June 15, 2026

“ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ : ರವಿ ಎಚ್. ನಾಯಕ” 🌿🌍

ಹಿರೇಗುತ್ತಿಯಲ್ಲಿ ಹೈಸ್ಕೂಲಿನಲ್ಲಿ ಪರಿಸರ ಜಾಗೃತಿ ಮತ್ತು ಅರಿವು ಕಾರ್ಯಕ್ರಮ

ಹಿರೇಗುತ್ತಿ: “ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪ್ರಕೃತಿಯನ್ನು ಉಳಿಸುವ ಮೂಲಕವೇ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನೀಡಲು ಸಾಧ್ಯ” ಎಂದು ನಿವೃತ್ತ ಡಿ.ಎಫ್.ಓ. ರವಿ ಎಚ್. ನಾಯಕ ಹನೇಹಳ್ಳಿ ಹೇಳಿದರು.

ಅವರು ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲ್‌ನಲ್ಲಿ ಸವಿ ಫೌಂಡೇಶನ್, ಮೂಡಬಿದಿರೆ, ಆಶ್ರಯ ಫೌಂಡೇಶನ್ ಹಿರೇಗುತ್ತಿ, ಶ್ರೀ ಬ್ರಹ್ಮ ಜಟಗ ಯುವಕ ಸಂಘ ಹಿರೇಗುತ್ತಿ, _ಎಫ್.ಬಿ.ಏ ಬೆಂಗಳೂರು – ಚೆನೈ ಹಾಗೂ ಪ್ರಕೃತಿ ಇಕೋ ಕ್ಲಬ್ ಸೆಕೆಂಡರಿ ಹೈಸ್ಕೂಲ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಪರಿಸರ ಜಾಗೃತಿ ಮತ್ತು ಅರಿವು‘ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಪರಿಸರ ಸಂರಕ್ಷಣೆ ಇಂದು ಜಾಗತಿಕ ಸವಾಲಾಗಿ ಪರಿಣಮಿಸಿದ್ದು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಮರ ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಪ್ರಕೃತಿಯೊಂದಿಗೆ ಹೊಂದಾಣಿಕೆಯ ಜೀವನಶೈಲಿಯೇ ಮಾನವ ಬದುಕಿನ ಭದ್ರತೆಗೆ ಆಧಾರವಾಗಿದ್ದು, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು”.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್. ನಾಯಕ ವಹಿಸಿ ಮಾತನಾಡಿ, “ಪರಿಸರ ಸಂರಕ್ಷಣೆ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾದ ಮೌಲ್ಯವಾಗಿದೆ. ಪರಿಸರದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿಯ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು” ಎಂದು ಹೇಳಿದರು.

ಸವಿ ಫೌಂಡೇಶನ್‌ನ ಸಂದೀಪ ನಾಯಕ ಮಾತನಾಡಿ, “ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕವೇ ಹಸಿರು ಭವಿಷ್ಯವನ್ನು ನಿರ್ಮಿಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಆಶ್ರಯ ಫೌಂಡೇಶನ್ ಅಧ್ಯಕ್ಷ ರಾಜೀವ ಗಾಂವಕರ ಮಾತನಾಡಿ, “ಇಂದಿನ ಯುವಪೀಳಿಗೆಯಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದು ಅತ್ಯಗತ್ಯವಾಗಿದೆ. ಮರಗಳ ಸಂರಕ್ಷಣೆ, ನೀರಿನ ಮಿತ ಬಳಕೆ ಹಾಗೂ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.

ಕುಮಟಾ ಡಿಪ್ಲೊಮಾ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ರತನ್ ಗಾಂವಕರ ಪರಸರ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು

ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಮಹೇಶ ನಾಯಕ ಸಗಡಗೇರಿ ಮಾತನಾಡಿ, “ಪ್ರಕೃತಿಯೊಂದಿಗೆ ಹೊಂದಾಣಿಕೆಯ ಜೀವನಶೈಲಿಯೇ ಮಾನವನ ನೆಮ್ಮದಿಗೆ ಕಾರಣವಾಗುತ್ತದೆ. ಪರಿಸರ ನಾಶದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕೆಂದರು”.

ಹೈಸ್ಕೂಲ್ ಆಡಳಿತ ಮಂಡಳಿಯ ಸದಸ್ಯರು ಹಾಗೂ ನಿವೃತ್ತ ಶಿಕ್ಷಕರಾದ ಎನ್. ಟಿ. ನಾಯಕ ಮಾತನಾಡಿ, “ಪರಿಸರ ಸಂರಕ್ಷಣೆಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಬೆಳೆಸಬೇಕು. ಶಾಲೆಗಳು ಹಸಿರು ಪರಿಸರ ನಿರ್ಮಾಣದ ಕೇಂದ್ರಗಳಾಗಬೇಕು” ಎಂದು ಅಭಿಪ್ರಾಯಪಟ್ಟರು.

ವಿಶ್ರಾಂತ ಹೈಸ್ಕೂಲ್ ಮುಖ್ಯಾಧ್ಯಾಪಕರು ಹಾಗೂ ಲೇಖಕರಾದ ಎನ್. ಆರ್. ಗಜು ಮಾತನಾಡಿ, “ಪ್ರಕೃತಿಯನ್ನು ಪ್ರೀತಿಸುವ ಸಂಸ್ಕೃತಿ ನಮ್ಮ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಪರಿಸರ ಉಳಿದರೆ ಮಾತ್ರ ಮಾನವ ಜೀವನ ಸುರಕ್ಷಿತವಾಗಿರುತ್ತದೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಸೃಜನ್ ಗೌಡ, ಕಾರ್ತಿಕ ಗೌಡ, ಭೂಮಿಕಾ ಹರಿಕಂತ್ರ ಹಾಗೂ ಭವ್ಯ ಗೌಡ, ಮಾನ್ವಿ ಮೂಡಂಗಿ ಅವರನ್ನು ಸವಿ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಬಹುಮಾನ ವಿತರಿಸಲಾಯಿತು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಹೈಸ್ಕೂಲ್ ವಿದ್ಯಾರ್ಥಿನಿ ಎನ್ ವಿ ಇಂಪನಾ ಳಿಗೆ ಪ್ರಶಸ್ತಿ ಫಲಕ ನೀಡಿ ಅಭಿನಂದಿಸಲಾಯಿತು

ಅದೇ ರೀತಿ ಪ್ರತಿಭಾವಂತ ವಿದ್ಯಾರ್ಥಿ ಪ್ರೀತಮ್ ಪಾಲನಕರ್ ಅವರಿಗೆ ಶಿಕ್ಷಣ ಪ್ರೋತ್ಸಾಹಕ್ಕಾಗಿ ಎನ್. ಟಿ. ನಾಯಕ ಅವರು ₹5,000 ಪ್ರೋತ್ಸಾಹಧನ ನೀಡಿ ಅಭಿನಂದಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಹೈಸ್ಕೂಲ್ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಕಾಂತ ಎನ್ ನಾಯಕ, ಉದ್ದಂಡ ಗಾಂವಕರ, ಯುವಕ ಸಂಘದ ಅಧ್ಯಕ್ಷ ಆಕಾಶ ನಾಯಕ ಉಪಾಧ್ಯಕ್ಷ ಪ್ರೀತಮ್ ಗಾಂವಕರ, ಹರೀಶ ನಾಯಕ,ಸುರೇಂದ್ರ ನಾಯಕ, ಸುಭಾಶ ನಾಯಕ.ಹೊನ್ನಪ್ಪ ನಾಯಕ ಮೊಗಟಾ,ಗಣಪತಿ ನಾಯಕ ಶ್ರೀನಿವಾಸ ಪಾಲನಕರ್ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಕು. ಶಿವಾನಿ ಗುನಗಾ ಮತ್ತು ಸಂಗಡಿಗರು ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಹಾಡಿದರು. ಶಿಕ್ಷಕಿ ಜಾನಕಿ ಗೊಂಡ ಸರ್ವರನ್ನು ಸ್ವಾಗತಿಸಿದರು. ಎನ್ ರಾಮು ಹಿರೇಗುತ್ತಿ ನಿರೂಪಿಸಿದರು.ಮಹಾದೇವ ಗೌಡ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ: ಎನ್ ರಾಮು ಹಿರೇಗುತ್ತಿ

About The Author

error: Content is protected !!