ಹೊನ್ನಾವರ (ಕರ್ಕಿ): ಇಲ್ಲಿನ ಪ್ರತಿಷ್ಠಿತ ಹಾಗೂ 80 ವಸಂತಗಳನ್ನು ಪೂರೈಸಿರುವ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಲಿಮಿಟೆಡ್ ಸಂಸ್ಥೆಯ ಸಿಎಸ್ಆರ್ (CSR) ಅನುದಾನದಡಿ ಸುಮಾರು 14 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ವಲಯ ಪರಿಸರ ಅಧಿಕಾರಿ ಶ್ರೀಮತಿ ವಿಜಯಾ ಪಂಡಿತ, “ಒಳ್ಳೆಯ ಕೆಲಸ ಮಾಡುವಾಗ ಯೋಚಿಸುವ ಅಗತ್ಯವಿಲ್ಲ, ಕೆಟ್ಟ ಕೆಲಸ ಮಾಡುವಾಗ ಮಾತ್ರ ಯೋಚಿಸಬೇಕು. ಒಳ್ಳೆಯದನ್ನು ಸ್ವೀಕರಿಸುವ ಮನಸ್ಥಿತಿ ನಮ್ಮದಾಗಿದ್ದಾಗ ಯಾವುದೇ ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ,” ಎಂದರು. ಅಲ್ಲದೆ, ವಿದ್ಯಾರ್ಥಿಗಳು ಶೌಚಾಲಯವನ್ನು ಸರಿಯಾದ ನಿರ್ವಹಣೆಯೊಂದಿಗೆ ಬಳಸಬೇಕು ಎಂದು ಕಿವಿಮಾತು ಹೇಳಿ, ಶಾಲೆಯ ಕೋರಿಕೆಗೆ ಸ್ಪಂದಿಸಿದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಅಧಿಕಾರಿ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದರು.

ಉತ್ತಮ ಕಲಿಕಾ ವಾತಾವರಣಕ್ಕೆ ಸಿಎಸ್ಆರ್ ಸಾರ್ಥಕತೆ:
ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ನ ಸೀನಿಯರ್ ಡಿಜಿಎಂ ಶ್ರೀ ರಾಘವೇಂದ್ರ ಜೆ.ಆರ್ ಮಾತನಾಡಿ, “80 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಭೌತಿಕ, ಸಾಮಾಜಿಕ ಹಾಗೂ ಬೌದ್ಧಿಕ ವಾತಾವರಣ ಅತ್ಯುತ್ತಮವಾಗಿದೆ. ಬಾಹ್ಯ ನೈರ್ಮಲ್ಯ ಹಾಗೂ ಉತ್ತಮ ಕಲಿಕಾ ಪರಿಸರ ಹೊಂದಿರುವ ಇಂತಹ ಶಾಲೆಗೆ ಸಿಎಸ್ಆರ್ ಅನುದಾನ ನೀಡಿರುವುದು ನಮ್ಮ ಸಂಸ್ಥೆಗೆ ಸಾರ್ಥಕತೆ ತಂದಿದೆ,” ಎಂದು ಶಾಲಾ ಆಡಳಿತ ವ್ಯವಸ್ಥೆಯನ್ನು ಶ್ಲಾಘಿಸಿದರು.
ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಶ್ರೀ ರಾಜೇಶ್ ತಿವಾರಿ ಮಾತನಾಡಿ, ಕಾನೂನಿಗೆ ಅನುಗುಣವಾಗಿ ಆದ್ಯತೆಯ ಮೇರೆಗೆ ಸಾಮಾಜಿಕ ಒಳಿತಿಗಾಗಿ ಸಿಎಸ್ಆರ್ ಫಂಡ್ ಬಳಸಲಾಗುತ್ತಿದೆ. ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹತ್ತಿ ಬಟ್ಟೆಯ ಚೀಲಗಳನ್ನು ವಿತರಿಸಲಾಯಿತು.

ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕಂಪನಿಗಳ ಕೊಡುಗೆ ಶ್ಲಾಘನೀಯ:
ಹೊನ್ನಾವರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಶ್ರೀಮತಿ ಜಯಶ್ರೀ ನಾಯ್ಕ ಮಾತನಾಡಿ, ಕಂಪನಿಗಳು ತಮ್ಮ ಲಾಭಾಂಶದಲ್ಲಿ ಇಂತಹ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಇದೇ ವೇಳೆ ಇತ್ತೀಚಿನ NMMS ಪರೀಕ್ಷೆಯಲ್ಲಿ ಆಯ್ಕೆಯಾದ ಶಾಲೆಯ ಐದು ವಿದ್ಯಾರ್ಥಿಗಳನ್ನು ಅವರು ಅಭಿನಂದಿಸಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆಯು ಸತತವಾಗಿ ಆಯೋಜಿಸುತ್ತಿರುವ NMMS ತರಬೇತಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂಪನಿಯು ಇನ್ನಷ್ಟು ಉನ್ನತಿಗೇರಲಿ – ಗಜಾನನ ಹೆಗಡೆ ಹಾರೈಕೆ:
ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಗಜಾನನ ಹೆಗಡೆ ಮಾತನಾಡಿ, “14 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಟ್ಟ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಸಂಸ್ಥೆಗೆ ಧನ್ಯವಾದಗಳು. ಗ್ರಾಮದ ಅಧಿದೇವ ಶ್ರೀ ಚೆನ್ನಕೇಶವನ ಆಶೀರ್ವಾದದಿಂದ ಕಂಪನಿಯು ಉದ್ಯಮ ರಂಗದಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ,” ಎಂದು ಹಾರೈಸಿದರು.

ಗಣ್ಯರ ಉಪಸ್ಥಿತಿ:
ವೇದಿಕೆಯಲ್ಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ನ ಸುಪ್ರವೈಸರ್ ಶ್ರೀ ರಾಜು ರೋಸಯ್ಯ, ಗುತ್ತಿಗೆದಾರರಾದ ಶ್ರೀ ವೀರೇಂದ್ರ ಶೆಟ್ಟಿ, ಶ್ರೀ ನರಸಿಂಹ ಪಂಡಿತ ಗುಣವಂತೆ, ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ದುರ್ಗಾಬಾಯಿ ಜೋಶಿ, ಶ್ರೀ ಚಂದ್ರಶೇಖರ ಜಿ. ಹೆಗಡೆ ಹಾಗೂ ಶಾಲೆಯ ಹಿತೈಷಿಗಳು ಮತ್ತು ಹಿರಿಯರಾದ ಶ್ರೀ ಕೆ. ಎಸ್. ಭಟ್ಟ ಉಪಸ್ಥಿತರಿದ್ದು ಶುಭ ಹಾರೈಸಿದರು.
ಆರಂಭದಲ್ಲಿ ಶಾಲೆಯ ಮುಖ್ಯ ಅಧ್ಯಾಪಕರಾದ ಶ್ರೀ ಎಲ್. ಎಂ. ಹೆಗಡೆ ಅವರು ಸಿಎಸ್ಆರ್ ಅನುದಾನ ದೊರೆಯಲು ಶ್ರಮಿಸಿದ ಶ್ರೀಮತಿ ವಿಜಯಾ ಪಂಡಿತ ದಂಪತಿಗಳನ್ನು ಹಾಗೂ ವೇದಿಕೆಯ ಗಣ್ಯರನ್ನು ಶಾಲೆಯ ಪರವಾಗಿ ಸನ್ಮಾನಿಸಿ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಶ್ರೀಕಾಂತ ಹಿಟ್ನಳ್ಳಿ ವಂದಿಸಿದರು, ಶ್ರೀ ಸುಬ್ರಹ್ಮಣ್ಯ ಭಟ್ಟ ಪುಷ್ಪ ನೀಡಿ ಗೌರವಿಸಿದರು. ಶ್ರೀಮತಿ ಮುಕ್ತಾ ನಾಯ್ಕ ಹಾಗೂ ಶ್ರೀಮತಿ ಸೀಮಾ ಭಟ್ಟ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

More Stories
ಬರೋಬ್ಬರಿ ₹17 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ; ಇಬ್ಬರು ಖದೀಮರನ್ನು ಹೆಡೆಮುರಿ ಕಟ್ಟಿದ ಪೊಲೀಸರು
ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವರ್ಷದ ಅತ್ಯುತ್ತಮ ICSE ಶಾಲಾ ಪ್ರಶಸ್ತಿಯನ್ನು ಪಡೆದಿರುತ್ತದೆ.
ಉಪ್ಪೋನಿಯ ಶ್ರೀ ನಾಗಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅಧಿಕ ಮಾಸದ ಪುಣ್ಯೋತ್ಸವ: ವನದುರ್ಗ ಹೋಮ ಮತ್ತು ಜಪ ಕಾರ್ಯಕ್ರಮ