ಉಡುಪಿ: “ಬೇಲಿಯೇ ಎದ್ದು ಹೊಲ ಮೆದ್ದಂತೆ” ಎಂಬ ಗಾದೆ ಮಾತು ಸದ್ಯ ಉಡುಪಿ ನಗರದ ಅಂಬಾಗಿಲು–ಮಣಿಪಾಲ ಸಂಪರ್ಕಿಸುವ ಮುಖ್ಯ ರಸ್ತೆಯ ಪರಿಸ್ಥಿತಿಗೆ ಅನ್ವಯವಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಮಳೆಗಾಲದ ಆರಂಭದಲ್ಲೇ ಉಡುಪಿ ನಗರಸಭೆ ಕೈಗೊಂಡಿರುವ ಒಳಚರಂಡಿ ಹಾಗೂ ಕುಡಿಯುವ ನೀರಿನ ಯೋಜನೆಯ ಪೈಪ್ ಬದಲಾವಣೆ ಮತ್ತು ಜೋಡಣೆ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆ ಉದ್ದಕ್ಕೂ ಆಳವಾದ ಹೊಂಡಗಳನ್ನು ಅಗೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಇದರ ನಡುವೆಯೇ ನಗರಸಭೆಯು ಸೆಪ್ಟೆಂಬರ್ ಅಂತ್ಯದವರೆಗೆ ರಸ್ತೆ ಬದಿಯಲ್ಲಿ ಯಾವುದೇ ರೀತಿಯ ಅಗೆತ ಕಾಮಗಾರಿ ನಡೆಸದಂತೆ ಸಾರ್ವಜನಿಕರಿಗೆ ನಿಷೇಧ ಹೇರಿರುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಆದರೆ ಈ ನಿಯಮ ಕೇವಲ ಸಾರ್ವಜನಿಕರಿಗೆ ಮಾತ್ರವೇ ಅನ್ವಯವಾಗುತ್ತದೆಯೇ? ನಗರಸಭೆ ಹಾಗೂ ಅದರ ಅಧೀನ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ನಾಗರಿಕರು ಎತ್ತಿದ್ದಾರೆ.

ಅಂಬಾಗಿಲು–ಮಣಿಪಾಲ ರಸ್ತೆ ಮೂಲಕ ಪ್ರತಿದಿನ ನೂರಾರು ಆಂಬುಲೆನ್ಸ್‌ಗಳು ಮಣಿಪಾಲ ಆಸ್ಪತ್ರೆಗೆ ಸಂಚರಿಸುತ್ತವೆ. ರಸ್ತೆ ಅಗೆದು ನಿರ್ಮಾಣಗೊಂಡಿರುವ ಹೊಂಡಗಳು ಮತ್ತು ಗುಂಡಿಗಳಿಂದ ವಾಹನಗಳ ವೇಗ ಕುಂಠಿತಗೊಳ್ಳುತ್ತಿದ್ದು, ತುರ್ತು ಚಿಕಿತ್ಸೆಗೆ ಸಾಗುತ್ತಿರುವ ರೋಗಿಗಳು ಸಮಯಕ್ಕೆ ಆಸ್ಪತ್ರೆಗೆ ತಲುಪುವಲ್ಲಿ ವಿಳಂಬವಾಗುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ತಕ್ಷಣ ಸ್ಪಂದಿಸಿ ಮಳೆಗಾಲದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ನಿರಾತಂಕ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

“ಬೇಲಿಯೇ ಎದ್ದು ಹೊಲ ಮೆದ್ದಂತೆ” ಎಂಬ ಗಾದೆ ಮಾತು ಇಲ್ಲಿ ನಿಜವಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


More Stories
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಯಶಸ್ವಿಯಾಗಿ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ : ಮೆದುಳಿಗೆ ಪೇಸ್ಮೇಕರ್ ಅಳವಡಿಕೆ
ವರದ ಗ್ರಾಮೀಣ ಬ್ಯಾಂಕ್ ನಲ್ಲಿ ಸೇವೆನೀಡಿ ನಿವೃತ್ತಿ ಗೊಂಡ ನೌಕರ ಕುಟುಂಬದಿAದ ಅಂಡಮಾನ್ ಮತ್ತು ನೀಲ್ ಐ ಲ್ಯಾಂಡ್ ಪ್ರವಾಸ
ಕಾರ್ತೀಕ ದೀಪೋತ್ಸವ ದಿನಾಂಕ 5/11/2025 ರಂದು