್ ಟಿ. ನಾಯ್ಕ ಹಂಗಾರಖಂಡ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಸಮಿತಿಯ ಕಾರ್ಯದರ್ಶಿ ಶ್ರೀ ನಟರಾಜ ಎಂ. ಹೆಗಡೆ ಹಂಗಾರಖಂಡ ಸ್ವಾಗತ ಕೋರಿದರು. ಸಮಿತಿಯ ಮತ್ತೊಬ್ಬ ಸದಸ್ಯರಾದ ಶ್ರೀ ವಾಸುದೇವ ಎನ್. ನಾಯ್ಕ ಹಂಗಾರಖಂಡ ವಂದನಾರ್ಪಣೆ ಮಾಡಿದರು.

More Stories
ವಿಶ್ವ ಪರಿಸರ ದಿನ: ವಡೇರ ಮಠದಲ್ಲಿ ಒಂದು ಗಿಡ ಅಮ್ಮನ ಹೆಸರಲ್ಲಿ ಅಭಿಯಾನ
ವಡೇರ ಮಠದಲ್ಲಿ ಲಕ್ಷ ಕುಂಕುಮಾರ್ಚನೆ ಸಂಭ್ರಮ; 200ಕ್ಕೂ ಅಧಿಕ ಮಹಿಳೆಯರಿಂದ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ
ಚಿಪ್ಪೆಕಲ್ಲು ದುರಂತದ 11 ಮೃತರ ಸ್ಮರಣೆಗೆ 11 ಗಿಡ ನೆಟ್ಟು ಗೌರವ ಸಲ್ಲಿಸಿದ ಮಂಕಾಳ ವೈದ್ಯ