December 22, 2025

ನೆಲ್ಲಿಕೇರಿ ಹೈಸ್ಕೂಲಿನಲ್ಲಿ ಕನ್ನಡ ಭಾಷಾ ಕಾರ್ಯಾಗಾರ

ಕುಮಟಾ:ಕರ್ನಾಟಕ ಪಬ್ಲಿಕ್ ಸ್ಕೂಲ್, ನೆಲ್ಲಿಕೇರಿ–ಕುಮಟಾ ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ನೇತೃತ್ವದಲ್ಲಿ ಪ್ರಥಮ ಭಾಷೆ ಕನ್ನಡ ವಿಷಯದ ತಾಲೂಕಾ ಮಟ್ಟದ ಕಾರ್ಯಾಗಾರವು ಕೆ.ಪಿ ಎಸ್ ನೆಲ್ಲಿಕೇರಿಯಲ್ಲಿ ಜರುಗಿತು.


ಕಾರ್ಯಕ್ರಮಕ್ಕೆ ಆಗಮಿಸಿದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಉದಯ ನಾಯ್ಕ ಅವರು “ಕಾರ್ಯಾಗಾರದ ಸದುದ್ದೇಶವನ್ನು ವಿವರಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.


ಕಾರ್ಯಾಗಾರವನ್ನು ಕುಮಟಾ ತಾಲೂಕ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪಾಂಡುರಂಗ ವಾಗ್ರೇಕರ್ ಅವರು ಉದ್ಘಾಟಿಸಿ, ಕನ್ನಡ ಭಾಷೆಯ ಬೋಧನೆಯಲ್ಲಿ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.


ವೇದಿಕೆಯಲ್ಲಿ ಕನ್ನಡ ಸಂಘದ ಉಪಾಧ್ಯಕ್ಷರಾದ ಊರಕೇರಿ ಹೈಸ್ಕೂಲ್ ಮುಖ್ಯಾಧ್ಯಾಪಕರಾದ ಎಸ್.ಜಿ. ಭಟ್ಟ, ನೆಲ್ಲಿಕೇರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಟಿ.ಎನ್. ಗೌಡ ಹಾಗೂ ಕನ್ನಡ ಸಂಘದ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಕುಮಟಾಕರ್ ಉಪಸ್ಥಿತರಿದ್ದರು.


ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ನಿತ್ಯಾನಂದ ಭಂಡಾರಿ (ತದಡಿ–ಬೇಲಿಗದ್ದೆ ಹೈಸ್ಕೂಲ್) ಮತ್ತು ಶ್ರೀಮತಿ ಗೀತಾ ಪಟಗಾರ (ಅಘನಾಶಿನಿ ಪ್ರೌಢಶಾಲೆ, ಕುಮಟಾ) ಇವರುಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಪಡಿಸುವ ಉದ್ದೇಶದ “ ಮಿಷನ್–50” ಯೋಜನೆಯನ್ನು ಪವರ್ ಪಾಯಿಂಟ್ ಮೂಲಕ ವಿವರಿಸಿದರು.


ಕುಮಟಾ ತಾಲೂಕಿನ ವಿವಿಧ ಪ್ರೌಢಶಾಲೆಗಳ ಪ್ರಥಮ ಭಾಷೆ ಕನ್ನಡ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು. ಕಾರ್ಯಾಗಾರದ ನೋಡಲ್ ಅಧಿಕಾರಿಗಳಾದ ಇಸಿಓ ಶ್ರೀಮತಿ ದೀಪ ಕಾಮತ್ ಉಪಸ್ಥಿತರಿದ್ದರು. ಶ್ರೀಮತಿ ಗೀತಾ ಪಟಗಾರ ವಂದಿಸಿದರು.

…… ವರದಿ: ಎನ್ ರಾಮು ಹಿರೇಗುತ್ತಿ

About The Author

error: Content is protected !!