
ಭಟ್ಕಳ : ತಾಲೂಕಿನ ಜಾಲಿ ಸರ್ಕಾರಿ ಪ್ರೌಢಶಾಲೆಯ ಶ್ರೀಧರ ಶೇಟ್ ಶಿರಾಲಿಯವರು ಬಹುಮುಖ ಪ್ರತಿಭೆಯ ಶಿಕ್ಷಕರಾಗಿ ಜನ ಮೆಚ್ಚುಗೆ ಗಳಿಸಿದ್ದಾರೆ. ಈಗ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯಿಂದ ಪುರಸ್ಕೃತರಾಗಿ ಪ್ರಶಸ್ತಿಯ ಗೌರವ ಹೆಚ್ಚಿಸಿದ್ದಾರೆ.ಅವರು ಉತ್ತಮ ಶಿಕ್ಷಕರಾಗಿ ಅಷ್ಟೇ ಅಲ್ಲದೆ ಕವಿ, ಲೇಖಕ, ಅಂಕಣಕಾರ,ಉತ್ತಮ ಚಿತ್ರ ಕಲಾವಿದ, ವಾಗ್ಮಿ,ವ್ಯಂಗ್ಯಚಿತ್ರಕಾರ,ಕಾರ್ಯಕ್ರಮ ನಿರೂಪಕ,ಸಂಘಟನಾಕಾರ,ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ, ಸಂಪನ್ಮೂಲ ವ್ಯಕ್ತಿ ಹೀಗೆ ಬಹುಮುಖ ಪ್ರತಿಭೆಯ ಸಂಗಮವಾಗಿ ಜನಮನ್ನಣೆ ಗಳಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ:
1992 ರ ನವೆಂಬರ್ 6ರಂದು ಉ.ಕ ಜಿಲ್ಲೆಯ ಸಿದ್ಧಾಪುರ ತಾಲೂಕಿನ ವಂದಾನೆ ಗ್ರಾಮದ ಶಿರೂರಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿಗೆ ಸೇರಿ, ನಂತರ ಭಟ್ಕಳ ತಾಲೂಕಿನ ಬೈಲೂರು ಈಗರ್ಜಿ ಮತ್ತು ತಟ್ಟಿಹಕ್ಕಲ್ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಒಟ್ಟು ಹದಿನೆಂಟು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಬಳಿಕ 2010ರ ಅಕ್ಟೋಬರ್ 28 ರಂದು ಆಂಗ್ಲ ಭಾಷಾ ಶಿಕ್ಷಕರಾಗಿ ಭಡ್ತಿ ಪಡೆದು ಭಟ್ಕಳ ತಾಲೂಕಿನ ಬೆಳಕೆ ಪ್ರೌಢಶಾಲೆಯಲ್ಲಿ ಸೇವೆ ಆರಂಭಿಸಿ,ಪ್ರೌಢಶಾಲಾ ಶಿಕ್ಷಕರಾಗಿ ಹದಿನೈದು ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಜಾಲಿ ಪ್ರೌಢಶಾಲೆಯಲ್ಲಿ ಸೇವೆಸಲ್ಲಿಸುತ್ತಿದ್ದು,ಒಟ್ಟು 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ:
ಆ0ಗ್ಲ ಭಾಷಾ ಶಿಕ್ಷಕರಾಗಿರುವ ಇವರು ನಿರಂತರ ಎಂಟು ವರ್ಷಗಳಿಂದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸುತ್ತಾ ಬಂದಿದ್ದಾರೆ.ಇವರ ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯದಲ್ಲಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಸರಾಸರಿ ಅಂಕ ಗಳಿಸುವ ಹಾಗೆ ಬೋಧಿಸಿರುವುದಕ್ಕಾಗಿ ಎರಡು ಬಾರಿ ಧಾರವಾಡದ ಡಾ.ಎಚ್.ಎಫ್.ಕಟ್ಟೀಮನಿ ಪ್ರತಿಷ್ಠಾನದ ‘ಶಿಕ್ಷಕ ಪರಿಶ್ರಮ ಹಿರಿಮೆಗೆ ಗೌರವ’ ಪ್ರಶಸ್ತಿಯಿಂದ ಪುರಸ್ಕರಿಸಲ್ಪಟ್ಟಿದ್ದಾರೆ.
ಸಂಪನ್ಮೂಲ ವ್ಯಕ್ತಿಯಾಗಿ ಜನಪ್ರಿಯತೆ :
ಡಿ ಎಸ್ ಇ ಆರ್ ಟಿ ವತಿಯಿಂದ ‘ಚೈತನ್ಯ ತರಣಿ’ -ಬೋಧನೋಪಕರಣಗಳ ತರಬೇತಿಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಬೀದರ್, ಬಳ್ಳಾರಿ, ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲೆಗಳ ಶಿಕ್ಷಕರಿಗೆ ಟಿ.ಎಲ್.ಎಂ ತರಬೇತಿಯನ್ನು ಯಶಸ್ವಿಯಾಗಿ ನೀಡಿದ್ದಾರೆ.ಶಿಕ್ಷಣದಲ್ಲಿ ರಂಗಕಲೆ, ಚಿಣ್ಣರ ಮೇಳ,ಕಲಿಕಾ ಚೇತರಿಕೆ ಮತ್ತು ಕ್ರಿಯಾ ಸಂಶೋಧನೆ ತರಬೇತಿಗಳ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಸಂತಸದಾಯಕ ಕಲಿಕೆಯ ತರಬೇತಿ ನೀಡಿದ್ದಾರೆ.
ಇಂಗ್ಲಿಷ್ ವಿಷಯದ ಮತ್ತು ವಿಶ್ವಾಸ ಕಿರಣ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ, ಬ್ಲಾಕ್ ರಿಸೋರ್ಸ್ ಟೀಂನ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ್ದಾರೆ.ಹಲವು ವರ್ಷಗಳಿಂದ ಭಟ್ಕಳ ತಾಲೂಕಿನ ಲೋಕಸಭೆ ಮತ್ತು ವಿಧಾನಸಭೆಯ ಮಾಸ್ಟರ್ ಟ್ರೇನರ್ ಆಗಿ ಚುನಾವಣಾ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಿದ್ದಾರೆ.ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ನಿರ್ಣಾಯಕನಾಗಿ,ನಿಧಾನ ಕಲಿಕೆಯ ವಿದ್ಯಾರ್ಥಿಗಳ ಸಂಪನ್ಮೂಲ ವ್ಯಕ್ತಿಯಾಗಿ ಹೀಗೆ ಹಲವು ವಿಭಿನ್ನ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಶಿಕ್ಷಣ ಇಲಾಖೆಯ ಸಹಪಠ್ಯ ಚಟುವಟಿಕೆ ಸ್ಪರ್ಧೆಯಾದ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಪ್ರಥಮ ಬಹುಮಾನಗಳನ್ನು ಗಳಿಸಿದ್ದಾರೆ.ಇವರ ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಮೆಚ್ಚಿ ಭಟ್ಕಳದ ಅರ್ಬನ್ ಬ್ಯಾಂಕ್ 'ಉತ್ತಮ ಶಿಕ್ಷಕ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ.
ಅತ್ಯುತ್ತಮ ಕಾರ್ಯಕ್ರಮ ನಿರೂಪಕ:
ಭಟ್ಕಳ ತಾಲೂಕಿನಲ್ಲಿ ನಡೆಯುವ ತಾಲೂಕು,ಜಿಲ್ಲೆ,ವಿಭಾಗ,ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾವಿರಾರು ಕಾರ್ಯಕ್ರಮಗಳ ಕಾರ್ಯಕ್ರಮ ನಿರೂಪಣೆಯನ್ನು ತಮ್ಮ ವಿಭಿನ್ನ, ವಿಶಿಷ್ಟ ಮತ್ತು ವಿನೂತನವಾದ ಶೈಲಿಯಿಂದ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿರುತ್ತಾರೆ.ಅದಕ್ಕಾಗಿ ತಾಲೂಕ ಆಡಳಿತ ಇವರಿಗೆ 'ಅತ್ಯುತ್ತಮ ಕಾರ್ಯಕ್ರಮ ನಿರೂಪಕ ಪ್ರಶಸ್ತಿ' ನೀಡಿ ಗೌರವಿಸಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ:
ಹಸಿವು ಸಾಯುವುದಿಲ್ಲ, ಬೇಲಿಯ ಹೂವು, ಬೆರಳ ಸಂಧಿಯಿAದ, ಕಾವ್ಯ ಜ್ಯೋತಿ ಇತ್ಯಾದಿ ಕವನ ಸಂಕಲಗಳು ಸೇರಿದಂತೆ ಒಟ್ಟು ಏಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಭಟ್ಕಳ ತಾಲೂಕಿನ ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಬನವಾಸಿಯಲ್ಲಿ ನಡೆದ ರಾಜ್ಯಮಟ್ಟದ ಕದಂಬೋತ್ಸವ ಕವಿಗೋಷ್ಠಿ ಹಾಗೂ ರಾಜ್ಯಮಟ್ಟದ ಇನ್ನಿತರ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿ ಸನ್ಮಾನಿಸಲ್ಪಟ್ಟಿದ್ದಾರೆ. ಇವರ 'ಬೇಲಿಯ ಹೂವು' ಎಂಬ ಪ್ರಖ್ಯಾತ ಮಕ್ಕಳ ಕವನವು NCERT ಯ ಐದನೇ ತರಗತಿಯ "ಕನ್ನಡ ಚಂದನ" ಪಠ್ಯಪುಸ್ತಕದಲ್ಲಿ ಪ್ರಕಟಿತವಾಗಿ ಅಪಾರ ಜನ ಮೆಚ್ಚುಗೆ ಗಳಿಸಿದೆ.ರಾಜ್ಯ ಮತ್ತು ಜಿಲ್ಲಾ ಮಟ್ಟದ ಅನೇಕ ಪತ್ರಿಕೆಗಳಲ್ಲಿ ಹಾಗೂ ಶಿಕ್ಷಣ ಇಲಾಖೆಯ "ಶಿಕ್ಷಣ ವಾರ್ತೆ " ಪತ್ರಿಕೆಯಲ್ಲಿ ಹಲವು ಲೇಖನಗಳು ಮತ್ತು ನೂರಾರು ಕವನಗಳು ಪ್ರಕಟವಾಗಿವೆ. ಇವರು 'ಕರಾವಳಿ ಪ್ರಭ' ಪತ್ರಿಕೆಯಲ್ಲಿ ಬರೆಯುತ್ತಿರುವ ವ್ಯಕ್ತಿತ್ವ ವಿಕಸನ ಲೇಖನಗಳ "ಕಾವ್ಯ ಜ್ಯೋತಿ" ಎಂಬ ಅಂಕಣ ಜನಪ್ರಿಯತೆ ಗಳಿಸಿದೆ.ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಭಟ್ಕಳ ತಾಲೂಕ ಆಡಳಿತವು 'ರಾಜ್ಯೋತ್ಸವ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ.ತಮ್ಮ ಕವನಗಳಿಗಾಗಿ ಎರಡು ಬಾರಿ ರಾಜ್ಯಮಟ್ಟದ 'ಸಂಕ್ರಮಣ ಕಾವ್ಯ ಪ್ರಶಸ್ತಿ'ಯಿಂದ ಪುರಸ್ಕರಿಸಲ್ಪಟ್ಟಿದ್ದಾರೆ. ಭಟ್ಕಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಎರಡು ಅವಧಿ,ಕೋಶಾಧ್ಯಕ್ಷರಾಗಿ ಎರಡು ಅವಧಿ ಸೇವೆ ಸಲ್ಲಿಸಿ ಹಲವು ಸಾಹಿತ್ಯ ಸಮ್ಮೇಳನಗಳನ್ನು ಮತ್ತು ನೂರಾರು ಸಾಹಿತ್ಯಕ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ.
ಅತ್ಯುತ್ತಮ ಚಿತ್ರಕಲಾವಿದ :
ಅತ್ಯುತ್ತಮ ಚಿತ್ರಕಲಾವಿದರಾಗಿರುವ ಶ್ರೀಧರ ಶೇಟ್ ರವರು ವ್ಯಂಗ್ಯ ಚಿತ್ರಕಾರರಾಗಿಯೂ ಜನಪ್ರಿಯತೆ ಗಳಿಸಿದ್ದಾರೆ. ಜಲವರ್ಣದಲ್ಲಿ ಪಳಗಿರುವ ಅವರು ಹಲವಾರು ಕಲಾಕೃತಿಗಳನ್ನು ರಚಿಸಿದ್ದು, ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರದರ್ಶನಗೊಂಡಿವೆ. ಇವರ ವ್ಯಂಗ್ಯಚಿತ್ರಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಮತ್ತು ಭಟ್ಕಳದ ಪ್ರಥಮ ದಿನ ಪತ್ರಿಕೆ ‘ಭಟ್ಕಳ ಡೈರಿ’ ಮತ್ತು ”ಕರಾವಳಿ ಪ್ರಭ’ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟಗೊಂಡಿವೆ. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಕಾರ್ಯಕ್ರಮ: ಕಾರವಾರ ಆಕಾಶವಾಣಿ ಮತ್ತು ಬೆಂಗಳೂರು ದೂರದರ್ಶನದಲ್ಲಿ ಶೈಕ್ಷಣಿಕ ಹಾಗೂ ಸಾಹಿತ್ಯಕ ಕ್ಷೇತ್ರಗಳಿಗೆ ಸಂಬAಧಿಸಿದAತೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕಾರವಾರ ಆಕಾಶವಾಣಿ ಇವರ ಸಂದರ್ಶನವನ್ನು ಬಿತ್ತರಿಸಿದೆ. ‘ಉದಯ ಟಿವಿ’ಯ ಆದರ್ಶ ದಂಪತಿಗಳು ಕಾರ್ಯಕ್ರಮದಲ್ಲಿ ತಮ್ಮ ಸಮಯೋಚಿತ ಕ್ರಿಯಾಶೀಲತೆಯಿಂದಾಗಿ ಪ್ರಥಮ ಬಹುಮಾನ ಗಳಿಸಿದ್ದಾರೆ.
ಅತ್ಯುತ್ತಮ ವಾಗ್ಮಿ, ಭಾಷಣಕಾರ :
ಇವರು ಅತ್ಯುತ್ತಮ ವಾಗ್ಮಿಯೆಂದು ಗುರುತಿಸಲ್ಪಟ್ಟು, ಶೈಕ್ಷಣಿಕ, ಸಾಹಿತ್ಯಕ,ವ್ಯಕ್ತಿತ್ವ ವಿಕಸನ ಮತ್ತು ಸಾಂಸ್ಕೃತಿಕ ವಿಷಯಗಳ ಮೇಲೆ ನಿರರ್ಗಳವಾಗಿ ಮಾತನಾಡಬಲ್ಲರು. ಬೆಂಗಳೂರು, ದಾವಣಗೆರೆ, ಮಂಗಳೂರು, ಉಡುಪಿ, ಸಿರ್ಶಿ, ಬೈಂದೂರು, ಹೊನ್ನಾವರ, ಭಟ್ಕಳ ಮುಂತಾದ ಊರುಗಳಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ,ಸಾಹಿತ್ಯ ಸಮ್ಮೇಳನಗಳಲ್ಲಿ ಉದ್ಘಾಟಕನಾಗಿ, ಮುಖ್ಯ ಅತಿಥಿಯಾಗಿ ಆಮಂತ್ರಿಸಲ್ಪಟ್ಟಿದ್ದಾರೆ.
30 ವರ್ಷಗಳ ಹಿಂದೆಯೇ ನಾಲ್ಕನೇ ತರಗತಿಯಿಂದ ಇಂಗ್ಲೀಷ್ ಬೋಧನೆ ಪ್ರಾರಂಭಿಸಿದ ಶಿಕ್ಷಕ:ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಿಂದ ಇಂಗ್ಲಿಷ್ ಬೋಧನೆಯನ್ನು ಪ್ರಾರಂಭಿಸಿದೆ.ಆದರೆ ಇವರು ಸಿದ್ದಾಪುರ ತಾಲೂಕಿನ ಶಿರೂರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾಗ ನಾಲ್ಕನೇ ತರಗತಿಯಿಂದಲೇ ಇಂಗ್ಲೀಷ್ ಬೋಧನೆಯನ್ನು ಪ್ರಾರಂಭಿಸಿದ್ದರು.ಕಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಪ್ರತಿವರ್ಷ ವಾರ್ಷಿಕೋತ್ಸವವನ್ನು ಆಚರಿಸಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತರಲು ಶ್ರಮಿಸಿದ್ದನ್ನು ಊರಿನವರು ಇನ್ನೂ ಜ್ಞಾಪಿಸಿಕೊಳ್ಳುತ್ತಿದ್ದಾರೆ.ರಸ್ತೆ,ವಿದ್ಯುತ್, ಶೌಚಾಲಯಗಳು ಇಲ್ಲದ ತೀರಾ ಹಿಂದುಳಿದ ಊರಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಅಲ್ಲಿಯ ಯುವಕರನ್ನು ಸಂಘಟಿಸಿ, ಯುವಕ ಸಂಘಗಳನ್ನು ಕಟ್ಟಿ,ಅವರ ಪ್ರತಿಭೆ ಮತ್ತು ಕೌಶಲ್ಯವನ್ನು ಹೊರ ತರಲು ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.
ಕಾರ್ಯಕ್ರಮ ಸಂಘಟಕ:
ಶಿರಾಲಿಯ ಗುರು ನಮನ ಬಳಗದ ಅಧ್ಯಕ್ಷರಾಗಿ ತಮಗೆ ಪ್ರೌಢಶಾಲೆಯಲ್ಲಿ ಕಲಿಸಿದ ಶಿಕ್ಷಕರ ನೆನಪಿನಲ್ಲಿ ಪ್ರತಿ ವರ್ಷ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದಾರೆ.ಕಲಾಸಿರಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸುವುದರ ಜೊತೆಗೆ ಸಾಧಕರನ್ನು ಗುರುತಿಸಿ ‘ಕಲಾಸಿರಿ’ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.ಆರು ವರ್ಷಗಳ ಕಾಲ ಭಟ್ಕಳ ತಾಲೂಕಿನ ಪ್ರೌಢಶಾಲಾ ಇಂಗ್ಲಿಷ್ ಭಾಷಾ ಶಿಕ್ಷಕರ ಕ್ಲಬ್ಬಿನ ಅಧ್ಯಕ್ಷರಾಗಿ ಹಲವು ಕಾರ್ಯಾಗಾರಗಳನ್ನು ಸಂಘಟಿಸಿದ್ದಾರೆ.
ಇತರೆ ಸನ್ಮಾನ ಮತ್ತು ಗೌರವ:
ರಾಜ್ಯಮಟ್ಟದ “ಸತ್ಸಂಗ ರತ್ನ” ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದಾರೆ. ಭಟ್ಕಳದ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಿಂದ “ಉತ್ತಮ ಶಿಕ್ಷಕ ಪ್ರಶಸ್ತಿ” ನೀಡಿ ಸನ್ಮಾನಿಸಲ್ಪಟ್ಟಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ,ಯುವಜನ ಸೇವಾ ಇಲಾಖೆ, ಬೆಂಗಳೂರು ದೈವಜ್ಞ ಯುವಕ ಮಂಡಳಿ, ಶಿರಸಿ ಸುವರ್ಣಕಾರರ ಸಂಘ, ಮಂಗಳೂರು ಚಿನ್ನ ಬೆಳ್ಳಿ ಕೆಲಸಗಾರರ ಸಂಘ, ಮಂಗಳೂರು ದೈವಜ್ಞ ಬ್ರಾಹ್ಮಣ ಸಂಘ, ದಾವಣಗೆರೆ ದೈವಜ್ಞ ಯುವಕ ಮಂಡಳಿ, ದೈವಜ್ಞ ಮಠ ಶ್ರೀಕ್ಷೇತ್ರ ಕರ್ಕಿ, ದಾವಣಗೆರೆಯ ಶ್ರೀಮತಿ ಪ್ರೇಮಾ ಅರುಣಾಚಲ ಎನ್.ರೇವಣಕರ್ ಪ್ರತಿಷ್ಠಾನ,ಶಿರಾಲಿಯ ಗ್ರಾಮ ಪಂಚಾಯತ…ಹೀಗೆ ನೂರಾರು ಸಂಘಟನೆಗಳು ಶ್ರೀ ಶ್ರೀಧರ ಶೇಟ್ ಶಿರಾಲಿಯವರನ್ನು ಸನ್ಮಾನಿಸಿ ಗೌರವಿಸಿವೆ.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುವ ಶ್ರೀಧರ ಶೇಟ್ ರವರಿಗೆ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ಎನ್ ವಾಸರೆ, ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಕಾರ್ಯದರ್ಶಿ ಪಿ. ಆರ್. ನಾಯ್ಕ, ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಲತಾ ನಾಯಕ,
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ,ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀಮತಿ ಪೂರ್ಣಿಮಾ ಮೊಗೇರ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್.ನಾಯ್ಕ,ಕಾರ್ಯದರ್ಶಿ ವೆಂಕಟೇಶ ನಾಯ್ಕ,ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ನಾಯಕ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ,ಜಾಲಿ ಪ್ರೌಢಶಾಲೆಯ ಶಿಕ್ಷಕ ವೃಂದ, ಎಸ್ ಡಿ ಎಂ ಸಿ ಅಧ್ಯಕ್ಷರು ಪದಾಧಿಕಾರಿಗಳು ಇನ್ನಿತರ ಹಲವಾರು ಸಂಘ ಸಂಸ್ಥೆಗಳ ಮುಖ್ಯಸ್ಥರು ಅಭಿನಂದಿಸಿದ್ದಾರೆ.
More Stories
“ವಿಶ್ವ ಜನಸಂಖ್ಯಾ ದಿನಾಚರಣೆ” ಮತ್ತು “ವಿಶ್ವ ಸ್ಕಿಜೋಪ್ರೇನಿಯಾ ದಿನ” ದ ಜನಜಾಗೃತಿ ಕಾರ್ಯಕ್ರಮ
ಶ್ರೀ ಭಾರತಿ ಕವಲಕ್ಕಿ ಯ ವಿದ್ಯಾರ್ಥಿಯ ಸಾಧನೆ
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆರ್ ಎನ್ ಎಸ್ ಸಾಧನೆ